Kannada NewsKarnataka News

ವಿಶ್ವ ವಿದ್ಯಾಲಯ ಸ್ಥಾಪನೆಗೆ ಸರ್ವಾನುಮತದ ಬೆಂಬಲ

 ಪ್ರಗತಿವಾಹಿನಿ ಸುದ್ದಿ, ಹಿರೇಬಾಗೇವಾಡಿ – ಜಿಲ್ಲಾಧಿಕಾರಿಯವರ ಆದೇಶದ ಪ್ರಕಾರ ಹಿರೇಬಾಗೇವಾಡಿಯ ಗುಡ್ಡದ ಮಲ್ಲಪ್ಪನ ದೇವಸ್ಥಾನ  ಬಳಿ ಇರುವ ಸರ್ಕಾರದ ಜಮೀನಿನಲ್ಲಿ  ರಾಣಿ ಚೆನ್ನಮ್ಮ ವಿಶ್ವ ವಿದ್ಯಾಲಯವನ್ನು ಸ್ಥಾಪಿಸುವ ವಿಷಯ ಕುರಿತು ಚರ್ಚಿಸಲು ಗುರುವಾರ ಲಕ್ಷ್ಮೀ ದೇವಿ ಮಂದಿರದಲ್ಲಿ ಸಾರ್ವಜನಿಕರು, ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಎಲ್ಲ ಸದಸ್ಯರು, ಗ್ರಾಮದ ಮುಖಂಡರು ಸಭೆ ಸೇರಿದ್ದರು.
ಸಭೆಯಲ್ಲಿ ಚೆನ್ನಮ್ಮ ವಿ.ವಿ ಹೋರಾಟ ಸಂಚಾಲಕ ಮಂಜುನಾಥ ವಸ್ತ್ರದ ಮಾತನಾಡಿ, ಆರ್.ಸಿಯು ಸ್ಥಾಪನೆಯಿಂದ ಈ ಭಾಗದ ಶೈಕ್ಷಣಿಕ, ಆರ್ಥಿಕ ಮತ್ತು ಔದ್ಯೋಗಿಕ ಅಭಿವೃದ್ದಿಗೆ ಸಹಕಾರಿಯಾಗಲಿದೆ, ಈ ನಿಟ್ಟಿನಲ್ಲಿ ರೈತಾಪಿ ವರ್ಗದವರು ಸ್ವಯಂ ಪ್ರೇರಣೆಯಿಂದ ಭೂಮಿಯನ್ನು ಕೊಡುವುದಾಗಿ ಹೇಳಿದ್ದು ಸ್ವಾಗತಾರ್ಹ ಎಂದರು. ನಾವೆಲ್ಲರೂ ಮುಕ್ತ ಮನಸ್ಸಿನಿಂದ ಪಕ್ಷಾತೀತವಾಗಿ ಸಹಕಾರ ನೀಡಿ ಈ ಭಾಗದ ಶಿಕ್ಷಣ ಪ್ರೇಮಿಗಳ ಆಸೆ ಈಡೇರಿಸೋಣ ಎಂದರು.
 ಸಿದ್ಧಾರೂಢ ಹೊನ್ನಣ್ಣವರ ಮಾತನಾಡಿ, ಯುಜಿಸಿ ನಿಯಮಾವಳಿ ಪ್ರಕಾರ ನಮ್ಮ ಗ್ರಾಮಕ್ಕೆ ಆರ್.ಸಿ.ಯು ಬರುವುದು ಸಂತಸ ವಿಷಯ. ಇದರಿಂದ ಗ್ರಾಮಕ್ಕೆ ಮತ್ತು ಮುಂದಿನ ಪೀಳಿಗೆಗೆ ಅನುಕೂಲವಾಗುವುದು. ಈ ವಿಶ್ವ ವಿದ್ಯಾಲಯದ ಸ್ಥಾಪನೆಗೆ ಅವಕಾಶ ಕಲ್ಪಿಸಿ ಕೊಡೋಣ ಎಂದರು.
ಶ್ರೀಶೈಲ ಪಡಗಲ್ ಮಾತನಾಡಿ, ವಿಶ್ವ ವಿದ್ಯಾಲಯವನ್ನು ಸ್ಥಾಪಿಸುವುದರಿಂದ ನಮ್ಮೂರು ಇನ್ನಷ್ಟು ಅಭಿವೃದ್ದಿಯಾಗುವುದು, ಕಾರಣ ಎಲ್ಲ ಗ್ರಾಮ ಪಂಚಾಯ್ತಿ ಸದಸ್ಯರು ಒಮ್ಮತದ ನಿರ್ಧಾರ ಕೈಗೊಂಡು ಆರ್.ಸಿ.ಯು ನಿರ್ಮಾಣವಾಗುವಂತೆ ಠರಾವು ಕೈಗೊಳ್ಳಲು ವಿನಂತಿಸಿದರು.
 ಹಿರಿಯ ವಕೀಲ ಆರ್.ಎನ್.ಪಾಟೀಲ ಮಾತನಾಡಿ, ಇದು ಬಯಸದೆ ಬಂದ ಭಾಗ್ಯ. ಎಲ್ಲರೂ ಒಗ್ಗಟ್ಟಾಗಿ ವಿಶ್ವ ವಿದ್ಯಾಲಯ ಸ್ಥಾಪನೆಗೆ ಬೇಕಾದ ಕ್ರಮಗಳನ್ನು ಕೈಗೊಳ್ಳೋಣ ಎಂದರು. ಸಮೀಪದಲ್ಲಿಯೇ ಸುವರ್ಣ ಸೌಧ ಇದ್ದು, ರೇಲ್ವೇ ಟ್ರ್ಯಾಕ್ ಕೂಡ ಪ್ರಾರಂಭವಾಗುವುದಿದೆ. ಇವೆಲ್ಲ ನಮ್ಮೂರಿಗೆ ಒಂದು ಹಿರಿಮೆಯಾಗುವುದು ಎಂದರು.
ಸಮಾಜ ಸೇವಕ ಬಾಪು ನಾವಲಗಟ್ಟಿ, ಬಿ.ಎಸ್.ಗಾಣಗಿ, ಗ್ರಾಮ ಪಂಚಾಯ್ತಿತಿ ಸದಸ್ಯ ಸುರೇಶ ಇಟಗಿ, ಗ್ರಾಮಸ್ಥರಾದ ವಿಜಯ ಮಠಪತಿ, ಶ್ರೀಕಾಂತ ಮಾಧುಭರಮಣ್ಣವರ, ಮಂಜುನಾಥ ಧರೆಣ್ಣವರ, ವಿಜಯ ಮಠಪತಿ, ನಿವೃತ್ತ ಶಿಕ್ಷಕ ಬಿ.ಆರ್.ನರಸಣ್ಣವರ ಮಾತನಾಡಿದರು.
 ಇದೇ ಸಂದರ್ಭದಲ್ಲಿ ಗ್ರಾಮಸ್ಥರು ಗ್ರಾಮ ಪಂಚಾಯತಿ ಅಧ್ಯಕ್ಷೆ ಕಲಾವತಿ ಧರೆಣ್ಣವರ ಅವರಿಗೆ  ಗ್ರಾಮದಲ್ಲಿ ಆರ್.ಸಿ.ಯು ಸ್ಥಾಪನೆಯಾಗಲಿ ಎಂದು ಮನವಿ ಸಲ್ಲಿಸಿದರು.  ಮನವಿ ಸ್ವೀಕರಿಸಿದ ಅವರು  ನಂತರ ಗ್ರಾಮ ಪಂಚಾಯ್ತಿ ಆಡಳಿತ ಮಂಡಳಿ ಸಭೆಯಲ್ಲಿ ಗುಡ್ಡದ ಮಲ್ಲಪ್ಪನ ದೇವಸ್ಥಾನಕ್ಕೆ 10 ಎಕರೆ ಜಮೀನು ಬಿಟ್ಟು ಉಳಿದ ಸರ್ಕಾರಿ ಜಮೀನನ್ನು ಆರ್.ಸಿ.ಯು ನಿರ್ಮಾಣಕ್ಕೆ ಕೊಡುವುದಾಗಿ ಸರ್ವಾನುಮತದಿಂದ ಠರಾವು ಪಾಸು ಮಾಡಲಾಯಿತು.
ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಕಲಾವತಿ ದರೆಣ್ಣವರ, ಉಪಾಧ್ಯಕ್ಷೆ ಹಸೀನಾಬಾನು ಮದರಂಗಿ ಹಾಗೂ ಗ್ರಾಮ ಪಂಚಾಯತಿ ಸರ್ವ ಸದಸ್ಯರು, ಗ್ರಾಮಸ್ಥರು ರಾಜು ಹಂಚಿನಮನಿ, ಯಾಕುಬ್ ದೇವಲಾಪೂರ, ಯಲ್ಲಪ್ಪ ದರೆಣ್ಣವರ,  ಎನ್.ಎಸ್.ಪಾಟೀಲ, ಶಂಕರ ಸೋನಪ್ಪನ್ನವರ, ಆನಂದ ಪಾಟೀಲ,(ಪೋಲೇಸಿ) ಉಳವಪ್ಪ ನಂದಿ, ನಾಗರಾಜ ಶೀಂತ್ರಿ, ಬಸವರಾಜ ಹಂಚಿನಮನಿ, ಶಂಕರ ಶಿಂತ್ರಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಊರಿನ ಪ್ರಮುಖರು ಹಾಗೂ ಶಿಕ್ಷಣ ಪ್ರೇಮಿಗಳು  ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button