ಪ್ರಗತಿವಾಹಿನಿ ಸುದ್ದಿ: ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದಲ್ಲೂ ಹಗರಣ ನಡೆದಿದೆ ಎನ್ನಲಾಗಿದ್ದು, ಬಿಜೆಪಿ ವಿಧಾನ ಪರಿಷತ್ ಸದಸ್ಯ ಸುನೀಲ್ ವಲ್ಯಾಪುರೆ ಅವರ ಮನೆಯ ಮೇಲೆ ಸಿಐಡಿ ಅಧಿಕಾರಿಗಳ ತಂಡ ದಾಳಿ ನಡೆಸಿದೆ.
ಸುನೀಲ್ ವಲ್ಯಾಪುರೆ ಅವರ ಪುತ್ರ ವಿನಯ್ ವಲ್ಯಾಪುರೆ 2022ರಲ್ಲಿ ಭೋವಿ ನಿಗಮದ 12 ಕೋಟಿ ರೂ. ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಅಲ್ಲದೆ 2022 ರಲ್ಲಿ ನಿಗಮದ ನಾನಾ ಯೋಜನೆಗಳಿಗೆ ನಕಲಿ ಫಲಾನುಭವಿಗಳನ್ನು ಸೃಷ್ಟಿಸಿ ನಿಗಮದ ಹಣವನ್ನು ವಿನಯ್ ತಮ್ಮ ಒಡೆತನದ ಸೋಮನಾಥೇಶ್ವರ ಎಂಟರ್ಪ್ರೈಸಸ್‌ಗೆ ವರ್ಗಾವಣೆ ಮಾಡಿಕೊಂಡಿದ್ದಾರೆ ಎಂದು ದೂರು ದಾಖಲಾಗಿತ್ತು. ಈ ಪ್ರಕರಣದ ಹಿನ್ನಲೆ ಕಲಬುರಗಿ ನಗರದ ಸಂತೋಷ ಕಾಲೊನಿಯಲ್ಲಿರುವ ಸುನೀಲ್ ವಲ್ಯಾಪುರೆ ಅವರ ಮನೆಯ ಮೇಲೆ ಸಿಐಡಿ ಅಧಿಕಾರಿಗಳ ತಂಡ ದಾಖಲಾತಿಗಳನ್ನು ಶೋಧಿಸಿತು.
ನ್ಯಾಯಾಲಯದ ಸರ್ಚ್ ವಾರಂಟ್‌ನೊಂದಿಗೆ ಆಗಮಿಸಿದ ಸಿಐಡಿ ಡಿಎಸ್‌ಪಿ ಅಸ್ಲಂ ಬಾಷಾ ಹಾಗೂ ನಾಲ್ವರು ಸಿಬ್ಬಂದಿಯಿದ್ದ ತಂಡ ಪರಿಶೀಲನೆ ನಡೆಸಿದೆ. ಹಲವು ದಾಖಲೆಗಳು ಹಾಗೂ ಮನೆಯಲ್ಲಿದ್ದ ಕಂಪ್ಯೂಟರ್ ಸೇರಿ ಡಿಜಿಟಲ್ ದಾಖಲೆಗಳನ್ನು ಪರಿಶೀಲಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ