Belagavi NewsBelgaum NewsKarnataka News

*ಪಂಚ ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಎಲ್ಲರೂ ಕೈ ಜೋಡಿಸಿ: ಎಸ್. ಆರ್ ಪಾಟೀಲ*

ಪ್ರಗತಿವಾಹಿನಿ ಸುದ್ದಿ: ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮೀ, ಗೃಹಜ್ಯೋತಿ, ಶಕ್ತಿ, ಅನ್ನಭಾಗ್ಯ ಹಾಗೂ ಯುವನಿಧಿ ಯೋಜನೆಗಳನ್ನು ಜಿಲ್ಲೆಯಲ್ಲಿ ಸಮರ್ಪಕ ಅನುಷ್ಠಾನಗೊಳಿಸಬೇಕು. ಸರ್ಕಾರದಿಂದ ಯಾವುದೇ ಫಲಾನುಭವಿಗಳು ವಂಚಿತರಾಗದಂತೆ ನಿಗಾವಹಿಸಿ ಪಂಚಗ್ಯಾರಂಟಿಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಎಲ್ಲ ಅಧಿಕಾರಿಗಳು, ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿ ಸದಸ್ಯರು ಕಾರ್ಯ ನಿರ್ವಹಿಸಬೇಕು ಎಂದು  ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಎಸ್.ಆರ್ ಪಾಟೀಲ  ಅವರು ತಿಳಿಸಿದರು.

ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ವತಿಯಿಂದ ಜಿಲ್ಲಾ ಪಂಚಾಯತ್ ಕಾರ್ಯಾಲಯದ ಎನ್.ಎಸ್. ಸಿ ಸಭಾಂಗಣದಲ್ಲಿ ಸೋಮವಾರ (ಅ.21) ನಡೆದ ಬೆಳಗಾವಿ “ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಸಮಿತಿ” ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬೆಳಗಾವಿ ಅತೀ ದೊಡ್ಡ ಜಿಲ್ಲೆಯಾಗಿದ್ದು, ಈಗಾಗಲೇ ಜಿಲ್ಲಾ ಮಟ್ಟದಲ್ಲಿ ಪಂಚ ಗ್ಯಾರಂಟಿ ಯೋಜನೆಗಳನ್ನು

ಸಮರ್ಪಕವಾಗಿ ಅನುಷ್ಠಾನಗೊಳಿಸಲು ಎಲ್ಲ ಅಧಿಕಾರಿಗಳು ಅನುಷ್ಠಾನ ಸಮಿತಿ ಸದಸ್ಯರು ನಿರಂತರ ಶ್ರಮಿಸಿದ್ದಾರೆ.

ಕೆಲವು ತಾಂತ್ರಿಕ ದೋಷಗಳನ್ನು ಸರಿ ಪಡಿಸಿ ಪಂಚ ಗ್ಯಾರಂಟಿ ಯೋಜನೆಗಳನ್ನು ಎಲ್ಲ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.

ರಾಯಬಾಗ ತಾಲೂಕಿನ ಒಬ್ಬ ಬಹಿಳೆ ಗ್ರಾಮಸ್ಥರಿಗೆ ಹೋಳಿಗೆ ಊಟ ಹಾಕಿಸಿದರು. ಗೋಕಾಕ್ ತಾಲೂಕಿನಲ್ಲಿ ಗೃಹ ಲಕ್ಷ್ಮೀ ಹಣದಿಂದ ಕೃಷಿ ಚಟುವಟಿಕೆಗಳಿಗೆ ತೊಡಗಿಕೊಳ್ಳಲು ಎತ್ತು ಖರೀದಿ ಮಾಡಿದ್ದಾರೆ. ಇದು ಗ್ಯಾರಂಟಿ ಯೋಜನೆಗಳ ಬಳಕೆಯ ಹೆಮ್ಮೆಯ ವಿಚಾರ ಎಂದರು.

ಸ್ಥಳೀಯ ಸಚಿವರು, ಜನಪ್ರತಿನಿಧಿಗಳ ಸಹಯೋಗದಲ್ಲಿ ಡಿಸೆಂಬರ್ ಮಾಹೆಯಲ್ಲಿ ಜರುಗಲಿರುವ ಚಳಿಗಾಲದ ಅಧಿವೇಶನ ಸಂದರ್ಭದಲ್ಲಿ ಜಿಲ್ಲೆಯ ಎಲ್ಲ ಫಲಾನುಭವಿಗಳ ಸಮಾವೇಶ ಮಾಡಲಾಗುವುದು. ಇದರಿಂದ ಗ್ಯಾರಂಟಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನದ ಕುರಿತು ಇಡೀ ರಾಜ್ಯ, ರಾಷ್ಟ್ರಕ್ಕೆ ಮಾದರಿ ಸಂದೇಶ ಸಿಗಲಿದೆ ಎಂದು ಹೇಳಿದರು.

ಅನ್ನಭಾಗ್ಯ ಯೋಜನೆಯಡಿ ಫಲಾನುಭವಿಗಳಿಗೆ ಯೋಜನೆ ಸರಿಯಾಗಿ ತಲುಪಬೇಕು. ಆಹಾರ ಇಲಾಖೆಯ ನಿರೀಕ್ಷರನ್ನು ಬಳಸಿಕೊಂಡು ಫಲಾನುಭವಿಗಳ ಆಧಾರ್ ನೋಂದಣಿಯ ತಾಂತ್ರಿಕ ದೋಷಗಳನ್ನು ತರಿಪಡಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು ಎಂದು ಆಹಾರ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಕಳೆದ 3 ತಿಂಗಳಿಂದ ಪಡಿತರ ಪಡೆಯದ ಫಲಾನುಭವಿಗಳನ್ನು ಪಟ್ಟಿ ಮಾಡಬೇಕು. ಎಪಿಎಲ್ ಮತ್ತು ಬಿಪಿಎಲ್ ಪಡಿತರ ಚೀಟಿ ಹೊಂದಿದವರು ಪಡಿತರ ಪಡೆಯದೆ ಇದ್ದಲ್ಲಿ ಅಂತವರನ್ನು ಪಟ್ಟಿ ಮಾಡಿ ಜಿಲ್ಲಾ ಸಮಿತಿಗೆ ವರದಿ ಸಲ್ಲಿಸಬೇಕು ಎಂದರು.

ಪಡಿತರ ಪಡೆಯಲು ಬಾರದ ಅಂಗವಿಕಲರ ಮನೆಗಳಿಗೆ ಓಟಿಪಿ ಆಧಾರಿತ ಪಡಿತರ ತಲುಪಿಸಬೇಕು. ಅತೀ ಬಡವರು, ಅನಾರೋಗ್ಯ ಪೀಡಿತರ ಹೊಂದಿದ ಮನೆ ಮನೆಗಳಿಗೆ ಪಡಿತರ ವಿತರಿಸಲು ಆಹಾರ ಇಲಾಖೆ ಕಾರ್ಯ ನಿರ್ವಹಿಸಬೇಕು. ಇದರಿಂದ ಯಾವುದೇ ಫಲಾನುಭವಿಗಳು ವಂಚಿತರಾಗುವುದಿಲ್ಲ ಎಂದು ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಎಸ್.ಆರ್ ಪಾಟೀಲ ಬ್ಯಾಡಗಿ ಹೇಳಿದರು.

ಜಿಲ್ಲೆಯಲ್ಲಿ ಗೃಹ ಬಳಕೆ ಅಂದಾಜು 10 ಲಕ್ಷ 34 ಸಾವಿರ ಜನರು 200 ಯುನಿಟ್ ಒಳಗಾಗಿ ವಿದ್ಯುತ್ ಬಳಕೆ ಮಾಡುತ್ತಿದ್ದಾರೆ. 

35 ಸಾವಿರ ಅರ್ಹ ಜನರು ಗೃಹಜ್ಯೋತಿ ಯೋಜನೆ ಬಳಕೆ ಮಾಡುತ್ತಿಲ್ಲ ಹಾಗಾಗಿ ಹಂತವರಿಗೆ ಇದರ ಕುರಿತು ಮಾಹಿತಿ ನೀಡಿ ನೋಂದಣಿ ಮಾಡಿಸಲಾಗುತ್ತಿದೆ ಎಂದು ಹೆಸ್ಕಾಂ ಅಧಿಕಾರಿಗಳು ವಿವರಿಸಿದರು.

ಪ್ರತಿ ತಿಂಗಳು ಸರಾಸರಿ 40 ಮಿಲಿಯನ್ ಯೂನಿಟ್ ಬಳಕೆ ಮಾಡಲಾಗುತ್ತಿದ್ದು, ಸುಮಾರ 38 ಕೋಟಿ ರೂಪಾಯಿ ಅಷ್ಟು ತಿಂಗಳಿಗೆ ಸರ್ಕಾರ ವೆಚ್ಚ ಭರಿಸುತ್ತಿದೆ. ಪ್ರತಿ ವರ್ಷಕ್ಕೆ ಸುಮಾರು 531 ಕೋಟಿ ರೂಪಾಯಿಗಳನ್ನು ಸರ್ಕಾರ ನೀಡುತ್ತಿದೆ ಎಂದು ಹೆಸ್ಕಾಂ ಅಧಿಕಾರಿಗಳು ಹೇಳಿದರು.

ಗೃಹಲಕ್ಷ್ಮೀ ಯೋಜನೆಯಡಿ ಅಂದಾಜು 10 ಲಕ್ಷ 77 ಸಾವಿರ ಜನರಿಗೆ ಪ್ರತಿ ಮಾಹೆ ಹಣ ಬಿಡುಗಡೆ ಮಾಡಲಾಗುತ್ತಿದೆ. ಈಗಾಗಲೇ ಗೃಹಲಕ್ಷ್ಮೀ ಹಣ ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸಬಲತೆ ಹೊಂದಿರುವ ಫಲಾನುಭವಿಗಳನ್ನು ಗುರುತಿಸಿ ಅಂತವರ ಕುರಿತು ಪ್ರಚಾರ ನೀಡಬೇಕು.

ಯುವ ನಿಧಿ ಯೋಜನೆಯಡಿ ಜಿಲ್ಲೆಯಲ್ಲಿ 11 ಲಕ್ಷ 30 ಸಾವಿರ ಪದವಿ, ಡಿಪ್ಲೋಮಾ ಪದವೀಧರರಿಗೆ ಡಿಬಿಟಿ ಮೂಲಕ ಹಣ ಸಂದಾಯ ಮಾಡಲಾಗಿದೆ. ಪ್ರತಿ ತಿಂಗಳು ದಿನಾಂಕ 5 ನೇ ತಾರೀಕು ಅವರಿಂದ ಡಿಕ್ಲೇರ್ ಪಡೆಯಲಾಗುತ್ತಿದೆ ಎಂದು ಹೇಳಿದರು.

ಶಕ್ತಿ ಯೋಜನೆಯಡಿ 3 ವಿಭಾಗಗಳಲ್ಲಿ 15 ಘಟಕಗಳಿವೆ. ಒಟ್ಟು 496 ದಿನಗಳಲ್ಲಿ ಮಹಿಳಾ ಪ್ರಯಾಣಿಕರು ಪ್ರತಿ ದಿನ 4 ಲಕ್ಷ 89 ಸಾವಿರ ಜನರು ಪ್ರಯಾಣಿಸುತ್ತಾರೆ. ಇದಕ್ಕೆ ಸರ್ಕಾರ 1 ಕೋಟಿ 15 ಲಕ್ಷ ವೆಚ್ಚ ಭರಿಸುತ್ತಿದೆ ಎಂದು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳು ವಿವರಿಸಿದರು.

ಬೆಳಗಾವಿ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಸಮಿತಿಯ ಅಧ್ಯಕ್ಷ ವಿನಯ ನಾವಲಗಟ್ಟಿ ಮಾತನಾಡಿ ಜಿಲ್ಲೆಯಲ್ಲಿ ಗೃಹಳಕ್ಷ್ಮೀ ಯೋಜನೆ ಬಳಕೆ ಮಾಡಿಕೊಂಡು ರಾಷ್ಟೀಯ ಮಟ್ಟದಲ್ಲಿ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ.  ಕೆಲವು ಫಲಾನುಭವಿಗಳಿಗೆ ಆಧಾರ್ ಜೋಡಣೆಯಲ್ಲಿ ಜಿಎಸ್.ಟಿ ನೋಂದಣಿಯಾಗಿರುವ ಕಾರಣ ಕೆಲವು ಜನರಿಗೆ ಯೋಜನೆಗಳು ತಲಪುತಿಲ್ಲ. ಅಂತಹ ತಾಂತ್ರಿಕ ದೋಷಗಳನ್ನು ಸರಿಪಡಿಸಬೇಕು ಎಂದು ಹೇಳಿದರು.

ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕಾಧಿಕಾರಿ ರಾಹುಲ್ ಶಿಂಧೆ ಮಾತನಾಡಿ ಯೋಜನೆಗಳ ತಾಂತ್ರಿಕ ದೋಷ ನಿವಾರಣೆ, ಅನುಷ್ಠಾನ ಸವಾಲುಗಳನ್ನು ಸಮರ್ಪಕವಾಗಿ ಎದುರಿಸುಲು ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಪ್ರತಿ ತಿಂಗಳು ಸಭೆ ನಡೆಸಲಾಗುತ್ತಿದೆ. ಹೊಸ ತಾಲೂಕುಗಳಿದ್ದಲ್ಲಿ ಇತರೇ ಸಭಾಂಗಣಗಳನ್ನು ಬಳಸಿಕೊಂಡು ಸಭೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಬಸವರಾಜ ಹೆಗ್ಗನಾಯಕ ಅವರು ಸಭೆ ನಿರ್ವಹಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಆರ್. ನಾಗರಾಜ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸಮಿತಿ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button