ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಪ್ರತಿಯೊಂದು ಗ್ರಾಮ ಪಂಚಾಯತ ಅಧ್ಯಕ್ಷರು ಹಾಗೂ ಆಶಾ ಕಾರ್ಯಕರ್ತೆಯರು ಮೊದಲು ತಮ್ಮ ತಮ್ಮ ಮನೆಗಳಲ್ಲಿ ಹಾಗೂ ಊರುಗಳಲ್ಲಿ ಸ್ವಚ್ಛತೆ ಕಾಪಾಡಿಕೊಂಡರೆ ಮಹಾತ್ಮಾ ಗಾಂಧೀಜಿ ಅವರು ಕಂಡ ಸ್ವಚ್ಛಭಾರತದ ಕನಸು ಖಂಡಿತವಾಗಿಯೂ ನನಸಾಗುತ್ತದೆ ಎಂದು ರೈಲ್ವೆ ಖಾತೆಯ ರಾಜ್ಯ ಸಚಿವರಾದ ಸುರೇಶ ಅಂಗಡಿ ಹೇಳಿದರು.
ಜಿಲ್ಲಾ ಪಂಚಾಯತ, ತಾಲ್ಲೂಕ ಪಂಚಾಯತ ಇವರ ಸಹಯೋಗದಲ್ಲಿ ಬೆಳಗಾವಿ ತಾಲ್ಲೂಕಿನ ಗ್ರಾಮ ಪಂಚಾಯತ ಅಧ್ಯಕ್ಷರು, ಉಪಾಧ್ಯಕ್ಷರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಸಮಿತಿ ಅಧ್ಯಕ್ಷರು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಶುಕ್ರವಾರ (ಅ.೧೧) ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಏರ್ಪಡಿಸಲಾಗಿದ್ದ ಪ್ಲಾಸ್ಟಿಕ್ ತ್ಯಾಜ್ಯದಿಂದ ಪರಿಸರ ಸಂರಕ್ಷಣಾ ತರಬೇತಿ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಸವನ್ನು ತೆಗೆಯುವರು ಸ್ವಚ್ಛ ಭಾರತದ ರಾಯಭಾರಿಗಳು, ಆದರೆ ಕಸವನ್ನು ಚೆಲ್ಲಿ ಸ್ವಚ್ಛತೆಯನ್ನು ಹಾಳುಮಾಡುವರು ಸ್ವಚ್ಛ ಭಾರತಕ್ಕೆ ಕಂಟಕವಾಗಿದ್ದಾರೆ.
ಮೊದಲಿಗೆ ರೈಲ್ವೆ ಸ್ಟೇಷನ್‌ಗಳಲ್ಲಿ ಗಬ್ಬುನಾರುವ ದುರ್ವಾಸನೆ ಬರುತ್ತಿತ್ತು. ಆದರೆ ಇತ್ತೀಚೆಗೆ ರೈಲ್ವೆ ಇಲಾಖೆಯು ಸ್ಟೇಷನ್ ಗಳಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಂಡು ಬರುತ್ತಿವೆ.
ಹಳ್ಳಿಗಳು ಮತ್ತೊಮ್ಮೆ ಸ್ವಚ್ಛವಾಗಬೇಕಾದರೆ ಪ್ರತಿಯೊಬ್ಬರಿಗೂ ಸಲಹೆ ನೀಡಬೇಕು. ಯಾವುದೇ ಹಳ್ಳಿಗಳು ಸ್ವಚ್ಚತೆಯನ್ನು ಕಾಪಾಡದಿದ್ದರೆ ತಕ್ಷಣ ಸಂಬಂಧಿಸಿದ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಅದರ ಬಗ್ಗೆ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.
ಪ್ಲಾಸ್ಟಿಕ್ ನಿಂದ ಅನೇಕ ರೋಗಗಳು ಉಂಟಾಗುತ್ತವೆ. ಅದರಿಂದ ಪ್ಲಾಸ್ಟಿಕ್ ಮುಕ್ತವನ್ನಾಗಿಸಲು ಪ್ರತಿಯೊಬ್ಬ ಸಾರ್ವಜನಿಕರು ಸಹಕರಿಸಬೇಕು ಎಂದು ಸಚಿವರಾದ ಸುರೇಶ್ ಅಂಗಡಿ ಮನವಿ ಮಾಡಿಕೊಂಡರು.
ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಜಿಲ್ಲಾ ಪಂಚಾಯತ ಅಧ್ಯಕ್ಷೆ ಆಶಾ ಐಹೊಳೆ ಅವರು ಮಾತನಾಡಿ ಜಿಲ್ಲೆಯನ್ನು ಪ್ಲಾಸ್ಟಿಕ್ ಮುಕ್ತವಾಗಿ ಮಾಡಲು ಪ್ರತಿಯೊಬ್ಬರು ಕೈ ಜೋಡಿಸಬೇಕು ಹಾಗೂ ಪ್ರತಿಯೊಬ್ಬರು ತಮ್ಮ ತಮ್ಮ ಗ್ರಾಮಗಳನ್ನು ಸ್ವಚ್ಚವಾಗಿಟ್ಟುಕೊಂಡರೆ ಕಂಡಿತವಾಗಿಯು ನಮ್ಮ ಜಿಲ್ಲೆ ಸ್ವಚ್ಚ ಜಿಲ್ಲೆಯಾಗಿ ಹೊರಹೊಮ್ಮುತ್ತದೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಜೇಂದ್ರ ಕೆ.ವಿ., ೧೦ ಗುಂಟೆ ಜಾಗ ಹೊಂದಿರುವ ಪ್ರತಿ ಗ್ರಾಮ ಪಂಚಾಯತಗೆ ಘನ ಮತ್ತು ದ್ರವತ್ಯಾಜ್ಯ ಘಟಕವನ್ನು ಸ್ಥಾಪಿಸಲು ೨೦ ಲಕ್ಷ ರೂಪಾಯಿ ಅನುದಾನವನ್ನು ನೀಡಲಾಗುವುದು ಎಂದು ತಿಳಿಸಿದರು.
ಪ್ಲಾಸ್ಟಿಕ್ ನಮ್ಮ ಅವಿಭಾಜ್ಯ ಅಂಗವಾಗಿ ತಿಳಿದು ಕೊಂಡಿದ್ದೆವೆ. ಒಂದು ಸಲ ಬಳಕೆ ಮಾಡಿ ಎಸೆಯುವಂತಹ ಪ್ಲಾಸ್ಟಿಕ್ ಬಳಕೆಗೆ ಸಂಪೂರ್ಣವಾಗಿ ಕಡಿವಾಣ ಹಾಕಲು ಯೋಜನೆಯನ್ನು ಹಾಕಿಕೊಳ್ಳಲಾಗಿದೆ ಎಂದು ತಿಳಿಸಿದರು.
ಪ್ಲಾಸ್ಟಿಕ್ ಬಳಕೆ ಮಾಡುತ್ತಿರುವುದರಿಂದ ಪರಸರ ಎಷ್ಟು ನಾಶವಾಗುತ್ತಿದೆ ಎಂಬುದನ್ನು ಪ್ರಾತ್ಯಕ್ಷಿಕೆ ಮೂಲಕ ತಿಳಿಸಿದರು.
ಭೂದಾನಿಗಳಿಗೆ ಸನ್ಮಾನ:
ಘನತ್ಯಾಜ್ಯ ವಸ್ತುಗಳ ಗುಂಡಿ ನಿರ್ಮಾಣಕ್ಕೆ ಜಮೀನು ನೀಡಿದ ಪೀರನವಾಡಿ, ಮಚ್ಚೆ, ಸಾಂಬ್ರಾ, ಯಳ್ಳೂರ ಸೇರಿದಂತೆ ಒಟ್ಟು ೭ ಗ್ರಾಮ ಪಂಚಾಯತ ಅಧ್ಯಕ್ಷರಿಗೆ ಸನ್ಮಾನ ಮಾಡಲಾಯಿತು.
ಜಿಲ್ಲೆಯ ವಿವಿಧ ಗ್ರಾಮ ಪಂಚಾಯತಗಳಿಂದ ಕ್ರೋಢೀಕರಿಸಿದ ಪ್ಲ್ಯಾಸ್ಟಿಕ್ ತ್ಯಾಜ್ಯವನ್ನು ದಾಲ್ಮಿಯಾ ಸಿಮೆಂಟ್ ಕಾರ್ಖಾನೆಗೆ ಸಾಗಿಸುವ ಸಾಗಾಣಿಕೆ ವಾಹನಗಳಿಗೆ ರಾಜ್ಯ ರೈಲ್ವೆ ಖಾತೆ ಸಚಿವ ಸುರೇಶ ಅಂಗಡಿ ಅವರು ಚಾಲನೆ ನೀಡಿದರು.
ಪ್ಲಾಸ್ಟಿಕ್ ಮುಕ್ತ ಜಿಲ್ಲೆಯನ್ನಾಗಿಸಲು ವಿವಿಧ ಕುಶಲಕರ್ಮಿಗಳು ತಯಾರಿಸಿದ ಬಟ್ಟೆಯಿಂದ ತಯಾರಿಸಿದ ಕೈಚೀಲಗಳನ್ನು ಪ್ರದರ್ಶಿಸಿದರು.
ಜಿಲ್ಲಾ ಪಂಚಾಯತ ಉಪಾಧ್ಯಕ್ಷ ಅರುಣ ಕಟಾಂಬಳೆ, ತಾಲೂಕು ಪಂಚಾಯತ ಅಧ್ಯಕ್ಷರಾದ ಶಂಕರ ಗೌಡ ಪಾಟೀಲ, ಜಿಲ್ಲಾ ಪಂಚಾಯತ ಮುಖ್ಯ ಲೆಕ್ಕಾಧಿಕಾರಿಗಳಾದ ಪರಶುರಾಮ ದುಡಗುಂಟಿ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ