ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಹಾಡು ಹಗಲೇ ಮನೆಗೆ ನುಗ್ಗಿದ ಕಳ್ಳರು ಇಬ್ಬರು ಮಕ್ಕಳನ್ನು ಅಪಹರಿಸಿಕೊಂಡು ಪರಾರಿಯಾಗುತ್ತಿದ್ದಾಗ ಅವರ ಕಾಲಿಗೆ ಗುಂಡೇಟು ಹೊಡೆದು ಮಕ್ಕಳನ್ನು ರಕ್ಷಿಸಿದ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೋಹಳ್ಳಿಯಲ್ಲಿ ನಡೆದಿದ್ದು, ಆರೋಪಿ ಹಾಗೂ ಹಲ್ಲೆಗೋಳಗಾದ ಪೊಲೀಸರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಆಸ್ಪತ್ರೆಗೆ ಭೇಟಿ ನೀಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ ಅವರು ಮಾಹಿತಿ ಪಡೆದರು.
ಬೆಳಗಾವಿ ಜಿಲ್ಲೆ ಅಥಣಿಯಲ್ಲಿ ಇಬ್ಬರು ಮಕ್ಕಳ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿಯಲ್ಲಿ ಎಸ್ಪಿ ಡಾ.ಭೀಮಾಶಂಕರ ಗುಳೇದ ಪ್ರತಿಕ್ರಿಯೆ ನೀಡಿದ್ದು ಗಾಯಾಳು ಆರೋಪಿ, ಇಬ್ಬರು ಪೊಲೀಸ್ ಸಿಬ್ಬಂದಿ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನಿನ್ನೆ ಅಥಣಿಯಲ್ಲಿ ಹಾಡಹಗಲೇ ಮನೆಗೆ ನುಗ್ಗಿ ಇಬ್ಬರು ಮಕ್ಕಳನ್ನು ಅಪಹರಿಸಿದ ಪ್ರಕರಣ ವರದಿಯಾಗಿತ್ತು. ತಕ್ಷಣ ಅಥಣಿ ಪೊಲೀಸರು ಸ್ಥಳಕ್ಕೆ ಧಾವಿಸಿ ಮಾಹಿತಿ ಕಲೆ ಹಾಕಿದರು. ಇಬ್ಬರು ಮಕ್ಕಳನ್ನು ಸ್ವಿಫ್ಟ್ ಡಿಸೈರ್ ಕಾರಿನಿಂದ ಕೆಳಗೆ ಇಳಿದು ಅಪಹರಿಸಿದ್ರು. ಕಾರಿನಲ್ಲಿ ಮತ್ತೋರ್ವ ವ್ಯಕ್ತಿ ಇದ್ದ, ಮೂವರು ಸೇರಿ ಅಪಹರಿಸಿದ ಬಗ್ಗೆ ಗೊತ್ತಾಗಿ ತನಿಖೆ ಆರಂಭಿಸಲಾಯಿತು. ಮಕ್ಕಳ ಅಪಹರಣವಾದ ಎರಡು ಗಂಟೆಗಳ ಮೇಲೆ ಅಪಹರಣವಾದ ಮಕ್ಕಳ ತಂದೆಯ ಮೊಬೈಲ್‌ಗೆ ಕರೆ ಬರುತ್ತದೆ ಎಂದರು.
ಏಳು ಕೋಟಿ ಹಣ ಕೊಡದಿದ್ರೆ ನಾವೇನು ಮಾಡ್ತೀವಿ ನೋಡು ಎಂದು ಬೆದರಿಕೆ ಕರೆ ಬರುತ್ತದೆ. ಬಳಿಕ ಆರೋಪಿಗಳು ಕರೆ ಮಾಡಿದ ಮೊಬೈಲ್ ಸ್ವಿಚ್ ಆಫ್ ಮಾಡಿದ್ರು.ಸಿಸಿ ಕ್ಯಾಮರಾದಲ್ಲಿ ಆರೋಪಿಗಳ ಮುಖಚರ್ಯ ಗುರುತು ಹಿಡಿದು ತೋರಿಸಿದಾಗ ಮಕ್ಕಳ ತಂದೆ ಆರೋಪಿಗಳು ತಮಗೆ ಪರಿಚಯಸ್ಥರು ಎಂದು ಹೇಳಿದ್ದರು.ಕರೆ ಮಾಡಿದ ಮೊಬೈಲ್ ತಕ್ಷಣ ಸ್ವಿಚ್ ಆಫ್ ಆಗಿರುತ್ತದೆ.ಆಧುನಿಕ ತಂತ್ರಜ್ಞಾನ ಬಳಸಿ ಆರೋಪಿ ಬಂಧಿಸಲು ಜಾಲ ಬೀಸುತ್ತಾರೆ. ಆರೋಪಿಗಳು ಮಹಾರಾಷ್ಟ್ರಕ್ಕೆ ಪರಾರಿಯಾಗಲು ಯತ್ನಿಸುವ ಅನುಮಾನ ಬರುತ್ತದೆ.ಮಹಾರಾಷ್ಟ್ರ ರಾಜ್ಯದಲ್ಲಿ ಎಲೆಕ್ಷನ್ ಹಿನ್ನೆಲೆ ಚೆಕ್‌ಪೋಸ್ಟ್ ಸ್ಥಾಪಿಸಿದ್ದರಿಂದ ಅಲ್ಲಿಯೂ ನಾವು ಮಾಹಿತಿ ಕಳಿಸಿದ್ದೇವೆ. ನಮ್ಮ ರಾಜ್ಯದ ಬೇರೆ ಬೇರೆ ಕಡೆ ಕಾರು ಚಾಲನೆ ಮಾಡ್ತಿದ್ರು. ತಾಂತ್ರಿಕ ಸಾಕ್ಷ್ಯಾಧಾರದಿಂದ ಆರೋಪಿಗಳು ಯಾವ ಕಡೆ ಹೋಗುತ್ತಿದ್ದಾರೆ ಎಂಬ ಮಾಹಿತಿ ಸಿಗುತ್ತದೆ.ಬೆಳಗ್ಗೆ ಐದು ಗಂಟೆ ಸುಮಾರಿಗೆ ಕಾರಿಗೆ ಅಡ್ಡ ಹಾಕಿ ಬಂಧಿಸಲು ಹೋದಾಗ ಪೊಲೀಸರ ಮೇಲೆ ಹಲ್ಲೆ ಮಾಡ್ತಾರೆ. ಆರೋಪಿಗಳ ಹಲ್ಲೆಯಿಂದ ಇಬ್ಬರು ಪೊಲೀಸರಿಗೆ ಗಾಯವಾಗಿದೆ. ಮಾಹಿತಿ ಸಿಕ್ಕ ತಕ್ಷಣ ಅಥಣಿ ಪಿಎಸ್ಐ ನೇತೃತ್ವದಲ್ಲಿ ಮತ್ತೊಂದು ಟೀಮ್ ಬರ್ತಿತ್ತು. ಸ್ವಯಂರಕ್ಷಣೆಗೆ ಮೊದಲು ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸುತ್ತಾರೆ.ಬಳಿಕ ಆರೋಪಿ ಸಂಭಾಜಿ ಕಾಂಬಳೆ ಕಾಲಿಗೆ ಗುಂಡು ತಾಗಿದೆ.ಕಾರು ಪರಿಶೀಲನೆ ಮಾಡಿದಾಗ ಮಕ್ಕಳು ಸುರಕ್ಷಿತವಾಗಿದ್ದನ್ನ ಖಚಿತ ಪಡಿಸಿ ಮಕ್ಕಳು ಸೇರಿ ಇತರರನ್ನು ಆಸ್ಪತ್ರೆಗೆ ಕಳಿಸಿದ್ದೇವೆ. ಮಕ್ಕಳನ್ನು ತಂದೆ ತಾಯಿ ವಶಕ್ಕೆ ಒಪ್ಪಿಸಿ ಮೂವರು ಆರೋಪಿಗಳು ವಶಕ್ಕೆ ಪಡೆದು ಮುಂದಿನ ತನಿಖೆ ಆರಂಭಿಸಿದ್ದೀವಿ ಎಂದರು.
ಅಪಹರಣಕ್ಕೊಳಗಾದ ಮಕ್ಕಳ ತಂದೆ ಆನ್‌ಲೈನ್ ಟ್ರೇಡಿಂಗ್ ಮಾಡುತ್ತಿದ್ರು. ಆರೋಪಿ ರವಿಕಿರಣ್ ಸುಮಾರು 7 ಕೋಟಿ ದುಡ್ಡು ಹೂಡಿಕೆ ಮಾಡಿ ಲಾಸ್ ಆಗಿತ್ತು.ಆ ಹಣ ವಾಪಸ್ ನೀಡುವಂತೆ ಬೆದರಿಸಲು ಮಕ್ಕಳ ಅಪಹರಣ ಮಾಡಿದ್ರು.ಆರೋಪಿ ರವಿಕಿರಣ್ ವಿರುದ್ಧ ವಿವಿಧೆಡೆ ಐದು ಪ್ರಕರಣ ದಾಖಲಾಗಿವೆ. ಹಣದ ವ್ಯವಹಾರ ಕಾರಣ ಮಕ್ಕಳ ಅಪಹರಣ ಮಾಡಲಾಗಿತ್ತು. ಅಥಣಿ ಪೊಲೀಸರು ಚಾಕಚಕ್ಯತೆಯಿಂದ ಪ್ರಕರಣ ಬೇಧಿಸಿದ್ದಾರೆ. ಮಕ್ಕಳನ್ನು ರಕ್ಷಣೆ ಮಾಡುವುದು ನಮ್ಮ ಉದ್ದೇಶ ಆಗಿತ್ತು. ಐಗಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಐವರು ಆರೋಪಿಗಳು ಬರುತ್ತಿದ್ದು ಮಹಾರಾಷ್ಟ್ರ ಗಡಿ ದಾಟಲು ತಯಾರಿ ಮಾಡುತ್ತಿದ್ರು. ಪ್ರಾಥಮಿಕವಾಗಿ ಒಟ್ಟು ಮೂವರು ಭಾಗಿಯಾಗಿದ್ದಾರೆ ಮತ್ತೆ ಯಾರಾದರೂ ಇದ್ದಾರೆಯೇ ಎಂಬುದರ ತನಿಖೆ ಮಾಡ್ತೀವಿ. ತಾವು ಹೂಡಿಕೆ ಮಾಡಿದ ಹಣ ವಾಪಸ್ ಪಡೆಯುವುದು ಅವರ ಮೂಲ ಉದ್ದೇಶವಾಗಿತ್ತು.
ಈ ಹಿಂದೆಯೂ ಅಪಹರಣಕ್ಕೊಳಗಾದ ಮಕ್ಕಳ ತಂದೆಯನ್ನು ಗೋವಾದಲ್ಲಿ ಅಪಹರಿಸಿದ್ದ ಪ್ರಕರಣ ದಾಖಲಾಗಿತ್ತು. ಗೋವಾದಲ್ಲಿ ಅಪಹರಣ ಕೇಸ್ ದಾಖಲಾಗಿ, ಚಾರ್ಜ್‌ಶೀಟ್ ಸಹ ಸಲ್ಲಿಕೆಯಾಗಿದೆ. ಈ ಕುಟುಂಬದ ಮೇಲೆ ಇದು ಎರಡನೇ ಅಪಹರಣ ಅಟೆಂಪ್ಟ್ ಆಗಿದೆ ಎಂದು ಮಾಹಿತಿ ನೀಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ