![]()

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಬೆಳಗಾವಿ ಗ್ರಾಮೀಣ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ 22 ಕೋಟಿ ರೂ ಅನುದಾನವನ್ನು ಸಣ್ಣ ನೀರಾವರಿ ಇಲಾಖೆಯಿಂದ ಒದಗಿಸಲಾಗಿದೆ ಎಂದು ಸಣ್ಣ ನೀರಾವರಿ ಸಚಿವ ಪುಟ್ಟರಾಜು ತಿಳಿಸಿದರು
ಉಚಗಾಂವ ಮತ್ತು ಕೋನೇವಾಡಿ ಗ್ರಾಮದ ಮದ್ಯದಲ್ಲಿರುವ ಹಳ್ಳಕ್ಕೆ ಸೇತುವೆ ಕಮ್ ಬಾಂಧಾರ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಈ ಭಾಗದ ಶಾಲಾ ಮಕ್ಕಳು ಮಳೆಗಾಲದಲ್ಲಿ ಜೀವ ಕೈಯಲ್ಲಿ ಹಿಡಿದುಕೊಂಡು ಹಳ್ಳ ದಾಟುವ ಪರಿಸ್ಥಿತಿಯ ಬಗ್ಗೆ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಮನವರಿಕೆ ಮಾಡಿದ ಹಿನ್ನೆಲೆಯಲ್ಲಿ ತಕ್ಷಣ ಸೇತುವೆ ಕಮ್ ಬಾಂಧಾರ ಕಾಮಗಾರಿಗೆ ಮಂಜೂರಾತಿ ನೀಡಿದ್ದೇನೆ. ಕ್ಷೇತ್ರದ ಒಟ್ಟು ಹದಿಮೂರು ಕಾಮಗಾರಿಗಳಿಗೆ 22 ಕೋಟಿ ರೂ ಅನುದಾನ ಒದಗಿಸಲಾಗಿದೆ ಎಂದು ಸಚಿವ ಪುಟ್ಟರಾಜು ಹೇಳಿದರು
ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಮಾತನಾಡಿ, ಉಚಗಾಂವ ಗ್ರಾಮದ ಹಲವಾರು ದಶಕಗಳ ಬೇಡಿಕೆ ಈಡೇರಿದೆ. ಚುನಾವಣೆಯ ಸಂಧರ್ಭದಲ್ಲಿ ಕ್ಷೇತ್ರದ ಜನರಿಗೆ ನೀಡಿರುವ ಪ್ರತಿಯೊಂದು ಭರವಸೆಯನ್ನು ನಿಮ್ಮ ಮನೆಯ ಮಗಳಾಗಿ ಈಡೇರಿಸುತ್ತೇನೆ. ಜನರ ವಿಶ್ವಾಸಕ್ಕೆ ಎಂದಿಗೂ ಧಕ್ಕೆಯಾಗದಂತೆ ಪ್ರಮಾಣಿಕವಾಗಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು
ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಮಾರ್ಕಂಡೇಯ ನದಿ ಹರಿಯುತ್ತಿದೆ ಈ ನದಿಯಲ್ಲಿ ಚಿಕ್ಕ ಬಾಂಧಾರಗಳನ್ನು ನಿರ್ಮಿಸಿ ಉಚಗಾಂವ ಸೇರಿದಂತೆ ಸುತ್ತಮುತ್ತಲಿನ ಭಾಗದ ರೈತರಿಗೆ ನೀರಾವರಿ ಸೌಲಭ್ಯ ಒದಗಿಸಿಕೊಡುವುದು ನನ್ನ ಮಹಾದಾಸೆಯಾಗಿದೆ. ಈ ಯೋಜನೆಯ ಮಂಜೂರಾತಿಗಾಗಿ ಹಗಲಿರಳು ಶ್ರಮುಸುತ್ತೇನೆ ಎಂದು ಲಕ್ಷ್ಮೀ ಹೆಬ್ಬಾಳಕರ ಭರವಸೆ ನೀಡಿದರು
ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಮತ್ತು ಸಚಿವ ಪುಟ್ಟರಾಜು ಅವರನ್ನು ಗ್ರಾಮದ ಶಾಲಾ ಮಕ್ಕಳು ಮತ್ತು ರೈತರು ಸತ್ಕರಿಸಿ ಗೌರವಿಸಿದರು.
ಶಂಕರಗೌಡ ಪಾಟೀಲ, ಸಿ.ಸಿ. ಪಾಟೀಲ, ಯುವರಾಜ ಕದಂ ಸೇರಿದಂತೆ ಉಚಗಾಂವ ಗ್ರಾಮದ ಹಿರಿಯರು, ಕಾಂಗ್ರೆಸ್ ಪಕ್ಷದ ಮುಖಂಡರು ಉಪಸ್ಥಿತರಿದ್ದರು



