Belagavi NewsBelgaum NewsKannada NewsKarnataka News

*ಮನರೇಗಾ ಯೋಜನೆ: ಆನ್ ಲೈನ್ ಪ್ರಕ್ರಿಯೆಯಲ್ಲಿ ಬೆಳಗಾವಿ ಜಿಲ್ಲೆ ಪ್ರಥಮ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ (ಮನರೇಗಾ) ಪ್ರಥಮ ಬಾರಿ ಮಾಡಲಾದ ಆನ್ಲೈನ್ ಮೂಲಕ ಕಾಮಗಾರಿಗಳ ಬೇಡಿಕೆ ಸಲ್ಲಿಸುವ ಪ್ರಕ್ರಿಯೆಗೆ ಬೆಳಗಾವಿ ಜಿಲ್ಲೆಯಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, 2025-26ನೇ ಸಾಲಿಗಾಗಿ ಜಿಲ್ಲೆಯಲ್ಲಿ ಸಾರ್ವಜನಿಕರಿಂದ ಬರೋಬ್ಬರಿ 22,180 ಕಾಮಗಾರಿಗಳು ಬೇಡಿಕೆ ಸಲ್ಲಿಕೆಯಾಗಿದೆ.  

2025-26ನೇ ಸಾಲಿನ ಮನರೇಗಾ ಯೋಜನೆಯ ಆಯವ್ಯಯ ಸಲ್ಲಿಸುವ ಪ್ರಕ್ರಿಯೆಗೆ ಗ್ರಾಮೀಣಾಭಿವೃದ್ಧಿ ಆಯುಕ್ತಾಲ ಡಿಜಿಟಲ್ ಟಚ್ ನೀಡಿದ್ದು, ಬೆಳಗಾವಿ ಜಿಲ್ಲೆಯಲ್ಲಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಪಾರದರ್ಶಕತೆ ತರುವ ಪ್ರಯತ್ನ ಪ್ರಥಮ ಹಂತದಲ್ಲಿ ಯಶಸ್ವಿಯಾಗಿದೆ. ಈಗಾಗಲೇ ಸಾರ್ವಜನಿಕರು ಸಲ್ಲಿಸಿದ ಕಾಮಗಾರಿಗಳ ಬೇಡಿಕೆಯೂ ಮುಂದಿನ ಆರ್ಥಿಕ ವರ್ಷದ ಆಯವ್ಯಯದಲ್ಲಿ ಆದ್ಯತೆಗೆ ಮೇರೆಗೆ  ಜಾರಿಗೆ ಬರಲಿವೆ. 

ರಾಜ್ಯದಲ್ಲಿ ಬೆಳಗಾವಿ ಪ್ರಥಮ

ರಾಜ್ಯಾದ್ಯಂತ ಮನರೇಗಾ ಯೋಜನೆಯಡಿ ಆನ್ ಲೈನ್ ಮೂಲಕ ಬೇಡಿಕೆ ಸಲ್ಲಿಸುವ ಪ್ರಕ್ರಿಯೆಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಅತೀ ಹೆಚ್ಚು ಜನರು ಸಕ್ರಿಯವಾಗಿ ಭಾಗವಹಿಸಿದ್ದು, ರಾಜ್ಯದಲ್ಲಿ ಬೆಳಗಾವಿ ಜಿಲ್ಲೆಯೊಂದರಲ್ಲಿ ಇಲ್ಲಿಯವರೆಗೆ ಒಟ್ಟು 22,180 ಕಾಮಗಾರಿಗಳ ಬೇಡಿಕೆ ಸಲ್ಲಿಸಿದ್ದಾರೆ. ಈ ಪ್ರಕ್ರಿಯೆ ಅದೇ ರೀತಿ ಹಾಸನದಲ್ಲಿ 8,137 ಹಾಗೂ ಬಾಗಲಕೋಟೆಯಲ್ಲಿ 7,313 ಬೇಡಿಕೆ ಸಲ್ಲಿಕೆಯಾಗಿವೆ. 

ತಾಲೂಕುವಾರು ಮಾಹಿತಿ

ಜಿಲ್ಲೆಯ ಅಥಣಿ 1614, ಬೆಳಗಾವಿ 853, ಬೈಲಹೊಂಗಲ 2369, ಚಿಕ್ಕೋಡಿ 2639, ಗೋಕಾಕ 1430, ಹುಕ್ಕೇರಿ 2491, ಕಾಗವಾಡ 176, ಖಾನಾಪುರ 6232, ಚನ್ನಮ್ಮ ಕಿತ್ತೂರು 773, ಮೂಡಲಗಿ 118, ನಿಪ್ಪಾಣಿ 247, ರಾಮದುರ್ಗ 692, ರಾಯಬಾಗ ತಾಲೂಕಿನಲ್ಲಿ 501 ಕಾಮಗಾರಿಗಳ ಬೇಡಿಕೆಯನ್ನು ಸಾರ್ವಜನಿಕರು ಸಲ್ಲಿಸಿದ್ದಾರೆ.

ವ್ಯಾಪಕ ಪ್ರಚಾರ

ಬೆಳಗಾವಿ ಜಿಲ್ಲೆಯಲ್ಲಿ ಆನ್ಲೈನ್ ಮೂಲಕ ಗ್ರಾಮೀಣ ಜನರಿಂದ ಕಾಮಗಾರಿಗಳ ಬೇಡಿಕೆ ಸಲ್ಲಿಸುವ ಪ್ರಕ್ರಿಯೆಗೆ ಗ್ರಾಪಂ ಮಟ್ಟದಲ್ಲಿ ವ್ಯಾಪಕ ಪ್ರಚಾರ ನೀಡಲಾಗಿದ್ದು, ಇದರ ಪರಿಣಾಮ ಪ್ರತಿ ಗ್ರಾಪಂಗಳಿಂದ ಬೇಡಿಕೆಗಳು ಸಲ್ಲಿಕೆಯಾಗಿವೆ. ಗ್ರಾಪಂ ಮಟ್ಟದಲ್ಲಿ ಉದ್ಯೋಗ ವಾಹಿನಿ ರಥ, ಮನೆ ಮನೆ ಭೇಟಿ, ರೋಜಗಾರ್ ದಿವಸ್ ಕಾರ್ಯಕ್ರಮ, ಸೇರಿದಂತೆ ಅನೇಕ ಕಾರ್ಯಕ್ರಮಗಳ IEC ಮೂಲಕ ವ್ಯಾಪಕ ಪ್ರಚಾರ ಮಾಡಲಾಗಿದೆ. ಇದರಿಂದಾಗಿ ಗ್ರಾಮೀಣ ಜನರು ತಮಗೆ ಅವಶ್ಯಕತೆ ಇರುವ ಕಾಮಗಾರಿಗಳ ಬೇಡಿಕೆಯನ್ನು ಆನ್ಲೈನ್ ಮೂಲಕ ಸಲ್ಲಿಸಲು ಅನುಕೂಲವಾಗಿದೆ. 

ವೈಯಕ್ತಿಕ ಕಾಮಗಾರಿಗಳೇ ಹೆಚ್ಚು

ಸಾರ್ವಜನಿಕರಿಂದ ಸಲ್ಲಿಕೆಯಾದ ಬೇಡಿಕೆಗಳ ಪೈಕಿ ಅತೀ ಹೆಚ್ಚು ವೈಯಕ್ತಿಕ ಕಾಮಗಾರಿಗಳ ಬೇಡಿಕೆಗಳು ಸಲ್ಲಿಕೆಯಾಗಿವೆ. ದನದ ಶೆಡ್, ಕುರಿ ಮತ್ತು ಮೇಕೆ ಶೆಡ್, ಇಂಗು ಗುಂಡಿ, ತೋಟಗಾರಿಕೆ ಬೆಳೆಗಳು ಸೇರಿದಂತೆ ಅನೇಕ ವೈಯಕ್ತಿಕ ಕಾಮಗಾರಿಗಳ ಬೇಡಿಕೆ ಸಲ್ಲಿಸಿದ್ದಾರೆ. ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಪ್ರಾರಂಭಿಸಿರುವ ಆನ್ ಲೈನ್ ಮೂಲಕ ಬೇಡಿಕೆ ಸಲ್ಲಿಸುವ ಪ್ರಕ್ರಿಯೆ ಬೆಳಗಾವಿ ಜಿಲ್ಲೆಯಲ್ಲಿ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈಗಾಗಲೇ ಸಲ್ಲಿಕೆಯಾದ ಬೇಡಿಕೆಗಳು ಆದ್ಯತೆಗೆ ಅನುಗುಣವಾಗಿ 2025-26ನೇ ಸಾಲಿನ ವಾರ್ಷಿಕ ಕ್ರಿಯಾ ಯೋಜನೆಯಲ್ಲಿ ಅಳವಡಿಸಿಕೊಂಡು ಕಾಮಗಾರಿಗಳನ್ನು ಅನುಷ್ಠಾನ ಮಾಡಲು ಕ್ರಮ ವಹಿಸಲಾಗುವುದು.  

ಗ್ರಾಪಂಗಳಲ್ಲಿ ಪಾರರ್ದಶಕತೆ ತರುವ ನಿಟ್ಟಿನಲ್ಲಿ ಗ್ರಾಮೀಣಾಭಿವೃದ್ಧಿ ಆಯುಕ್ತಾಲಯ ಜಾರಿಗೊಳಿಸಿರುವ ಆನ್ ಲೈನ್ ಮೂಲಕ ಮನರೇಗಾ ಯೋಜನೆಯಡಿ ಗ್ರಾಮೀಣ ಜನರು ವೈಯಕ್ತಿಕವಾಗಿ ಬೇಡಿಕೆ ಸಲ್ಲಿಸುವ ಪ್ರಕ್ರಿಯೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಳಗಾವಿ ಜಿಲ್ಲೆಯಿಂದ ರಾಜ್ಯದಲ್ಲಿ ಅತೀ ಹೆಚ್ಚು ಕಾಮಗಾರಿಗಳ ಬೇಡಿಕೆ ಸಲ್ಲಿಕೆಯಾಗಿದೆ. ಈಗಾಗಲೇ ಸಲ್ಲಿಕೆಯಾಗಿರುವ ಕಾಮಗಾರಿಗಳನ್ನು ಪರಿಶೀಲಿಸಿ ಆದ್ಯತೆ ಅನುಗುಣವಾಗಿ ಮುಂಬರುವ ವಾರ್ಷಿಕ ಆಯವ್ಯಯದಲ್ಲಿ ಅಳವಡಿಸಿಕೊಂಡು ಅನುಷ್ಠಾನಗೊಳಿಸಲಾಗುವುದು.  

ರಾಹುಲ್ ಶಿಂಧೆ, ಜಿಪಂ ಸಿಇಒ, ಬೆಳಗಾವಿ ಜಿಪಂ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button