Kannada NewsKarnataka NewsNationalPolitics

*ಸರ್ಕಾರಿ ಆಸ್ಪತ್ರೆಗಳಿಗೆ ಸೌರ ಶಕ್ತಿಯ ಬಲ; ದೇಶದಲ್ಲೇ ಮೊದಲು*

ಪ್ರಗತಿವಾಹಿನಿ ಸುದ್ದಿ: ರಾಜ್ಯದ ಸರ್ಕಾರಿ ಆಸ್ಪತ್ರೆಗಳಿಗೆ ಸೌರ ಶಕ್ತಿ ಅಳವಡಿಕೆ ಯೋಜನಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಬೆಂಗಳೂರಿನಲ್ಲಿ ಇಂದು ಚಾಲನೆ ನೀಡಿದರು. ಸೆಲ್ಕೋ ಫೌಂಡೇಶನ್ ಸಹಯೋಗದೊಂದಿಗೆ ರಾಜ್ಯದ ತಾಲೂಕು ಆಸ್ಪತ್ರೆಗಳು ಹಾಗೂ ಪ್ರಾಥಮಿಕ ಕೇಂದ್ರಗಳು ಸೇರಿದಂತೆ 500 ಆರೋಗ್ಯ ಕೇಂದ್ರಗಳಲ್ಲಿ 2026 ರ ಒಳಗೆ ಸೌರ ವಿದ್ಯುತ್ ಅಳವಡಿಸುವ ಗುರಿ ಹೊಂದಲಾಗಿದೆ. 

120 ಕೋಟಿ ವೆಚ್ಚದಲ್ಲಿ ಸೆಲ್ಕೋ ಫೌಂಡೇಶನ್ ಸಹಯೋಗದೊಂದಿಗೆ ಸಿಎಸ್ ಆರ್ ಯೋಜನೆ ಅಡಿಯಲ್ಲಿ ಸೌರ ಶಕ್ತಿ ಅಳವಡಿಸಲಾಗುತ್ತಿದ್ದು, ಇದರಿಂದ 5 ಲಕ್ಷ ವಿದ್ಯುತ್ ಯುನಿಟ್ ಗಳ ಉಳಿತಾಯವಾಗಲಿದೆ. ಇದರಿಂದ ಪ್ರತಿ ತಿಂಗಳಿಗೆ 50 ಲಕ್ಷ ವಿದ್ಯುತ್ ಬಿಲ್ ನಲ್ಲಿ ಸರ್ಕಾರಿ ಆಸ್ಪತ್ರೆಗಳಿಗೆ ಉಳಿತಾಯವಾಗಲಿದೆ ಎಂದು ಅಂದಾಜಿಸಲಾದ್ದು, 10 ವರ್ಷಗಳಲ್ಲಿ ಸರಿಸುಮಾರು 100 ಕೋಟಿಯಷ್ಟ ಹಣ ಸರ್ಕಾರದ ಬೊಕ್ಕಸಕ್ಕೆ ಉಳಿತಾಯವಾಗಲಿದೆ. 

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಸೆಲ್ಕೋ ಫೌಂಡೇಶನ್ ಆರೋಗ್ಯ ಇಲಾಖೆಯೊಂದಿಗೆ ನಿಜಕ್ಕೂ ಒಂದು ಕ್ರಾಂತಿಕಾರ ಹೆಜ್ಜೆಯಿಟ್ಟಿದೆ. 

ಈಗಾಗಲೇ ಪ್ರಥಮ ಹಂತದಲ್ಲಿ 1,152 ಕ್ಕೂ ಹೆಚ್ಚು ಆರೋಗ್ಯ ಕೇಂದ್ರಗಳಿಗೆ ಸೌರಶಕ್ತಿ ಒದಗಿಸಲಾಗಿದ್ದು, ರಾಯಚೂರಿನಲ್ಲಿ ಎಲ್ಲಾ ಆರೋಗ್ಯ ಕೇಂದ್ರಗಳು ಸಂಪೂರ್ಣವಾಗಿ ಸೌರಶಕ್ತಿ ಹೊಂದಿವೆ. ಇದರಿಂದಾಗಿ ಆರೋಗ್ಯ ಕೇಂದ್ರಗಳ ವಿದ್ಯುತ್ ಬಿಲ್‌ಗಳಲ್ಲಿ ಶೇಕಡ 70 ರಷ್ಟು ಉಳಿತಾಯವಾಗುತ್ತಿದೆ. ಈಗಾಗಲೇ ಸುಮಾರು‌ 3 ಮೆಗಾ ವ್ಯಾಟ್ ಸೌರ ವಿದ್ಯುತ್ ಅನ್ನ ಆರೋಗ್ಯ ಕೇಂದ್ರಗಳಲ್ಲಿ ಉತ್ಪಾದಿಸಲಾಗಿದೆ.  ಮುಂದಿನ 10 ವರ್ಷಗಳಲ್ಲಿ ರಾಜ್ಯ ಸರ್ಕಾರಕ್ಕೆ 100 ಕೋಟಿ ರೂಪಾಯಿ ಉಳಿತಾಯ ಮಾಡುವ ಯೋಜನೆ ಅಳವಡಿಸಿಕೊಂಡಿರುವ ದೇಶದ ಪ್ರಥಮ ರಾಜ್ಯ ಕರ್ನಾಟಕವಾಗಿದೆ ಎಂದರು.‌

ಈ ಮಹತ್ವದ ಯೋಜನೆಯಿಂದಾಗಿ 2026ರ ವೇಳೆಗೆ ಕರ್ನಾಟಕದಾದ್ಯಂತ 5,000 ಆರೋಗ್ಯ ಕೇಂದ್ರಗಳಿಗೆ ಸೌರ-ವಿದ್ಯುತ್ ಒದಗಿಸುವ ಗುರಿ ಹೊಂದಲಾಗಿದೆ. ಇದರಿಂದ ಗ್ರಾಮೀಣ ಭಾಗದಲ್ಲಿ ಅತಿ ಹೆಚ್ಚು ಜನರಿಗೆ ಉತ್ತಮ ಆರೋಗ್ಯ ಸೌಲಭ್ಯ ಒದಗಿಸಲು ಸಾಧ್ಯವಾಗಲಿದೆ. ಸುಸ್ಥಿರ ಶಕ್ತಿಯು ಆರೋಗ್ಯ ರಕ್ಷಣೆ ಮತ್ತು ಆರೋಗ್ಯ ವ್ಯವಸ್ಥೆಗಳನ್ನು ಬಲಪಡಿಸಲಿದೆ

ಯೋಜನೆಯ ಪ್ರಮುಖಾಂಶಗಳು

ಆರೋಗ್ಯ ಸೇವೆಗಳ ಅಗತ್ಯಗಳನ್ನು 24×7 ಚಾಲ್ತಿಯಲ್ಲಿರುವಂತೆ ಖಾತರಿಪಡಿಸಿಕೊಳ್ಳಲು ಸೋಲಾರ್ ಸೌಲಭ್ಯ ಒದಗಿಸಲಾಗುವುದು.

ರಿಮೋಟ್ ಮಾನಿಟರಿಂಗ್ ಸಿಸ್ಟಮ್ (RMS) ಮುಖಾಂತರ ನಿರಂತರ ನಿಗಾ ಹಾಗೂ ಸೌರ ಇ-ಮಿತ್ರಾ ಮೊಬೈಲ್ ಆ್ಯಪ್ ಮೂಲಕ ಸೋಲಾರ್ ಸಾಧನಗಳ ನಿರ್ವಹಣೆ ಮಾಡಲಾಗುವುದು.

2026 ರ ವೇಳೆಗೆ 5000 ಆರೋಗ್ಯ ಕೇಂದ್ರಗಳಿಗೆ (3381 ಉಪ ಕೇಂದ್ರಗಳು, 1500 ಪ್ರಾಥಮಿಕ ಆರೋಗ್ಯ ಕೇಂದ್ರಗಳು, 119 ತಾಲೂಕು ಆಸ್ಪತ್ರೆಗಳು) ಸೌರಶಕ್ತಿ ಅಳವಡಿಸಲಾಗುವುದು.

ಪ್ರಾಥಮಿಕ‌ ಆರೋಗ್ಯ ಕೇಂದ್ರಗಳಲ್ಲಿ ಬ್ಯಾಟರಿ ಆಧಾರಿತ ವ್ಯವಸ್ಥೆ ಅಳವಡಿಸಲಾಗುತ್ತಿದ್ದು, ನಿರಂತರವಾಗಿ 24/7 ವಿದ್ಯುತ್ ದೊರೆಯಲಿದೆ. 

ಈ ಮಹಾತ್ವಕಾಂಕ್ಷಿ ಯೋಜನೆಯಿಂದ ಗ್ರಾಮೀಣ ಭಾಗದಲ್ಲಿ ನಿರಂತರ ಆರೋಗ್ಯ ಸೇವೆ ಒದಗಿಸಲು ಸಾಧ್ಯವಾಗಲಿದೆ. ದೇಶದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಈ ರೀತಿಯ ಸಂಪೂರ್ಣ ನಿರ್ವಹಣೆಯ ಸಂಯೋಜಿತ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button