*ಮಹಾರಾಷ್ಟ್ರ ವಿದ್ಯುತ್ ನೀತಿ ವರದಿ ಕೊಡಿ: ಅಧಿಕಾರಿಗಳಿಗೆ ಜವಳಿ ಸಚಿವ ಶಿವಾನಂದ ಪಾಟೀಲ ನಿರ್ದೇಶನ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮಹಾರಾಷ್ಟ್ರ ಸರ್ಕಾರ ಜವಳಿ ಉದ್ಯಮಿಗಳಿಗೆ ವಿದ್ಯುತ್ ಪೂರೈಕೆ ಮಾಡುತ್ತಿರುವ ನೀತಿ ಅಧ್ಯಯನ ಮಾಡಿ ವರದಿ ಕೊಡಿ ಎಂದು ಜವಳಿ ಸಚಿವ ಶಿವಾನಂದ ಪಾಟೀಲ ಅವರು ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಹುಕ್ಕೇರಿ ತಾಲೂಕಿನ ಕುರ್ಣೆ ಟೆಕ್ಸ್ಟೈಲ್ ಪಾರ್ಕ್ ಗೆ ಶನಿವಾರ ಭೇಟಿ ನೀಡಿ ಪರಿಶೀಲನೆ ಮಾಡಿ ಪವರ್ಲೂಮ್ ಮಾಲೀಕರ ಅಹವಾಲು ಸ್ವೀಕರಿಸಿದ ನಂತರ ಮಾತನಾಡಿದ ಅವರು, ವಿದ್ಯುತ್ ಬದಲಿಗೆ ಸೋಲಾರ್ ಅಳವಡಿಸಿಕೊಂಡರೆ ಅದರ ಸಾಧಕ ಬಾಧಕಗಳೇನು ಎಂಬ ಬಗ್ಗೆಯೂ ವರದಿ ಕೊಡಿ ಎಂದು ಸೂಚನೆ ನೀಡಿದರು.
ಜವಳಿ ಉದ್ಯಮ ಅಭಿವೃದ್ಧಿ ಮತ್ತು ನೇಕಾರರ ಹಿತ ಗಮನದಲ್ಲಿರಿಸಿಕೊಂಡು ಹೊಸ ಜವಳಿ ನೀತಿ ರೂಪಿಸಲಾಗುತ್ತಿದೆ. ಉದ್ಯಮಕ್ಕೆ ಪೂರಕವಾಗಿ ನೀತಿಯಲ್ಲಿ ಸೇರ್ಪಡೆ ಮಾಡಬೇಕಾದ ಅಂಶಗಳ ಬಗ್ಗೆ ಪರಿಣಿತರಿಂದ ಸಲಹೆ ಪಡೆಯಲಾಗುತ್ತಿದೆ ಎಂದು ಹೇಳಿದರು.
ಬೆಳಗಾವಿ ಜಿಲ್ಲೆಯಲ್ಲಿ ಜವಳಿ ಉದ್ಯಮವನ್ನು ಬೆಳೆಸಬೇಕಾದರೆ ಮಹಾರಾಷ್ಟ್ರ ಸರ್ಕಾರದ ವಿದ್ಯುತ್ ನೀತಿಯನ್ನು ಕರ್ನಾಟಕದಲ್ಲೂ ಜಾರಿಗೆ ತರಬೇಕು ಹಾಗೂ ಬಂಡವಾಳ ಸಬ್ಸಿಡಿಯನ್ನು ಸಕಾಲಕ್ಕೆ ಬಿಡುಗಡೆ ಮಾಡಬೇಕು ಎಂದು ಜವಳಿ ಉದ್ಯಮಿಗಳು ಸಚಿವರಿಗೆ ಮನವಿ ಮಾಡಿದರು.
ಮಹಾರಾಷ್ಟ್ರದಲ್ಲಿ ವಿದ್ಯುತ್ ಜವಳಿ ಉದ್ಯಮ ಬೆಳವಣಿಗೆಗೆ ಪೂರಕವಾಗಿದೆ. ವಿದ್ಯುತ್ ಸಬ್ಸಿಡಿಯನ್ನು 25 ವರ್ಷಗಳವರೆಗೆ ಮುಂದುವರಿಸಬೇಕು ಆಗ ಈ ಭಾಗದಲ್ಲಿ ಸುಮಾರು ಒಂದು ಸಾವಿರ ಕೋಟಿ ಹೂಡಿಕೆ ನಿಶ್ಚಿತ. ಆಗ ಸುಮಾರು ಮೂರು ಸಾವಿರ ಉದ್ಯೋಗ ಸೃಷ್ಟಿಯಾಗಲಿವೆ ಎಂದು ಹೇಳಿದರು.
ವಿದ್ಯುತ್ ಸಬ್ಸಿಡಿ ಬಿನ್ನಲ್ಲೇ ಕಡಿತ ಮಾಡುವ ಪದ್ಥತಿ ಸೂಕ್ತ. ವಿದ್ಯುತ್ ಬಿಲ್ ಪಾವತಿ ಮಾಡಿದ ನಂತರ ಸರ್ಕಾರ ಸಬ್ಸಿಡಿಯನ್ನು ಮರುಪಾವತಿ ಮಾಡುವ ವ್ಯವಸ್ಥೆ ಉದ್ಯಮಪೂರಕವಲ್ಲ ಎಂದು ಹೇಳಿದರು.
ಅಹವಾಲು ಕೇಳಿದ ಸಚಿವರು, ನಮ್ಮ ಸರ್ಕಾರ ಜವಳಿ ಉದ್ಯಮ ಬೆಳೆಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿದೆ. ಹೀಗಾಗಿ ಅಭಿಪ್ರಾಯಗಳನ್ನು ಸಂಗ್ರಹ ಮಾಡಲಾಗುತ್ತದೆ. ಪೂರಕವಾಗಿರುವ ಅಂಶಗಳನ್ನು ಪರಿಗಣಿಸಿ ಜಾರಿಗೆ ತರಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
ಮಹಾರಾಷ್ಟ್ರ ಸರ್ಕಾರಕ್ಕೆ ಹೋಲಿಕೆ ಮಾಡಿದರೆ ಕರ್ನಾಟಕ ಸರ್ಕಾರ ಜವಳಿ ಉದ್ಯಮಕ್ಕೆ ಹೆಚ್ಚು ಪ್ರೋತ್ಸಾಹ ನೀಡುತ್ತಿದೆ. ಆದರೂ ಸಹ ಇನ್ನೂ ಹೆಚ್ಚಿನ ಬೆಳವಣಿಗೆ ದೃಷ್ಟಿಯಿಂದ ಮಹಾರಾಷ್ಟ್ರದ ನೀತಿಯನ್ನೂ ಅಧ್ಯಯನ ಮಾಡಿ ಸಾಧ್ಯವಿರುವ ಅಂಶಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.
ಪಶುಪತಿನಾಥ ಟೆಕ್ಸ್ಟೈಲ್ಸ್ ಘಟಕಕ್ಕೆ ಭೇಟಿ ನೀಡಿ ಏರ್ಜೆಟ್ ಮಗ್ಗ ಕಾರ್ಯನಿರ್ವಹಣೆ ಬಗ್ಗೆ ಸಚಿವರು ಮಾಹಿತಿ ಪಡೆದರು. ಸ್ಪರ್ಧಾತ್ಮಕ ಜವಳಿ ಉದ್ಯಮದಲ್ಲಿ ಪೈಪೋಟಿ ನೀಡಲು ಏರ್ಜೆಟ್ ಮಗ್ಗಗಳು ಸೂಕ್ತವಾಗಿವೆ ಎಂದು ಟೆಕ್ಸ್ಟೈಲ್ ಅಡ್ವೈಸರ್ ರಮಾನಂದ ಕುಲಕರ್ಣಿ ತಿಳಿಸಿದರು. ಜವಳಿ ಇಲಾಖೆ ಬೆಳಗಾವಿ ವಿಭಾಗದ ಜಂಟಿ ನಿರ್ದೇಶಕ ಡಾ. ಶಿವರಾಜ ಕುಲಕರ್ಣಿ ಅವರು ಕುರ್ಣೆ ಟೆಕ್ಸ್ಟೈಲ್ ಪಾರ್ಕ್ ಯೋಜನೆ ಬಗ್ಗೆ ವಿವರಿಸಿದರು. ಪ್ರಶಾಂತ್ ಗೌಡರ್ ಹರ್ಷವರ್ಧನ್ ಕುರಣೆ, ದಯಾನಿಧಿ ಕುರಣೆ, ಅಂಕಿತ್ ಬಹೆಟಿ, ಕೃಷ್ಣ ಗಿಲಾದ, ಪ್ರಶಾಂತ್ ಗೌಡರ್ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ