Kannada NewsKarnataka NewsLatest

48.65 ಕೋಟಿ ರೂ. ಅನುದಾನ ಬಿಡುಗಡೆ

ಪ್ರಗತಿವಾಹಿನಿ ಸುದ್ದಿ, ಗೋಕಾಕ : ಅರಭಾವಿ ಮತಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ ೪೮.೬೫ ಕೋಟಿ ರೂ.ಗಳ ಅನುದಾನ ಬಿಡುಗಡೆಯಾಗಿದೆ ಎಂದು ಅರಭಾವಿ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.
ಹೇಳಿಕೆ ಬಿಡುಗಡೆ ಮಾಡಿರುವ ಅವರು, ಲೋಕೋಪಯೋಗಿ ಇಲಾಖೆಯ ರಸ್ತೆಗಳ ಅಭಿವೃದ್ಧಿಗಾಗಿ ೨೫ ಕೋಟಿ ರೂ., ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆಯಿಂದ ರಸ್ತೆಗಳ ಸುಧಾರಣೆಗಾಗಿ ೩ ಕೋಟಿ ರೂ., ಜಲಸಂಪನ್ಮೂಲ ಇಲಾಖೆಯಿಂದ ರಸ್ತೆಗಳ ಅಭಿವೃದ್ಧಿಗಾಗಿ ೯.೭೫ ಕೋಟಿ ರೂ. ಬಿಡುಗಡೆಯಾಗಿದೆ.

ನಗರಾಭಿವೃದ್ಧಿ ಇಲಾಖೆಯ ಎಸ್‌ಎಫ್‌ಸಿ ಯೋಜನೆಯಡಿ ಮೂಡಲಗಿ ಪುರಸಭೆ ಹಾಗೂ ಅರಭಾವಿ, ಕಲ್ಲೋಳಿ, ನಾಗನೂರ ಪಟ್ಟಣ ಪಂಚಾಯತಗಳ ವ್ಯಾಪ್ತಿಯ ರಸ್ತೆಗಳ ಸುಧಾರಣೆಗೆ ೫ ಕೋಟಿ ರೂ.ಗಳ ಅನುದಾನ ಸರ್ಕಾರದಿಂದ ಬಿಡುಗಡೆಯಾಗಿದೆ ಎಂದು ಅವರು ತಿಳಿಸಿದ್ದಾರೆ.
ಸಣ್ಣ ನೀರಾವರಿ ಇಲಾಖೆಯಿಂದ ೧೩ ಬ್ಯಾರೇಜ್‌ಗಳ ಸುಧಾರಣೆ, ೪ ಏತ ನೀರಾವರಿ ಕಾಮಗಾರಿಗಳ ಸುಧಾರಣೆ ಹಾಗೂ ೩ ಕೆರೆಗಳ ಸುಧಾರಣೆಗಾಗಿ ೪.೯೦ ಕೋಟಿ ರೂ. ಅನುದಾನ ಸೇರಿದಂತೆ ಒಟ್ಟಾರೆ ೪೮.೬೫ ಕೋಟಿ ರೂ.ಗಳ ಅನುದಾನ ಬಿಡುಗಡೆಯಾಗಿದೆ ಎಂದು ಹೇಳಿದರು.

ಧರ್ಮಟ್ಟಿ ಸೇತುವೆಗೆ ಒಂದು ಕೋಟಿ ರೂ :

ಧರ್ಮಟ್ಟಿ-ಮೂಡಲಗಿ ರಸ್ತೆಯ ಧರ್ಮಟ್ಟಿ ಹಳ್ಳಕ್ಕೆ ಸೇತುವೆ ನಿರ್ಮಾಣಕ್ಕಾಗಿ ಜಲಸಂಪನ್ಮೂಲ ಇಲಾಖೆಯಿಂದ ಒಂದು ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಶೀಘ್ರದಲ್ಲಿಯೇ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.
ಶಾಲಾ ಕಟ್ಟಡಗಳ ದುರಸ್ತಿಗಾಗಿ ೧೦.೧೭ ಕೋಟಿ ರೂ. ಪ್ರಸ್ತಾವನೆ : ಪ್ರವಾಹದಿಂದ ಹಾನಿಗೊಳಗಾದ ಮೂಡಲಗಿ ಶೈಕ್ಷಣಿಕ ವಲಯದ ಶಾಲಾ ಕೊಠಡಿಗಳ ದುರಸ್ತಿಗಾಗಿ ೫.೨೮ ಕೋಟಿ ರೂ. ಹಾಗೂ ಗೋಕಾಕ ಶೈಕ್ಷಣಿಕ ವಲಯದ ಶಾಲಾ ಕೊಠಡಿಗಳ ದುರಸ್ತಿಗಾಗಿ ೪.೮೯ ಕೋಟಿ ರೂ.ಗಳ ಅನುದಾನಕ್ಕಾಗಿ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ.

ಹಿಂದೆಂದೂ ಕಂಡರಿಯದ ನೆರೆ ಪ್ರವಾಹದಿಂದಾಗಿ ಮೂಡಲಗಿ ವಲಯದ ೧೯೪ ಶಾಲೆಗಳ ೪೫೯ ಕೊಠಡಿಗಳು ಹಾನಿಗೊಳಗಾಗಿವೆ. ಜೊತೆಗೆ ಗೋಕಾಕ ವಲಯದ ೧೦೩ ಶಾಲೆಗಳ ೪೧೭ ಶಾಲಾ ಕೊಠಡಿಗಳು ಕೂಡ ಹಾನಿಯಾಗಿವೆ. ಇವುಗಳ ದುರಸ್ತಿಗಾಗಿ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಇಷ್ಟರಲ್ಲಿಯೇ ಅನುದಾನ ಬಿಡುಗಡೆಯಾಗಲಿದೆ ಎಂದು ಹೇಳಿದರು.
ಇನ್ನೂ ೪ ಬ್ಯಾರೇಜ್‌ಗಳ ಸುಧಾರಣೆಗೆ ೨ ಕೋಟಿ ರೂ.ಗಳ ಅನುದಾನಕ್ಕಾಗಿ ಸಣ್ಣ ನೀರಾವರಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಅವರು ಮಾಹಿತಿ ನೀಡಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button