Politics

*ನನ್ನ ಕೊಲೆ ಯತ್ನ ನಡೆದಿದೆ: ಘಟನೆಗೆ ಡಿ.ಕೆ ಸಹೋದರರೇ ಕಾರಣ: ಶಾಸಕ ಮುನಿರತ್ನ ಗಂಭೀರ ಆರೋಪ*

ಪ್ರಗತಿವಾಹಿನಿ ಸುದ್ದಿ: ಆರ್.ಆರ್.ನಗರ ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ ಪ್ರಕರಣ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಮೊಟ್ಟೆ ಎಸೆತ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಾಸಕ ಮುನಿರತ್ನ, ನನ್ನ ಮೇಲೆ ಕೊಲೆ ಯತ್ನ ನಡೆದಿದೆ. ಘಟನೆಗೆ ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್ ಕಾರಣ ಎಂದು ಆರೋಪಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುನಿರತ್ನ, ನನ್ನ ಮೇಲೆ ಕೊಲೆಯತ್ನ ನಡೆಯುವ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದರು, ಅವರು ಹೇಳಿ ಕೆಲ ಸಮಯದಲ್ಲೇ ಮೊಟ್ಟೆ ಎಸೆತ ಪ್ರಕರಣ ನಡೆದಿದೆ. ಪೊಲೀಸರು ನನ್ನನ್ನು ರಕ್ಷಿಸಿದ್ದಾರೆ ಎಂದರು.

ನನ್ನನ್ನು ಗುಂಪಿನಲ್ಲಿ ಕೊಲೆ ಮಾಡುವ ಪ್ರಯತ್ನ ನಡೆದಿದೆ. ಪೊಲೀಸರು ರಕ್ಷಣೆ ಮಾಡದಿದ್ದರೆ ಕೊಲೆಯಾಗಿ ಬಿಡುತ್ತಿದ್ದೆ. ಮೊಟ್ಟೆ ಎಸೆತ, ಕೊಲೆ ಯತ್ನ ಈ ಎಲ್ಲಾ ಘಟನೆಗಳಿಗೆ ಡಿಸಿಎಂ ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್, ಹನುಮಂತರಾಯಪ್ಪ, ಕುಸುಮಾ ಹಾಗೂ ಕೆಲ ರೌಡಿಗಳು ಕಾರಣ. ಒಂದು ವೇಳೆ ನನ್ನ ಕೊಲೆಯಾದರೆ ಇವರೆಲ್ಲರೂ ಕಾರಣ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಸಿ.ಟಿ.ರವಿ ಅವರನ್ನು ಕೊಲ್ಲುವ ಯತ್ನದಂತೆ ನನ್ನನ್ನೂ ಕೊಲೆ ಮಡುವ ಯತ್ನ ನಡೆದಿದೆ. ಈ ಹಿಂದಿನಿಂದಲೂ ನನಗೆ ಬೆದರಿಕೆ ಹಾಕಲಾಗುತ್ತಿತ್ತು. ರಾಜೀನಾಮೆ ನೀಡುವಂತೆ ಒತ್ತಾಯಿಸಿ ಬೆದರಿಕೆ ಹಾಕಲಾಗಿತ್ತು. ನನ್ನ ಕೊಲೆ ಮಾಡುವ ಬೆದರಿಕೆ ಕೂಡ ಹಾಕಿದ್ದರು. ಈ ಬಗ್ಗೆ ನಾನು ರಾಜ್ಯಪಾಲರಿಗೆ, ಪ್ರಧಾನಮಂತ್ರಿ ಕಚೇರಿಗೆ, ಕೇಂದ್ರ ಗೃಹ ಕಚೇರಿ, ಸಿಬಿಐ ಗೂ ಪತ್ರ ಬರೆದು ದೂರು ನೀಡಿದ್ದೇನೆ ಎಂದು ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button