Belagavi NewsBelgaum NewsKarnataka News

*ಬೆಳಗಾವಿ ಜಿಲ್ಲೆಯ ಬರಹಗಾರರಿಂದ ಮೌಲ್ಯಯುತ ಸಾಹಿತ್ಯ ಸೃಷ್ಟಿಯಾಗಿದೆ: ಡಾ. ಶ್ರೀಧರ ಹೆಗಡೆ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಜಿಲ್ಲೆಯ ಸಾಹಿತ್ಯ ಬೆಳೆ ಅತ್ಯಂತ ಫಲವತ್ತವಾದುದು. ಮೌಲ್ಯಯುತ ಸಾಹಿತ್ಯ ಕೃತಿಗಳು ಜಿಲ್ಲೆಯ ಲೇಖಕ, ಲೇಖಕಿ, ಅನುವಾದಕರಿಂದ ಸೃಷ್ಟಿಯಾಗಿವೆ. ಅದನ್ನು ಗುರುತಿಸಿ ಗೌರವಿಸುವ ಕಾರ್ಯವನ್ನು ತುಂಬ ಪಾರದರ್ಶಕವಾಗಿ ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನ ಟ್ರಸ್ಟ್ ನಡೆಸಿಕೊಡುತ್ತಿದೆ. ಇಲ್ಲಿ ಬಹುಮಾನಿತ ಕೃತಿಗಳು ರಾಜ್ಯ, ರಾಷ್ಟ್ರಮಟ್ಟದ ಬಹುಮಾನಗಳನ್ನು ಪಡೆದಿವೆ ಎಂದು ಡಾ. ಶ್ರೀಧರ ಹೆಗಡೆ ಭದ್ರನ್ ಹೇಳಿದರು.


ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನದವರು ಇದೇ ದಿನಾಂಕ ೨೫ ಬುಧವಾರದಂದು ಮು. ೧೦ ಗಂಟೆಗೆ ನಗರದ ಐಎಂಇಆರ್ ಸಭಾಭವನದಲ್ಲಿ ಸಿರಗನ್ನಡ ಗೌರವ ಪ್ರಶಸ್ತಿ, ಸಿರಿಗನ್ನಡ ಪುಸ್ತಕ ಪ್ರಶಸ್ತಿ ಹಾಗೂ ವಿವಿಧ ದತ್ತಿನಿಧಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಮ್ಮಿಕೊಂಡಿದ್ದರು. ಸ್ಪರ್ಧೆಯ ಮೌಲ್ಯಮಾಪಕರಾಗಿದ್ದ ಡಾ. ಹೆಗಡೆಯವರು ಮಾತನಾಡುತ್ತ ಮೇಲಿನಂತೆ ಅಭಿಪ್ರಾಯಪಟ್ಟರು.


ಮುಂದೆ ಮಾತನಾಡುತ್ತ ಅವರು, ಕಲೆ ಸಾಹಿತ್ಯವನ್ನು ಉಳಿಸುವ ಬೆಳಸುವ ಗೌರವಿಸುವ ದೊಡ್ಡ ಹೊಣೆಗಾರಿಕೆ, ಜವಾಬ್ದಾರಿ ಸಮಾಜದ ಮೇಲಿದೆ. ಹಿಂದಿನ ಕಾಲದಲ್ಲಿ ರಾಜ ಮಹಾರಾಜರು ಆಸ್ಥಾನ ಕವಿಯನ್ನಾಗಿ ಇಟ್ಟುಕೊಂಡು ಸುವರ್ಣ ನಾಣ್ಯಗಳಿಂದ ಅಭಿಷೇಕ ಮಾಡುವುದು. ಅವರ ಕೃತಿಗಳನ್ನು ಆನೆಯ ಅಂಬಾರಿಯಲ್ಲಿಟ್ಟು ಮೆರವಣಿಗೆ ಮಾಡುವುದರ ಮೂಲಕ ಕೃತಿ ಕೃತಿಕಾರರನ್ನು ಗೌರವಿಸುತ್ತಿದ್ದರು. ಇಂದು ಅಕಾಡಮಿಗಳು ಹಾಗೂ ಟ್ರಸ್ಟ್ ಗಳು ಈ ಕೆಲಸಗಳನ್ನ ಮುಂದೆವರೆಸುಕೊಂಡು ಬಂದಿವೆ. ಈ ಕುರಿತಂತೆ ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನವು ಮಾಡುತ್ತಿರುವ ಕಾರ್ಯ ಮಹತ್ತರವಾದುದು ಎಂದು ಹೇಳಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಹಿರಿಯ ನ್ಯಾಯವಾದಿ ಪ್ರತಿಷ್ಠಾನದ ಅಧ್ಯಕ್ಷ ಎಸ್. ಎಂ. ಕುಲಕರ್ಣಿಯವರು ಮಾತನಾಡುತ್ತ ಸ್ಪರ್ಧೆಯಲ್ಲಿ ಬಹುಮಾನ ಪಡೆದ ಕೃತಿಗಳ ಕುರಿತು ಮೌಲ್ಯ ಮಾಪಕರು ಮಾಡಿದ ಕೃತಿ ವಿಮರ್ಶೆಯನ್ನು ಪುಸ್ತಕ ರೂಪದಲ್ಲಿ ಇನ್ನು ಮುಂದೆ ತರಲಾಗುವುದು ಇದೊಂದು ದಾಖಲೆಯಾಗಿ ಉಳಿಯುತ್ತದೆ ಎಂದು ಹೇಳಿದರು.


ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನವು ನೀಡುವ ಸಿರಿಗನ್ನಡ ಗೌರವ ಪ್ರಶಸ್ತಿಗೆ ಹಿರಿಯರಾದ ಜಯಂತ ಜೋಶಿ ಮತ್ತು ಐ.ಆರ್. ಮಠಪತಿಯವರು ಭಾಜನರಾದರು ಅಲ್ಲದೇ ಯುವ ಬರೆಹಗಾರ ಸಂತೋಷ ನಾಯಕ ಅವರ ‘ಹೊಸ ವಿಳಾಸದ ಹೆಜ್ಜೆಗಳು’ ಕೃತಿ ಹಾಗೂ ಡಾ. ಬಾಳಣ್ಣ ಶೀಗಿಹಳ್ಳಿಯವರ ‘ಮುಡಿವ ಭೋಗಿಗಳಿಗೆ’ ಕೃತಿಗಳು ಸಿರಿಗನ್ನಡ ಪುಸ್ತಕ ಪ್ರಶಸ್ತಿಯನ್ನು ಪಡೆದುಕೊಂಡವು.


ಜೀವಮಾನ ಸಾಧನೆ ದತ್ತಿನಿಧಿ ಪ್ರಶಸ್ತಿಗಳನ್ನು ಪ್ರಾಣನಾಥಾಚಾರ್ಯ ಪಾಂಗ್ರಿ (ಲೇಖಕರ ಜೀವಮಾನ ಸಾಧನೆಗಾಗಿ), ಶಾಂತಾ ಆಚಾರ್ಯ (ಸಾಮಾಜಿಕ ಸೇವೆ), ಈಶ್ವರ ಮಮದಾಪುರ (ಶಿಕ್ಷಕ ಸಾಹಿತಿ), ಸಿರಿಗನ್ನಡ ಬಳಗ (ಅತ್ಯುತ್ತಮ ಪ್ರಕಾಶಕರು), ಮಂಜುಳಾ ಜೋಶಿ (ವೇಣುನಾದ ಪ್ರಶಸ್ತಿ), ಬಿ. ಎಸ್. ಗವಿಮಠ (ವೈಚಾರಿಕ ಸಂಪನ್ಮೂಲ ವ್ಯಕ್ತಿ), ಈಶ್ವರಚಂದ್ರ ಬೆಟಗೇರಿ (ಜಾನಪದ ಕಲಾವಿದ) ಪಡೆದರು.


ದತ್ತಿನಿಧಿ ಪುಸ್ತಕ ಪ್ರಶಸ್ತಿಗಳನ್ನು ಗುಂಡೇನಟ್ಟಿ ಮಧುಕರ (ಮೋದಿಜಿಗೊಂದು ಬಹಿರಂಗ ಪತ್ರ), ಪಾರ್ವತಿ ಪಿಟಗಿ (ಚಂದ್ರಯಾನ), ಡಾ. ಗುರುದೇವಿ ಹುಲೆಪ್ಪನವರಮಠ (ಬೆಳಗು ಜಗವ ಮಗು), ರಂಜನಾ ನಾಯಕ (ಕನಸಿನಿಂದ ಹಸೆಮಣೆಯವರೆಗೆ), ಡಾ. ಗುರುಪಾದ ಮರಿಗುದ್ದಿ (ಡಾ. ರಾಗೌ ಸಾಹಿತ್ಯ ಮಂಥನ), ಶ್ವೇತಾ ನರಗುಂದ (ಆಯಾಮ), ವಿದ್ಯಾ ರೆಡ್ಡಿ (ಭಾವಬಿಂದು), ಮಾಲಾ ಅಕ್ಕಿಶೆಟ್ಟರ (ಸ್ವಾವಲಂಬಿ ಬದುಕಿನಾಚೆ), ಎಲ್.ಎಸ್. ಶಾಸ್ತಿç (ಕನ್ನಡದ ಭಾಗ್ಯ), ದೀಪಿಕಾ ಚಾಟೆ (ಶ್ರೀರಾಮಚಂದ್ರ ಚರಿತ), ಇಂದಿರಾ ಹೋಳಕರ (ಮಿಂಚು ಮಿಂಚೈತಿ) ಪಡೆದರು. ವಿಜೇಯಿತರನ್ನು ವೇದಕೆ ಮೇಲೆ ಸನ್ಮಾನಿಸಿ ಗೌರವಿಸಲಾಯಿತು.


ಪ್ರೌಢಶಾಲಾ ವಿದ್ಯಾರ್ಥಿಗಳ ಪ್ರಬಂಧ ಸ್ಪರ್ಧೆ, ಕನ್ನಡೇತರ ಶಾಲೆಗಳಲ್ಲಿ ಓದುತ್ತಿರುವ ಮಕ್ಕಾಳಿಗಾಗಿ ಕನ್ನಡ ವಾಚನ ಸ್ಪರ್ಧೆ, ಪ್ರೌಢಶಾಲಾ ಮಕ್ಕಳಿಗಾಗಿ ದಾಸರಪದಗಳ ಗಾಯನ ಸ್ಪರ್ಧೆ, ಪ್ರಾಥಮಿಕ ಶಾಲಾ ಶಿಕ್ಷಕರಿಗಾಗಿ ಚರ್ಚಾಕೂಟ ಸ್ಪರ್ಧೆಗಳಲ್ಲಿ ವಿಜೇತರನ್ನ ಬಹುಮಾನ, ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.


ಡಾ. ಮಲ್ಲಿಕಾರ್ಜುನ ಹೂಗಾರ ಅತಿಥಿಗಳಾಗಿ ಆಗಮಿಸಿದ್ದರು. ದೀಪಾ ಪದಕಿ ಪ್ರಾರ್ಥಿಸಿದರು. ನೀರಜಾ ಗಣಾಚಾರಿ, ಸಂಜೀವ ಕುಲಕರ್ಣಿ, ಮೋಹನ ಗುಂಡ್ಲೂರ, ಡಾ. ಶ್ರೀಧರ ಹುಕ್ಕೇರಿ, ನಾರಾಯಣ ಗಣಾಚಾರಿ, ಎನ್. ಬಿ. ದೇಶಪಾಂಡೆ, ಎಚ್. ಎಸ್. ದೇಶಪಾಂಡೆ, ಅನಂತ ಗೋಣಬಾಳ ಬಹುಮಾನ ವಿಜೇತರನ್ನು ಪರಿಚಯಿಸಿದರು. ಡಾ. ಪಿ. ಜಿ. ಕೆಂಪಣ್ಣವರ ಸ್ವಾಗತಿಸಿದರು. ಶಿರೀಷ ಜೋಶಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button