ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ದೇಶ ಕಂಡ ಮುತ್ಸದ್ದಿ ಪ್ರಧಾನಿ, ಶ್ರೇಷ್ಠ ಆರ್ಥಿಕ ಉದಾರೀಕರಣದ ಹರಿಕಾರರಾಗಿದ್ದ ಮನಮೋಹನ್ ಸಿಂಗ್ ಅವರ ನಿಧನ ಸಮಸ್ತ ದೇಶಕ್ಕೆ ದುಃಖವನ್ನುಂಟು ಮಾಡಿದೆ ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ.ಪ್ರಭಾಕರ ಕೋರೆ ಅವರು ತೀವ್ರ ಕಂಬನಿಯನ್ನು ಮಿಡಿದಿದ್ದಾರೆ.
ಮನಮೋಹನ್ ಸಿಂಗ್ ಅವರು ಮೂಲತಃ ಒಬ್ಬ ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿ, ಆರ್‌ಬಿಐ ಗೌವರ್ನರ್ ಆಗಿ, ಹಣಕಾಸು ಸಚಿವರಾಗಿ ಕೈಗೊಂಡ ಆರ್ಥಿಕ ಧೋರಣೆಗಳು ದೇಶವನ್ನು ಪುನಶ್ಚೇತನಗೊಳಿಸುವಲ್ಲಿ ಮಹತ್ವದ ಪಾತ್ರವಹಿಸಿದ್ದವು. ಅವರು ಎಲ್ಲಕ್ಕೂ ಮಿಗಿಲಾಗಿ ಒಬ್ಬ ದೂರದೃಷ್ಟಿಯ ರಾಜನೀತಿಜ್ಞನಾಗಿ ದೇಶದ ಅಭಿವೃದ್ಧಿಯಲ್ಲಿ ಮೌಲ್ಯವರ್ಧಿತ ಕೊಡುಗೆಯನ್ನು ನೀಡಿದ್ದರು.
ಮಾಜಿ ಪ್ರಧಾನಿಯಾಗಿದ್ದ ದಿವಂಗತ ಪಿ.ವ್ಹಿ.ನರಸಿಂಹರಾವ್ ಅವರ ಅವಧಿಯಲ್ಲಿ ಆರ್ಥಿಕ ಸಚಿವರಾಗಿ ನಿರ್ವಹಿಸಿದ ಕಾರ್ಯ ಇಂದಿಗೂ ಅವಿಸ್ಮರಣೀಯವೆನಿಸಿದೆ. ದೇಶದ ಆರ್ಥಿಕ ಭದ್ರತೆಗೆ ಅವರು ಹಾಕಿಕೊಂಡ ರೂಪರೇಷೆಗಳು ಅನೇಕ ವಿದೇಶಿ ಆರ್ಥಿಕ ತಜ್ಞರನ್ನೂ ಪ್ರಭಾವಿತಗೊಳಿಸಿತ್ತು. ಮಾತ್ರವಲ್ಲದೇ ಹಲವು ಮುಂದುವರೆದ ದೇಶಗಳೂ ಕೂಡ ಅವರ ಸಲಹೆಗಳನ್ನು ಪಡೆಯುತ್ತಿದ್ದವು ಎಂದರೆ ಅವರ ಸಾಮರ್ಥ್ಯ ಎಂತಹದಿತ್ತು ಎಂಬುದನ್ನು ಅರಿಯಲೇಬೇಕು.
೧೯೯೦-೧೯೯೬ ಕಾಲಘಟ್ಟದಲ್ಲಿ ನಾನು ರಾಜ್ಯಸಭಾ ಸದಸ್ಯನಾಗಿ ಅವರೊಂದಿಗೆ ಸೇವೆ ಸಲ್ಲಿಸಿದ್ದು ಅಪರೂಪದ ಘಳಿಗೆಯಲ್ಲಿ ಒಂದಾಗಿದೆ. ಬಹಳ ಹತ್ತಿರದಿಂದ ಕಂಡಿದ್ದ ನಾನು ಅವರೊಂದಿಗೆ ಸೇವೆ ಸಲ್ಲಿಸಿದ್ದನ್ನು ಮರೆಯುವುದಿಲ್ಲ. ಶ್ರೇಷ್ಠ ಮಾರ್ಗದರ್ಶಕರಾಗಿ, ರಾಜಕೀಯ ಪಾವಿತ್ರ್ಯವನ್ನು ಎತ್ತಿಹಿಡಿದ್ದ ಮನಮೋಹನ್ ಸಿಂಗ್‌ರು ನಮ್ಮಂಥ ಅನೇಕ ರಾಜಕಾರಣಿಗಳ ಮೇಲೆ ಪ್ರಭಾವ ಬೀರಿದ್ದರು. ಅವರ ಸರಳತೆ, ಸೌಜನ್ಯತೆ, ಹಿತಮಿತ ಭಾಷೆ, ನಡೆನುಡಿ ಸಂಸತ್ತಿನ ಘನತೆಯನ್ನು ಹೆಚ್ಚಿಸಿತ್ತು.
ಬಡತನದಿಂದ ಬಂದು ಅತ್ಯುನ್ನತ ಅರ್ಥಶಾಸ್ತ್ರಜ್ಞರಾಗಿ ದೇಶದ ಸರ್ವೋನ್ನತ ಪ್ರಧಾನಿ ಹುದ್ದೆಯನ್ನು ಅಲಂಕರಿಸಿದ್ದರೂ ಘನತೆಗೆ ಕುಂದುಂಟಾಗುವಂತೆ ವರ್ತಿಸಲಿಲ್ಲ, ತಾಳ ತಪ್ಪಿ ಹೇಳಿಕೆಗಳನ್ನು ನೀಡಲಿಲ್ಲ. ಅವರು ನಿಜವಾದ ಪ್ರಾಜ್ಞರಾಗಿದ್ದರು. ರಾಜಕೀಯ ಬದ್ಧತೆಯನ್ನು ಎತ್ತಿಹಿಡಿದ್ದ ಅಪರೂಪದ ವ್ಯಕ್ತಿಯಾಗಿದ್ದರು. ಹತ್ತುವರ್ಷಗಳ ಕಾಲ ದೇಶದ ಪ್ರಧಾನಿಯಾಗಿ ಅವರು ನೀಡಿದ ಸೇವೆ ಅನುಪಮ. ಅಂತಹ ಪ್ರಧಾನಿ ಇಂದಿನ ಯುವ ಜನಾಂಗಕ್ಕೆ ಹಾಗೂ ಯುವ ಜನಪ್ರತಿನಿಧಿಗಳಿಗೆ ಮಾದರಿಯಾಗಿದ್ದಾರೆ.
ಭಗವಂತನು ಅವರ ದಿವ್ಯಾತ್ಮಕ್ಕೆ ಚಿರಶಾಂತಿಯನ್ನು ನೀಡಲಿ, ಅವರ ಕುಟುಂಬಕ್ಕೆ ಅಗಲಿಕೆ ದುಃಖವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಕರುಣಿಸಲೆಂದು ಸಮಸ್ತ ಕೆಎಲ್‌ಇ ಪರಿವಾರದಿಂದ ಡಾ.ಕೋರೆಯವರು ಭಾವಪೂರ್ಣ ಶ್ರದ್ಧಾಂಜಲಿಯನ್ನು ಸಲ್ಲಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ