Belagavi NewsBelgaum NewsPolitics

*ಬೆಳಗಾವಿಯಲ್ಲಿ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶ: 2028ರ ಚುನಾವಣೆಗೆ ಮುನ್ನುಡಿ ಬರೆಯಬೇಕು: ಡಿಸಿಎಂ*

“ಗಾಂಧಿಜಿ ಹಾಗೂ ಅಂಬೇಡ್ಕರ್ ಅವರ ಸ್ಮರಣೆ ಹಾಗೂ ಸಂವಿಧಾನದ ರಕ್ಷಣೆಯ ಉದ್ದೇಶದಿಂದ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶ ನಡೆಸಲಾಗುತ್ತಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ಹುಬ್ಬಳ್ಳಿಯಲ್ಲಿ ಪಕ್ಷದ ನಾಯಕರೊಂದಿಗೆ ಸಮಾವೇಶದ ಪೂರ್ವಭಾವಿ ಸಭೆ ಹಾಗೂ ನಂತರ ನಡೆದ ಮಾಧ್ಯಮಗೋಷ್ಠಿಯಲ್ಲಿ ಶಿವಕುಮಾರ್ ಅವರು ಮಾತನಾಡಿದರು.

“ನಮ್ಮ ಜೈ ಬಾಪು, ಜೈ ಭೀಮ್ ಜೈ ಸಂವಿಧಾನ್ ಸಮಾವೇಶ ಇಡೀ ದೇಶಕ್ಕೆ ದೊಡ್ಡ ಸಂದೇಶ ರವಾನಿಸುವ ಸಮಾವೇಶವಾಗಿದೆ. ಬೆಳಗಾವಿ ಮೂಲಕ ದೇಶಕ್ಕೆ ಹೊಸ ಸಂದೇಶ ರವಾನಿಸಲಾಗುವುದು. ಗಾಂಧಿ ಅವರ ಇತಿಹಾಸ ಕಾಂಗ್ರೆಸ್ ಇತಿಹಾಸ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲಾ ವರ್ಗಗಳು ಅಧಿಕಾರಕ್ಕೆ ಬಂದಂತೆ. ಗಾಂಧಿಜಿ ಅವರ ಕಾರ್ಯಕ್ರಮವನ್ನು ನಾವು ದೇಶಕ್ಕಾಗಿ ಮಾಡುತ್ತಿದ್ದೇವೆ. ದೇಶಕ್ಕೆ ಅವರು ಕೊಟ್ಟ ಬುನಾದಿ ಮೇಲೆ ಚರ್ಚೆ ನಡೆಯುತ್ತಿದೆ” ಎಂದು ತಿಳಿಸಿದರು.

ಸಂವಿಧಾನ ನಮ್ಮೆಲ್ಲರ ಪಾಲಿನ ಪವಿತ್ರ ಗ್ರಂಥ:

“ಮಹಾತ್ಮಾ ಗಾಂಧಿ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ಸ್ವಾತಂತ್ರ್ಯ ಹೋರಾಟದ ನೇತೃತ್ವ ವಹಿಸಿಕೊಂಡು ನೂರು ವರ್ಷ ಪೂರ್ಣಗೊಂಡಿದೆ. ಅಖಂಡ ಕರ್ನಾಟಕಕ್ಕೆ ವೇದಿಕೆ ಸಜ್ಜು ಮಾಡಿದ್ದು 1924ರಲ್ಲೇ. ಗಂಗಾಧರ ದೇಶಪಾಂಡೆ ಅವರು ಇದಕ್ಕೆ ಶ್ರಮವಹಿಸಿದ್ದರು. ಗಾಂಧಿ ಅವರು ಕಾಂಗ್ರೆಸ್ ಅಧ್ಯಕ್ಷರಾದ ಬಳಿಕ ದೇಶಕ್ಕೆ ಸ್ವಾಂತ್ರ್ಯ ಬಂದಿದೆ, ದೇಶಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆ ಸಿಕ್ಕಿದೆ, ರಾಷ್ಟ್ರಧ್ವಜ, ರಾಷ್ಟ್ರಗೀತೆ ಸಿಕ್ಕಿದೆ. ಸಂವಿಧಾನವನ್ನು ಪಡೆದಿದ್ದೇವೆ. ಈ ಸಂವಿಧಾನ ಹಾಗೂಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವು ಶಾಸಕರು, ಮಂತ್ರಿಗಳು, ಪಂಚಾಯ್ತಿ ಸದಸ್ಯರಾಗಿ ಆಯ್ಕೆಯಾಗಿದ್ದೇವೆ. ಸಂವಿಧಾನ ನಮ್ಮ ಪಾಲಿನ ಭಗವದ್ಗೀತೆ, ಕುರಾನ್ ಹಾಗೂ ಬೈಬಲ್ ಆಗಿದೆ. ಇದನ್ನು ಉಳಿಸಿಕೊಂಡು, ಬೆಳೆಸಿಕೊಂಡು ಹೋಗಬೇಕು” ಎಂದು ತಿಳಿಸಿದರು.

“ಸಂವಿಧಾನ ರಕ್ಷಣೆ ಮಾಡಬೇಕು ಎಂಬ ಉದ್ದೇಶದಿಂದ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ದೇಶಕ್ಕೆ ದೊಡ್ಡ ಸಂದೇಶ ರವಾನಿಸಲು ಎಐಸಿಸಿ ಈ ಕಾರ್ಯಕ್ರಮ ರೂಪಿಸಿದೆ. ನಮ್ಮ ಹೆಚ್.ಕೆ. ಪಾಟೀಲ್ ಅವರಿಗೆ ನಮ್ಮ ಪಕ್ಷ ಗಾಂಧಿ ಭಾರತ ಕಾರ್ಯಕ್ರಮದ ಜವಾಬ್ದಾರಿ ವಹಿಸಿದ್ದೇವೆ. ಅವರು ಸರ್ಕಾರ ಹಾಗೂ ಪಕ್ಷ ಯಾವ ಕಾರ್ಯಕ್ರಮಗಳನ್ನು ನಡೆಸಬೇಕು ಎಂದು ಮಾರ್ಗದರ್ಶನ ನೀಡಿದ್ದಾರೆ. ಈ ಬಗ್ಗೆ ದೆಹಲಿ ನಾಯಕರ ಜತೆ ಚರ್ಚೆ ಮಾಡಿ ನಾವು ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಈ ಸಮಾವೇಶದ ಹೆಸರು ನಿಗದಿ ಮಾಡಲು ಎಐಸಿಸಿ ನಾಯಕರು ಹೆಚ್.ಕೆ ಪಾಟೀಲ್ ಅವರ ಸಲಹೆಯನ್ನು ಪಡೆದಿದ್ದಾರೆ” ಎಂದು ತಿಳಿಸಿದ್ದಾರೆ.

“ಈ ಜಿಲ್ಲೆ ಎಲ್ಲಾ ನಾಯಕರು ಬಹಳ ಉತ್ಸಾಹದಿಂದ ಹಳ್ಳಿ ಹಳ್ಳಿಗೆ ಈ ಸಂದೇಶ ರವಾನಿಸುತ್ತಿದ್ದಾರೆ. ಅವರಿಗೆ ನಾನು ಅಭಿನಂದಿಸುತ್ತಿದ್ದೇನೆ. ಇದರ ಜತೆಗೆ ರಾಜ್ಯದಲ್ಲಿ 100 ಕಾಂಗ್ರೆಸ್ ಕಚೇರಿ ನಿರ್ಮಾಣಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು ಫೆಬ್ರವರಿ ಎರಡನೇ ವಾರದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಇದಕ್ಕೆ ತಯಾರಿ ನಡೆಯುತ್ತಿದೆ” ಎಂದು ತಿಳಿಸಿದರು.

ಈ ಭಾಗದಿಂದ ಸಮಾವೇಶಕ್ಕೆ 75 ಸಾವಿರ ಜನ

“ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನದ ಹಿನ್ನೆಲೆಯಲ್ಲಿ ಕಳೆದ ವರ್ಷ ಡಿ.27ರಂದು ನಡೆಯಬೇಕಿದ್ದ ಕಾರ್ಯಕ್ರಮವನ್ನು ಮುಂದೂಡಲಾಗಿತ್ತು. ಆ ಕಾರ್ಯಕ್ರಮವನ್ನು ಇದೇ 21ರಂದು ನಡೆಸಲಾಗುವುದು. ಇದು ಕೆಪಿಸಿಸಿ ವತಿಯಿಂದ ನಡೆಯುತ್ತಿರುವ ಎಐಸಿಸಿ ಕಾರ್ಯಕ್ರಮವಾಗಿದೆ. ಹುಬ್ಬಳ್ಳಿ ಧಾರವಾಡ, ಗದಗ, ಹಾವೇರಿ ಹಾಗೂ ಕಾರವಾರ ಜಿಲ್ಲೆಯ ನಾಯಕರ ಜತೆ ಈ ಕಾರ್ಯಕ್ರಮದ ಪೂರ್ವಭಾವಿ ಸಭೆಯನ್ನು ಇಂದು ನಮ್ಮ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳ ನೇತೃತ್ವದಲ್ಲಿ ನಡೆಸಲಾಗಿದೆ. ಕಿತ್ತೂರು ಕರ್ನಾಟಕ ಭಾಗದಿಂದಲೇ 75 ಸಾವಿರ ಜನರನ್ನು ಸೇರಿಸಲು ತೀರ್ಮಾನಿಸಲಾಗಿದೆ. ರಾಜ್ಯದ ಇತರೆ ಭಾಗಗಳಿಂದ ನಾವು ಸಾಂಕೇತಿಕವಾಗಿ ಜನರು ಆಗಮಿಸುತ್ತಿದ್ದಾರೆ” ಎಂದರು.

“21ರಂದು ಬೆಳಗ್ಗೆ 10 ಗಂಟೆಗೆ ಸರ್ಕಾರಿ ಕಾರ್ಯಕ್ರಮ ಸುವರ್ಣಸೌಧದಲ್ಲಿ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಕೇವಲ ಆಹ್ವಾನಿತರಿಗೆ ಮಾತ್ರ ಭಾಗವಹಿಸಲು ಅವಕಾಶವಿರುತ್ತದೆ. ನಂತರ ಪಕ್ಷದ ಕಾರ್ಯಕ್ರಮ ನಡೆಯಲಿದೆ. ಪಕ್ಷದ ಕಾರ್ಯಕ್ರಮಕ್ಕೆ ಎಲ್ಲಾ ಸಾರ್ವಜನಿಕರಿಗೂ ಅವಕಾಶ ನೀಡಲಾಗುವುದು” ಎಂದು ತಿಳಿಸಿದರು.

ಮುಂದಿನ ಪೀಳಿಗೆಗಾಗಿ ಸಂವಿಧಾನ ರಕ್ಷಣೆ:

“ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಬಿಜೆಪಿ ಅಪಮಾನ ಮಾಡಿದ್ದು, ಅವರ ಗೌರವ ಉಳಿಸಿ, ಸಂವಿಧಾನ ರಕ್ಷಣೆ ಮಾಡಿ ಮುಂದಿನ ಪೀಳಿಗೆಗೆ ನೀಡಲು ಈ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ನಮಗೆ ಜನ ಸೇರಿಸುವುದು ದೊಡ್ಡ ವಿಚಾರವಲ್ಲ. ಈ ಭಾಗದಿಂದ ಹೆಚ್ಚಿನ ಜನರು ಸೇರಬೇಕು. ನಾವು ರಾಜಕೀಯ ಸಭೆ ಮಾಡುತ್ತಿಲ್ಲ. ಐತಿಹಾಸಿಕ ಸಭೆ ಮಾಡುತ್ತಿದ್ದೇವೆ. ನೂರು ವರ್ಷಗಳ ಹಿಂದೆ ಈ ಅಧಿವೇಶನಕ್ಕೆ 80 ಎಕರೆ ಭೂಮಿ ಸಿದ್ಧಪಡಿಸಿ, ಇದಕ್ಕಾಗಿ ಒಂದು ರೈಲ್ವೇ ನಿಲ್ದಾಣ ಆರಂಭಿಸಲಾಗಿತ್ತು. ರಾಷ್ಟ್ರಧ್ವಜವನ್ನು ದೇಶದ ತುಂಬಾ ತಯಾರಿ ಮಾಡುವುದಿಲ್ಲ. ಈ ನೆಲದಲ್ಲಿ ಮಾತ್ರ ಮಾಡುತ್ತಾರೆ. ನಿಮ್ಮ ಪರಂಪರೆ ಇದಾಗಿದೆ. ಈ ಕಾರ್ಯಕ್ರಮಕ್ಕೆ 50 ಸಾವಿರ ಗಾಂಧಿ ಟೋಪಿ, 1 ಲಕ್ಷ ಬ್ಯಾಡ್ಜ್ ತಯಾರಿಸಲಾಗಿದೆ” ಎಂದು ತಿಳಿಸಿದರು.

ಸಮಾವೇಶ 2028ರ ಚುನಾವಣೆಗೆ ಮುನ್ನುಡಿ ಬರೆಯಬೇಕು:

“ಈ ಸಮಾವೇಶದಲ್ಲಿ ಭಾಗವಹಿಸುವುದೇ ನಿಮ್ಮ ಇತಿಹಾಸ. ಹಿಂದೆ ಆಗಿದ್ದು ಚರಿತ್ರೆ, ಮುಂದೆ ಆಗುವುದು ಭವಿಷ್ಯ. ಇಂದು ನಿಮ್ಮ ಕೈಯಲ್ಲಿದೆ. ಈಗ ನಡೆಯಲಿರುವ ಕಾರ್ಯಕ್ರಮದಲ್ಲಿ ನಿಮ್ಮ ಕೊಡುಗೆ ನಿಮ್ಮ ಜೀವನದಲ್ಲಿ ದೊಡ್ಡ ಭಾಗವಾಗಿರಲಿದೆ. ಮತ್ತೆ ಇಂತಹ ಐತಿಹಾಸಿಕ ಕಾರ್ಯಕ್ರಮ ಸಿಗುವುದಿಲ್ಲ. ಗಾಂಧಿಜಿ ಅವರ ಪರಂಪರೆಯನ್ನು ಬಳಸಿಕೊಳ್ಳಲು ಕಾಂಗ್ರೆಸಿಗರಿಗೆ ಮಾತ್ರ ಅವಕಾಶವಿದೆಯೇ ಹೊರತು, ಬಿಜೆಪಿ ಹಾಗೂ ದಳದವರಿಗಿಲ್ಲ. ಹೀಗಾಗಿ ಈ ಕಾರ್ಯಕ್ರಮಕ್ಕೆ ನಿಮ್ಮ ಕೊಡುಗೆ ಮುಖ್ಯ. ನೀವು ಇಂತಿಷ್ಟು ಜನರನ್ನು ಕರೆತರಬೇಕು ಎಂದು ತಿಳಿಸಿದ್ದೇವೆ. ಈ ಜಿಲ್ಲೆಯಿಂದ 75 ಸಾವಿರ ಜನರನ್ನು ಕರೆತರುವುದಾಗಿ ನಾಯಕರು ಹೇಳಿದ್ದಾರೆ. ಈ ಕಾರ್ಯಕ್ರಮ 2028ರ ಚುನಾವಣೆಗೆ ಮುನ್ನುಡಿ ಬರೆಯಬೇಕು” ಎಂದು ತಿಳಿಸಿದರು.

2023ರ ವಿಧಾನಸಭೆ ಚುನಾವಣೆಗೂ ಮುನ್ನ ಬೆಳಗಾವಿಯ ಗಾಂಧಿ ಬಾವಿಯಿಂದ ನೀರು ತೆಗೆದು ಬೆಳಗಾವಿ ರಸ್ತೆ ಸ್ವಚ್ಛಗೊಳಿಸಿ ಗ್ಯಾರಂಟಿ ಯೋಜನೆ ಘೋಷಣೆ ಮಾಡಿ ನಾವು ಚುನಾವಣಾ ಪ್ರಚಾರ ಆರಂಭಿಸಿದೆವು. ನಂತರ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದೇವೆ. ನಿಮ್ಮಲ್ಲಿ ಅನೇಕರು ಸಮಿತಿ ಸದಸ್ಯರು, ಪಂಚಾಯ್ತಿ ನಾಯಕರು ಇದ್ದೀರಿ. ನಿಮ್ಮಲ್ಲಿ ಒಬ್ಬೊಬ್ಬರು 10 ಜನ ಕರೆತಂದರೂ ಒಂದು ಕ್ಷೇತ್ರದಿಂದ 10 ಸಾವಿರ ಜನ ಆಗುತ್ತಾರೆ. ನಿಮ್ಮ ನಾಯಕರ ಜತೆ ನಾನು ಚರ್ಚೆ ಮಾಡಿದ್ದೇನೆ. ದು ವ್ಯಕ್ತಿಯ ಕಾರ್ಯಕ್ರಮವಲ್ಲ, ದೇಶದ ಕಾರ್ಯಕ್ರಮ, ಪಕ್ಷದ ಕಾರ್ಯಕ್ರಮ. ನೀವೆಲ್ಲರೂ ಸೇರಿ ಇದನ್ನು ಯಶಸ್ವಿಗೊಳಿಸಬೇಕು” ಎಂದರು.

ಪ್ರಶ್ನೋತ್ತರ:

ನಾವು ಗಾಂಧಿ ವಂಶಸ್ಥರು, ಅವರು ಗೋಡ್ಸೆ ವಂಶಸ್ಥರು:

ಸರ್ಕಾರದ ಹಣದಲ್ಲಿ ನಕಲಿ ಗಾಂಧಿಗಳು ಸಮಾವೇಶ ಮಾಡುತ್ತಿದ್ದಾರೆ ಎಂಬ ಬಿಜೆಪಿ ನಾಯಕರ ಆರೋಪದ ಬಗ್ಗೆ ಕೇಳಿದಾಗ, “ನಾವೆಲ್ಲರೂ ನಿಜವಾದ ಗಾಂಧಿ ವಂಶಸ್ಥರು. ಅವರು ಗೋಡ್ಸೆ ವಂಶಸ್ಥರು. ಸುವರ್ಣಸೌಧದಲ್ಲಿ ಸರ್ಕಾರಿ ಕಾರ್ಯಕ್ರಮ ನಡೆಯಲಿದೆ. ಉಳಿದಂತೆ ಸಾರ್ವಜನಿಕ ಕಾರ್ಯಕ್ರಮ ನಡೆಯಲಿದೆ” ಎಂದರು.

ನಾವೆಲ್ಲರೂ ಅಧ್ಯಕ್ಷರ ಮಾತು ಪಾಲಿಸುತ್ತೇವೆ

ನಾನು ಸಚಿವ ಸ್ಥಾನ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನ ನಡುವೆ ಆಯ್ಕೆ ಎದುರಾದಾಗ ನಾನು ಅಧ್ಯಕ್ಷ ಸ್ಥಾನ ಆಯ್ಕೆ ಮಾಡಿಕೊಂಡೆ ಎಂದು ಪರಮೇಶ್ವರ್ ಅವರು ನಿಮಗೆ ತಿರುಗೇಟು ನೀಡಿದ್ದಾರೆ ಎಂದು ಕೇಳಿದಾಗ, “ಮಲ್ಲಿಕಾರ್ಜುನ ಖರ್ಗೆ ಅವರು ಕೊಟ್ಟಿರುವ ಕೆಲಸ ಮಾಡಿಕೊಂಡು ಹೋಗಿ ಎಂದು ನಮಗೆಲ್ಲ ಬುದ್ದಿವಾದ ಹೇಳಿದ್ದಾರೆ. ನಮ್ಮ ರಾಷ್ಟ್ರೀಯ ಅಧ್ಯಕ್ಷರ ಮಾತನ್ನು ನಾನೂ ಪಾಲಿಸುತ್ತೇನೆ, ಬೇರೆಯವರು ಪಾಲನೆ ಮಾಡುತ್ತಾರೆ. ಇದರ ಬಗ್ಗೆ ಚರ್ಚೆ ಅಗತ್ಯವಿಲ್ಲ. ಜನ ನಮ್ಮ ಮೇಲೆ ಇಟ್ಟಿರುವ ವಿಶ್ವಾಸ ಉಳಿಸಿಕೊಳ್ಳುವ ಕೆಲಸ ಮಾಡುತ್ತೇವೆ. ದೇಶಕ್ಕೆ ದೊಡ್ಡ ಸಂದೇಶ ರವಾನಿಸುವ ಕಾರ್ಯಕ್ರಮ ಮಾಡುತ್ತಿದ್ದು, ಇದರಲ್ಲಿ ನಿರತವಾಗಿದ್ದೇವೆ” ಎಂದು ತಿಳಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button