ಪ್ರಗತಿವಾಹಿನಿ ಸುದ್ದಿ, ಬೆಳಗಾವಿ– ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಬೆಳಗಾವಿಯಲ್ಲಿ ಕಚೇರಿ ಆರಂಭಿಸಿದ್ದಾರೆ.
ಇಲ್ಲಿನ ಜಿಲ್ಲಾ ಪಂಚಾಯಿತಿ ಹಳೆ ಕಟ್ಟಡದಲ್ಲಿ ಶೆಟ್ಟರ್ ಕಚೇರಿ ಆರಂಭಿಸಲಾಗಿದ್ದು, ಇಂದು ಕಚೇರಿ ಉದ್ಘಾಟಿಸಿದರು.
ಜಿಲ್ಲೆಯ ಜನರು ತಮಗೆ ಅಹವಾಲು ಸಲ್ಲಿಸಲು ಅನುಕೂಲವಾಗಲಿ ಎಂಬ ಉದ್ದೇಶದಿಂದ ಕಚೇರಿಯನ್ನು ಸ್ಥಾಪಿಸಲಾಗಿದೆ. ತಿಂಗಳಲ್ಲಿ ಮೂರ್ನಾಲ್ಕು ಬಾರಿ ತಾವು ಕೂಡ ಸಾರ್ವಜನಿಕರಿಗೆ ಲಭ್ಯವಿರುವುದಾಗಿ ಸಚಿವ ಶೆಟ್ಟರ್ ತಿಳಿಸಿದರು.
ಬೆಳಗಾವಿ ಜಿಲ್ಲಾಡಳಿತ ಭವನ ಸ್ಥಾಪಿಸಲು ಅಗತ್ಯವಿರುವ ಒಂದೆರಡು ಸ್ಥಳಗಳನ್ನು ಪರಿಶೀಲಿಸಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದರು.
ಜಿಲ್ಲಾಡಳಿತ ಭವನ ಸ್ಥಾಪಿಸುವ ಅಗತ್ಯವಿರುವುದರಿಂದ ಶೀಘ್ರದಲ್ಲೇ ಸ್ಥಳ ಪರಿಶೀಲನೆ ನಡೆಸಲಾಗುತ್ತದೆ ಎಂದರು.
ರಾಜ್ಯೋತ್ಸವ ಸಂದರ್ಭದಲ್ಲಿ ಕರಾಳ ದಿನ ಆಚರಿಸುವವರು ಕಾನೂನು ಉಲ್ಲಂಘಿಸಿದರೆ ಕ್ರಮ ತೆಗೆದುಕೊಳ್ಳಲಾಗುತ್ತದೆ. ಶಾಂತಿಯುತ ಪ್ರತಿಭಟನೆಗೆ ಕಾನೂನು ಪ್ರಕಾರ ಅನುಮತಿ ನೀಡಬೇಕಾಗುತ್ತದೆ. ಅದೇ ರೀತಿ ಅನುಮತಿ ನೀಡಲಾಗಿದ್ದು, ಕಾನೂನು ಉಲ್ಲಂಘಿಸಿದರೆ ಪರಿಶೀಲಿಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಪ್ರಾದೇಶಿಕ ಆಯುಕ್ತರಾದ ಆಮ್ಲಾನ್ ಆದಿತ್ಯ ಬಿಸ್ವಾಸ್, ಐಜಿಪಿ ಎಚ್.ಜಿ.ರಾಘವೇಂದ್ರ ಸುಹಾಸ್, ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ, ಪೊಲೀಸ್ ಆಯುಕ್ತರಾದ ಬಿ.ಎಸ್.ಲೋಕೇಶ್ ಕುಮಾರ್, ಅಪರ ಜಿಲ್ಲಾಧಿಕಾರಿ ಅಶೋಕ್ ದುಡಗುಂಟಿ ಮತ್ತಿತರರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ