Kannada NewsKarnataka News

*ಸರ್ಕಾರದಿಂದ ಪೊಲೀಸರಿಗೆ ಹೆಚ್ಚಿನ ಸವಲತ್ತು: ಡಾ.ಜಿ. ಪರಮೇಶ್ವರ*

-ಬೆಂಗಳೂರು ನಗರ ಪೊಲೀಸ್ ವಾರ್ಷಿಕ ಕ್ರೀಡಾಕೂಟ ಸಮಾರೋಪ ಸಮಾರಂಭ

-ಗೃಹ ಸಚಿವ ಡಾ. ಜಿ.ಪರಮೇಶ್ವರ ಭರವಸೆ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು :- ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಆರು ಕೋಟಿ ರೂ. ವೆಚ್ಚದಲ್ಲಿ ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣ ಸೇರಿದಂತೆ ವಿವಿಧ ಕ್ರೀಡಾ ಸವಲತ್ತುಗಳನ್ನು ಕಲ್ಪಿಸಲಾಗುವುದು ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಹೇಳಿದರು.

ಬೆಂಗಳೂರು ನಗರ ಪೊಲೀಸ್ ವತಿಯಿಂದ ಆಡುಗೋಡಿಯ ಸಿಎಆರ್ ಮೈದಾನದಲ್ಲಿ ನಡೆದ ಬೆಂಗಳೂರು ನಗರ ಪೊಲೀಸ್ “ವಾರ್ಷಿಕ ಕ್ರೀಡಾಕೂಟ 2024” ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ, ವಿವಿಧ ಕ್ರೀಡೆಗಳಲ್ಲಿ ವಿಜೇತರಾದ ಪೊಲೀಸ್ ಕ್ರೀಡಾಪಟುಗಳಿಗೆ ಹಾಗೂ ತಂಡಗಳಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.

ಈಗಾಗಲೇ ಮೂರು ಕೋಟಿ ರೂ.‌ ಅನುದಾನ ನೀಡಲಾಗಿದೆ. ಬಜೆಟ್‌ನಲ್ಲಿ ಇನ್ನುಳಿದ ಅನುದಾನವನ್ನು ನೀಡಲಾಗುವುದು. ಸರ್ಕಾರವು ಮುಂದಿನ ದಿನಗಳಲ್ಲಿ ಪೊಲೀಸರಿಗೆ ಹೆಚ್ಚಿನ ಸವಲತ್ತುಗಳನ್ನು ಕಲ್ಪಿಸುತ್ತದೆ ಎಂದು ಹೇಳಿದರು.

ದೇಶದ ಬೇರೆ ಮಹಾನಗರ ಪೊಲೀಸರಿಗಿಂತ ಬೆಂಗಳೂರು ನಗರ ಪೊಲೀಸ್ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದೆ.  ಕರ್ನಾಟಕ ಪೊಲೀಸರು ಇನ್ನು ಹೆಚ್ಚಿನ ರೀತಿಯಲ್ಲಿ ಸಮರ್ಥವಾಗಿ ಕೆಲಸ ಮಾಡಬೇಕಿದೆ ಎಂದು ನನಗೆ ಅನ್ನಿಸುತ್ತದೆ.

ದಕ್ಷತೆ‌ ಮತ್ತು ಪ್ರಾಮಾಣಿಕತೆಯಲ್ಲಿ ಕರ್ನಾಟಕ‌ ಪೊಲೀಸ್ ಎರಡನೇ ಸ್ಥಾನದಲ್ಲಿದೆ‌ ಎಂಬುದನ್ನು ರಾಷ್ಟ್ರಮಟ್ಟದ ಜಾಗರಣಾ ಪತ್ರಿಕೆ ವರದಿ ಮಾಡಿದೆ. ಇದು ಸಂತೋಷ ತಂದಿದೆಯಾದರು ಕರ್ನಾಟಕ ಪೊಲೀಸ್ ದೇಶದಲ್ಲಿ ಮೊದಲ ಸ್ಥಾನದಲ್ಲಿರಬೇಕು ಎಂದ ಅವರು, ಕರ್ತವ್ಯದ ವೇಳೆ ಪ್ರಾಣಾರ್ಪಣೆ ಮಾಡಿದ ಸಿಬ್ಬಂದಿಗಳನ್ನು ಸ್ಮರಿಸಿ, ಕೃತಜ್ಞತೆ ಸಲ್ಲಿಸಿದರು.

ಉತ್ತಮ ಆರೋಗ್ಯ ಮತ್ತು ದೈಹಿಕ ಸಾಮಾರ್ಥ್ಯವನ್ನು ಕಾಪಾಡಿಕೊಳ್ಳಲು ಕ್ರೀಡೆ ಸಹಕಾರಿಯಾಗಲಿದೆ. ಮಾನಸಿಕವಾಗಿ ಏಕತೆಯ ಭಾವನೆ ಮೂಡಿಸುತ್ತದೆ. ಕರ್ತವ್ಯದಲ್ಲಿನ ಮಾನಸಿಕ ಒತ್ತಡಗಳನ್ನು ತಡೆಯುವ ಶಕ್ತಿ ಕ್ರೀಡೆಯಿಂದ ಬರುತ್ತದೆ. ಜೀವನದಲ್ಲಿ ಅನೇಕ‌ಸಲ ಸೋಲು, ಗೆಲುವುಗಳನ್ನು ಕಾಣುತ್ತೇವೆ. ಸೋಲನ್ನು ಸ್ವೀಕರಿಸುವ ಶಕ್ತಿ ಕ್ರೀಡೆಯಿಂದ ಬರುತ್ತದೆ.  ಸ್ವತಃ ಕ್ರೀಡಾಪಟುವಾಗಿ ಇಂತಹ ಅನುಭವ ಕಂಡಿದ್ದೇನೆ ಎಂದರು. 

ಈ ಸಂದರ್ಭದಲ್ಲಿ ಗೃಹ ಸಚಿವರ ಶ್ರೀಮತಿ ಕನ್ನಿಕಾ ಪರಮೇಶ್ವರಿ, ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ಅಲೋಕ್ ಮೋಹನ್, ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button