Film & EntertainmentKannada NewsKarnataka NewsLatestPolitics

*ವಿಜಯೇಂದ್ರಗೆ ಸಂಕಷ್ಟ ತಂದ ಅಹಂ ಮತ್ತು ಅವಸರ* *ಕರ್ನಾಟಕದೆಡೆಗಿನ ಹೈಕಮಾಂಡ್ ನಿರ್ಲಕ್ಷ್ಯ ಇದೇ ಮೊದಲೇನಲ್ಲ*

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ಯಾವುದೇ ಹುದ್ದೆಯನ್ನಾದರೂ ಅರ್ಹತೆಯ ಮೇಲೆ ಪಡೆಯಬೇಕೇ ವಿನಃ ಅಡ್ಡದಾರಿ ಹಿಡಿದು ಪಡೆದರೆ ಏನಾಗುತ್ತದೆ ಎನ್ನುವುದಕ್ಕೆ ಈಗಿನ ಬಿಜೆಪಿ ವಿದ್ಯಮಾನಗಳು ತಾಜಾ ಸಾಕ್ಷಿಗಳಾಗಿವೆ. ಅವಸರವೇ ಅಪಘಾತಕ್ಕೆ ಕಾರಣ ಎನ್ನುವ ಗಾದೆ ಮಾತನ್ನು ಈ ಸಂದರ್ಭದಲ್ಲಿ ಉದಾಹರಿಸಬಹುದೇನೋ…

ಬಿ.ವೈ.ವಿಜಯೇಂದ್ರ ಬಿಜೆಪಿಯಲ್ಲಿ ಹಂತ ಹಂತವಾಗಿ ಮೇಲೆ ಬಂದವರಲ್ಲ. ಆದರೆ ತಂದೆ ಬಿ.ಎಸ್.ಯಡಿಯೂರಪ್ಪ ಅವರ ಹೆಸರಿನ ಮೇಲೆ ದಿಢೀರ್ ಅಧಿಕಾರದ ಗದ್ದುಗೆ ಏರಿದವರು ಅವರು. ಯಡಿಯೂರಪ್ಪ ಅವರ ಬಳಿ, ಅಧಿಕಾರ, ಶಕ್ತಿ ಇದ್ದಾಗ ಸುಮ್ಮನಿದ್ದ ಬಿಜೆಪಿ ನಾಯಕರೆಲ್ಲ ಇದೀಗ ಯಡಿಯೂರಪ್ಪನವರ ಶಕ್ತಿ ಕುಂದಿರುವುದನ್ನು ಕಂಡು ಒಮ್ಮೆಲೆ ಎದ್ದುಬಿದ್ದಿದ್ದಾರೆ.

ವಿಜಯೇಂದ್ರ ಪಕ್ಷ ಸಂಘಟನೆಯಲ್ಲಿ ಕೆಳಮಟ್ಟದಿಂದ ತೊಡಗಿಕೊಂಡವರಲ್ಲ. ಯಡಿಯೂರಪ್ಪ ಬಲದಿಂದಾಗಿ ಏಕಾ ಏಕಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾದರು. ನಂತರ ಅದೇ ವೇಗದಲ್ಲಿ ರಾಜ್ಯದ ಅಧ್ಯಕ್ಷರಾದರು. ಪಕ್ಷಕ್ಕಾಗಿ ದುಡಿದ ಸಾವಿರಾರು ಮುಖಂಡರ ಕಣ್ಣೆದುರೇ ಯಾವುದೇ ಶ್ರಮವಿಲ್ಲದೆ ಒಬ್ಬ ವ್ಯಕ್ತಿ ತಮ್ಮ ಮೇಲೆ ಬಂದು ಕುಳಿತುಕೊಳ್ಳುತ್ತಾನೆ ಎಂದರೆ ಯಾರು ತಾನೆ ಸಹಿಸಿಕೊಳ್ಳುತ್ತಾರೆ?

ಬಿ.ವೈ.ವಿಜಯೇಂದ್ರ ಜೈ ಹುಜೂರ್ ಎನ್ನುವ ಕೆಲವು ಯುವಕರ ತಂಡ ಕಟ್ಟಿಕೊಂಡು ಎಲ್ಲರನ್ನೂ ಓವರ್ ಟೇಕ್ ಮಾಡಿ ಮೇಲೇರಿ ಕುಳಿತರು. ಸಹಿಸುವ ಮನೋಭಾವ ಯಾರಲ್ಲೂ ಇರಲಿಲ್ಲವಾದರೂ ಹೈಕಮಾಂಡ್ ಆದೇಶ ಮತ್ತು ಯಡಿಯೂರಪ್ಪನವರ ಬಲ ನೋಡಿ ಸುಮ್ಮನಿದ್ದರು. ಆದರೆ ಯಾವಾಗ 3 -4 ಜನ ಗಟ್ಟಿ ಧ್ವನಿ ಎತ್ತಿ ಎದ್ದು ನಿಂತರೋ ಆಗ ಒಬ್ಬೊಬ್ಬರಾಗಿ ಧ್ವನಿಗೂಡಿಸತೊಡಗಿದರು.

Home add -Advt

ಆರಂಭದಲ್ಲಿ ಬಸನಗೌಡ ಪಾಟೀಲ ಯತ್ನಾಳ ಮಾತ್ರ ಬಹಿರಂಗವಾಗಿ ಯಡಿಯೂರಪ್ಪ ಮತ್ತು ವಿಜಯೇಂದ್ರ ವಿರುದ್ಧ ಗುಡುಗುತ್ತಿದ್ದರು. ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಛಾಟಿಸಬಹುದು ಎನ್ನುವ ಮಾತುಗಳು ಈ ಹಂತದಲ್ಲಿ ಕೇಳಿ ಬಂದವು. ಆದರೆ ನಂತರದಲ್ಲಿ ನಿಧಾನವಾಗಿ 2 -3 ವರ್ಷದಿಂದೀಚೆಗೆ ಪಕ್ಷಕ್ಕೆ ವಲಸೆ ಬಂದಿರುವ ರಮೇಶ ಜಾರಕಿಹೊಳಿ ಸೇರಿದಂತೆ ಕೆಲವರು ಮಾತನಾಡತೊಡಗಿದರು. ಅರವಿಂದ ಲಿಂಬಾವಳಿ, ಬಿ.ಪಿ.ಹರೀಶ್, ಕುಮಾರ ಬಂಗಾರಪ್ಪ, ಎನ್.ಆರ್ ಸಂತೋಷ ಸೇರಿದಂತೆ ಹಲವು ಪ್ರಮುಖರು ಬಹಿರಂಗವಾಗಿಯೇ ವಿಜಯೇಂದ್ರ ವಿರೋಧಿ ಬಣದಲ್ಲಿ ಕಾಣಿಸಿದರು. ಇದರಿಂದಾಗಿ ವಿರೋಧಿ ಬಣ ದಿನದಿಂದ ದಿನಕ್ಕೆ ಪ್ರಬಲವಾಗುತ್ತ ಯಾರ ವಿರುದ್ಧವೂ ಕ್ರಮ ತೆಗೆದುಕೊಳ್ಳಲಾರದ ಅಸಹಾಯಕ ಸ್ಥಿತಿಗೆ ಪಕ್ಷ ತಲುಪಿತು.

ನಂತರದಲ್ಲಿ ಮಾಜಿ ಸಚಿವ ಶ್ರೀರಾಮುಲು ಸಹ ವಿಜಯೇಂದ್ರ ವಿರೋಧಿ ಗುಂಪಿನಲ್ಲಿ ಕಣಿಸಿಕೊಳ್ಳುವ ಸೂಚನೆ ಕಾಣಿಸಿತು. ಇದಾದ ನಂತರ ಇತ್ತೀಚಗೆ ಮಾಜಿ ಸಚಿವ ಡಾ.ಸುಧಾಕರ ಅತ್ಯಂತ ಗಟ್ಟಿಯಾದ ಧ್ವನಿಯಲ್ಲಿ ವಿಜಯೇಂದ್ರ ವಿರುದ್ಧ ಗುಡುಗಿದಾಗ ಪಕ್ಷಕ್ಕೆ ಅಪಾಯದ ಸ್ಥಿತಿ ಕಾಣಿಸತೊಡಗಿತು. ಈ ಹಂತದಲ್ಲಿ ವಜಯೇಂದ್ರ ವಿರೋಧಿ ಬಣ ಭಾರೀ ಬಲ ಪಡೆದುಕೊಂಡಿತು.

ಕಳೆದ ಎರಡು ದಿನಗಳ ವಿದ್ಯಮಾನ ಪಕ್ಷ ಮತ್ತಷುಟ ಗಾಭರಿಪಡುವಂತಾಗಿದೆ. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ ಅವರು ಸಹ ನಿಧಾನವಾಗಿ ವಿಜಯೇಂದ್ರ ವಿರೋಧಿ ಪಾಳದ ಬೆಂಬಲಕ್ಕೆ ನಿಲ್ಲುವ ಸೂಚನೆ ಕಾಣಿಸತೊಡಗಿದೆ. ಇದು ಮುಂದಿನ ದಿನಗಳಲ್ಲಿ ಪಕ್ಷಕ್ಕೆ ದೊಡ್ಡ ಆಘಾತ ನೀಡುವ ಲಕ್ಷಣಗಳು ಘೋಚರಿಸತೊಡಗಿದೆ.

ಆದರೆ ಈವರೆಗೂ ಹೈಕಮಾಂಡ್ ಮಾತ್ರ ಎಲ್ಲವನ್ನೂ ನೋಡಿಯೂ ನೊಡದಂತೆ ಕುಳಿತುಕೊಂಡಿದೆ. ಸಣ್ಣದಿರುವಾಗಲೇ ಭಿನ್ನಮತವನ್ನು ಚಿವುಟಿ ಹಾಕುವ ಕೆಲಸ ಮಾಡಿದ್ದರೆ ಈ ಮಟ್ಟಕ್ಕೆ ಬೆಳಯುತ್ತಿರಲಿಲ್ಲವೇನೋ. ಹೈಕಮಾಂಡ್ ನಿರ್ಲಕ್ಷ್ಯದಿಂದಲೇ ಈ ಹಂತಕ್ಕೆ ಬೆಳೆದಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಬಿಜೆಪಿ ಹೈಕಮಾಂಡ್ ಕರ್ನಾಟಕದ ತನ್ನ ಪಕ್ಷದ ಗೊಂದಲಗಳನ್ನು ನಿರ್ಲಕ್ಷಿಸುತ್ತ ಬಂದಿರುವುದು ಇದೇ ಮೊದಲೇನಲ್ಲ. ಕಳೆದ 3 -4 ವರ್ಷದಿಂದಲೂ ಭಿನ್ನಮತೀಯ ಚಟುವಟಿಕೆಗಳ ಕುರಿತು ಜಾಣ ಕುರುಡು, ಜಾಣ ಕಿವುಡುತನ ಪ್ರದರ್ಶಿಸುತ್ತಲೇ ಬಂದಿದೆ. ಜೊತೆಗೆ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಯಲ್ಲಿ ಅಂತವರ ಮಾತಿಗೇ ಹೆಚ್ಚು ಮನ್ನಣೆ ನಾಡಿ ಟಿಕೆಟ್ ಹಂಚುವ ಕೆಲಸವೂ ನಡೆಯಿತು. ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲಾದಾಗಲೇ ಎಚ್ಚೆತ್ತುಕೊಳ್ಳಬೇಕಿತ್ತು. ಬದಲಾಗಿ ಲೋಕಸಭಾ ಚುನಾವಣೆಯಲ್ಲೂ ಅದೇ ಮುಂದುವರಿಯಿತು. ಹಾಗಾಗಿಯೇ ಇಂದು ಈ ಮಟ್ಟಕ್ಕೆ ಬೆಳೆದು ನಿಂತಿದೆ.

ಹೈಕಮಾಂಡ್ ನ ಈ ನಿರ್ಲಕ್ಷ್ಯದ ಹಿಂದಿನ ಉದ್ದೇಶ ಏನಿರಬಹುದು ಎನ್ನುವುದು ಅರ್ಥವಾಗದೆ ಸಾಮಾನ್ಯ ಕಾರ್.ಕರ್ತರಿಂದ ಮುಖಂಡರವರೆಗೆ ಎಲ್ಲರೂ ಕಂಗಾಲಾಗಿದ್ದಾರೆ. ಈಗ ಚೆಂಡು ದೆಹಲಿ ಅಂಗಳದಲ್ಲಿದೆ. ಈಗಲೂ ಗಂಭೀರವಾಗಿ ಪರಿಗಣಿಸದಿದ್ದಲ್ಲಿ ಬಿಜೆಪಿ ಕರ್ನಾಟಕದ ಮಟ್ಟಿಗೆ ಇನ್ನೂ 2 ದಶಕಗಳ ಕಾಲ ಅಧಿಕಾರದ ಗದ್ದುಗೆ ಏರುವುದು ಕಷ್ಟವಾಗಲಿದೆ. ಅಲ್ಲದೆ ಪಕ್ಷದ ಪ್ರಭಾವಿ ನಾಯಕರು, ಜೊತೆಗೆ ನಿಷ್ಟಾವಂತ ಕಾರ್ಯಕರ್ತರು ಹೊರಗೆ ಕಾಲಿಡುವುದರಲ್ಲಿ ಸಂದೇಹವಿಲ್ಲ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button