ಪ್ರಗತಿವಾಹಿನಿ ಸುದ್ದಿ, ಮುಂಬಯಿ – ಮುಂಬೈಯಲ್ಲಿ ಕನ್ನಡ-ಮರಾಠಿ ಬಾಂಧವ್ಯ ಅತ್ಯುತ್ತಮವಾಗಿದ್ದು, ಇದು ಭಾಷಾ ಸಾಮರಸ್ಯವನ್ನು ತೋರಿಸುತ್ತದೆ. ಕನ್ನಡಿಗರು ಅನ್ಯ ಭಾಷೆಗಳನ್ನು ಪ್ರೀತಿಸಿ, ಪರ ಭಾಷೆಗಳನ್ನು ಸುಲಭವಾಗಿ ತಿಳಿದು ವ್ಯವಹರಿಸಬಲ್ಲ ಭಾಷಾ ಪ್ರೇಮಿಗಳು. ಭಾಷೆ, ಸಂಸ್ಕೃತಿ, ವಿಚಾರಧಾರೆಗಳ ಸ್ವೀಕೃತಿಗೆ ಕನ್ನಡಿಗರೇ ಮೊದಲಿಗರು ಎಂದು ಕರ್ನಾಟಕದ ಮುಖ್ಯಮಂತ್ರಿಗಳು ರಾಜಕೀಯ ಕಾರ್ಯದರ್ಶಿ ಶಂಕರಗೌಡ ಪಾಟೀಲ ಹೇಳಿದ್ದಾರೆ.
ಕರ್ನಾಟಕ ಸಂಘ ಮುಂಬೈ ವಾರ್ಷಿಕವಾಗಿ ಕೊಡುವ ಡಾ.ಸುನೀತಾ ಶೆಟ್ಟಿ ಸಾಹಿತ್ಯ ಪ್ರಶಸ್ತಿಯನ್ನು ಮುಂಬೈನ ಮೈಸೂರು ಅಸೋಸಿಯೇಶನ್ ಸಭಾಂಗಣದಲ್ಲಿ ಕಲಾಜಗತ್ತು ಸಂಸ್ಥೆಯ ಅಧ್ಯಕ್ಷ, ನಾಟಕಕಾರ ಡಾ.ವಿಜಯಕುಮಾರ ಶೆಟ್ಟಿ ತೋನ್ಸೆ ಅವರಿಗೆ ಪ್ರದಾನ ಮಾಡಿ ಅವರು ಮಾತನಾಡುತ್ತಿದ್ದರು.
ಕನ್ನಡ, ಸಂಸ್ಕೃತಿಯನ್ನು ಉಳಿಸುವಂತಹ ಕಾರ್ಯವನ್ನು ನೀವು ಮಾಡುತ್ತಿದ್ದೀರಿ. ಸೇವೆ ಮೂಲಕ ಪ್ರಶಸ್ತಿಗಿಂತಲೂ ಮಿಗಿಲಾಗಿ ಭಾಷಾ ರಕ್ಷಣೆ ಮಾಡುವ ಮನೋಭಾವ, ಬದುಕಿನೊಂದಿಗೆ ಭಾಷೆ ಬೆಳೆಸುವ ಪರಿಜ್ಞಾನದೊಂದಿಗೆ ಬದುಕುತ್ತಿರುವ ನಿಮಗೆ ಶತಕೋಟಿ ನಮನಗಳು ಎಂದು ಅವರು ಹೇಳಿದರು.
ಇಂದು ಕರ್ನಾಟದಂತಹ ಸಂಸ್ಕೃತಿ ದೇಶದಲ್ಲಿ ಬೇರೆಲ್ಲೂ ಇಲ್ಲ. ಕರ್ನಾಟಕಕ್ಕಿಂತ ಸುಂದರ ರಾಜ್ಯವೂ ಬೇರೆ ಇಲ್ಲ. ಎಲ್ಲ ತರಹದ ಪುಷ್ಪ, ಹಣ್ಣು, ಹಂಪಲು, ಚಹಾ, ಕಾಫಿ, ಹತ್ತಿ ಎಲ್ಲವನ್ನೂ ಬೆಳೆಯುವ ಸಮೃದ್ಧ ನಾಡು ಕರ್ನಾಟಕ. ಇಂತಹ ರಾಜ್ಯದ ಸಂಸ್ಕೃಿತಿಯನ್ನು ಮುಂಬೈಯಲ್ಲಿ ಬೆಳೆಸುವಂತದ್ದು ಅಬಿನಂದನೀಯ ಎಂದು ಶಂಕರಗೌಡ ಪಾಟೀಲ ಪ್ರಶಂಸಿಸಿದರು.
ಸಂಘದ ಮಾಜಿ ಉಪಾಧ್ಯಕ್ಷ ಡಾ.ಭರತ್ ಕುಮಾರ ಪುಲಿಪು ಅಭಿನಂದನಾ ಭಾಷಣ ಮಾಡಿದರು. ಕರ್ನಾಟಕ ಸಂಘದ ಅಧ್ಯಕ್ಷ ಮನೋಹರ ಎಂ.ಕೋರಿ ಅಧ್ಯಕ್ಷತೆ ವಹಿಸಿದ್ದರು. ಬಂಟರ ಸಂಘದ ಟ್ರಸ್ಟಿ ಹಾಗೂ ಅವೆನ್ಯೂ ಹೊಟೆಲ್ ಸಮೂಹದ ನಿರ್ದೇಶಕ ಬೋಳ ರಘುರಾಮ ಕೆ.ಶೆಟ್ಟಿ, ಮೊಗವೀರ ಕೋ.ಆಪರೇಟಿವ್ ಬ್ಯಾಂಕ್ ಕಾರ್ಯಾಧ್ಯಕ್ಷ ಸದಾನಂದ ಕೋಟ್ಯಾನ್, ನಾಡಿನ ಹಿರಿಯ ಸಾಹಿತಿ ಪ್ರಾಚಾರ್ಯ ಡಾ.ವಿಶ್ವನಾಥ ಕಾರ್ನಾಡ್ ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ