![](https://pragativahini.com/wp-content/uploads/2025/01/ashok-1-1.jpg)
ಪ್ರಗತಿವಾಹಿನಿ ಸುದ್ದಿ: ಸಿಎಂ ಸಿದ್ದರಾಮಯ್ಯ ಮುಸ್ಲಿಮ್ ಮತಾಂಧರ ವಿರುದ್ಧ ಪ್ರಕರಣ ವಾಪಸ್ ಪಡೆಯುವುದರಿಂದಾಗಿ, ಪೊಲೀಸರ ಮೇಲೂ ಹಲ್ಲೆ ಮಾಡುವಷ್ಟು ಧೈರ್ಯ ಮತಾಂಧರಿಗೆ ಬಂದಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದಿಂದ ಕಾನೂನು ಸುವ್ಯವಸ್ಥೆ ಹದಗೆಟ್ಟು ಹಳ್ಳ ಹಿಡಿದಿದೆ. ಹುಬ್ಬಳ್ಳಿಯಲ್ಲಿ ಆದಂತೆಯೇ ಮೈಸೂರಿನಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆದಿದೆ. ರಾಹುಲ್ ಗಾಂಧಿ, ಕೇಜ್ರಿವಾಲ್ ಬಗ್ಗೆ ಪೋಸ್ಟ್ ಮಾಡಿದ್ದಾರೆಂಬ ಕಾರಣಕ್ಕೆ ಮತಾಂಧ ಮುಸ್ಲಿಮರು ನಿನ್ನೆ ಸಂಜೆ 6-7 ಗಂಟೆ ಸಮಯದಲ್ಲಿ ಚೀಲಗಳಲ್ಲಿ ಕಲ್ಲು ತುಂಬಿಕೊಂಡು ಬಂದು ಪೊಲೀಸರ ಮೇಲೆ ದಾಳಿ ಮಾಡಿದ್ದಾರೆ. ಹಿಂದೂ ಸಮುದಾಯದ ಜನರಿಗೆ ಬೆದರಿಕೆ ಹಾಕಿದ್ದು, ಇಡೀ ಮೈಸೂರಿನಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹುಬ್ಬಳ್ಳಿ ಗಲಭೆಯಲ್ಲಿ ಭಾಗಿಯಾದವರ ವಿರುದ್ಧ ಇದ್ದ ಪ್ರಕರಣಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಪಸ್ ಪಡೆದಿರುವುದರಿಂದ ಮುಸ್ಲಿಮ್ ಮತಾಂಧರಿಗೆ ಧೈರ್ಯ ಬಂದಿದೆ. ಜೊತೆಗೆ ಡಿ.ಕೆ.ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ನಾಯಕರು, ಇದು ಮುಸ್ಲಿಮರ ಸರ್ಕಾರ ಎಂದು ಹೇಳಿರುವುದರಿಂದ ಪೊಲೀಸ್ ಠಾಣೆಯನ್ನು ಧ್ವಂಸ ಮಾಡಬಹುದು ಎಂಬ ವಿಶ್ವಾಸ ಅವರಿಗೆ ಬಂದಿದೆ. ಒಂದಡೆ ಆರ್ಥಿಕ ದುಸ್ಥಿತಿ ಇದ್ದರೆ, ಮತ್ತೊಂದೆಡೆ ಕಾನೂನು ಹದಗೆಟ್ಟಿದೆ. ಈಗ ಮುಸ್ಲಿಮರ ವಿರುದ್ಧ ಪ್ರಕರಣ ದಾಖಲಿಸಿದರೂ, ಅದು ವ್ಯರ್ಥ ಎಂಬುದು ಪೊಲೀಸರಿಗೆ ಗೊತ್ತಾಗಿದೆ. ಪೊಲೀಸರ ಬಗ್ಗೆ ಭಯವೇ ಇಲ್ಲವೆಂದರೆ ಕಾನೂನು ಸತ್ತಿದೆ ಎಂದರ್ಥ. ಮತಬ್ಯಾಂಕ್‌ಗಾಗಿ ಇಡೀ ವ್ಯವಸ್ಥೆಯನ್ನು ಹಾಳು ಮಾಡಲಾಗುತ್ತಿದೆ ಎಂದರು.
ಮೈಸೂರಿನ ಹಿಂದೂಗಳ ರಕ್ಷಣೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿ. ಮೈಸೂರಿನ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರ ಜೊತೆಗೆ ಈಗಾಗಲೇ ಮಾತಾಡಿದ್ದೇನೆ. ಪೊಲೀಸರು ಕೈ ಚೆಲ್ಲಿ ಕುಳಿತಿರುವುದರಿಂದ ನಾವೇ ಶಾಂತಿ ಕಾಪಾಡಬೇಕಾಗಿದೆ. ನಾನು ಕೂಡ ಮೈಸೂರಿಗೆ ಭೇಟಿ ನೀಡುತ್ತೇನೆ. *ಕೆಎಫ್‌ಡಿ, ಪಾಪ್ಯುಲರ್ ಫ್ರಂಟ್* ಮೊದಲಾದ ಸಂಘಟನೆಗಳು ಮೈಸೂರಿನಲ್ಲಿ ಸಕ್ರಿಯವಾಗಿವೆ. ಕೇರಳದಿಂದ ಬಂದು ಕೊಲೆ, ಅಪಹರಣ ಮಾಡಿ ಹೋಗಿರುವ ಘಟನೆಗಳು ನಡೆದಿವೆ ಎಂದರು.
ಕಾಂಗ್ರೆಸ್ ಶಾಸಕರಿಗೆ ಆದಾಯವಿಲ್ಲ
ಕಾಂಗ್ರೆಸ್ ಶಾಸಕರಿಗೆ ಬೇರೆ ಆದಾಯವಿಲ್ಲ. ಆದ್ದರಿಂದ ವರ್ಗಾವಣೆ, ಮರಳು ಮಾಫಿಯಾ ಮೂಲಕ ಹಣ ಸಂಪಾದಿಸುತ್ತಿದ್ದಾರೆ. ಭದ್ರಾವತಿಯಲ್ಲೂ ಇಂಥದ್ದೇ ಘಟನೆ ನಡೆದಿದೆ. ಬೇರೆ ಜಿಲ್ಲೆಗಳಲ್ಲೂ ಅಧಿಕಾರಿಗಳಿಗೆ ಕಾಂಗ್ರೆಸ್ ಶಾಸಕರಿಂದ ಬೆದರಿಕೆ ಇದೆ. ಮಂಡ್ಯ, ಬೀದರ್, ಯಾದಗಿರಿ ಮೊದಲಾದ ಕಡೆ ಮರಳು ಮಾಫಿಯಾ ನಡೆಯುತ್ತಿದೆ. ಭದ್ರಾವತಿಯ ಮಹಿಳಾ ಅಧಿಕಾರಿ ರೆಕಾರ್ಡ್ ಮಾಡಿಕೊಂಡು ಧೈರ್ಯವಾಗಿ ಹೇಳಿದ್ದಾರೆ. ಉಳಿದ ಜಿಲ್ಲೆಗಳ ಅಧಿಕಾರಿಗಳು ವರ್ಗಾವಣೆ ಭಯದಿಂದ ಸುಮ್ಮನಾಗಿದ್ದಾರೆ ಎಂದರು.
ಡಿಸಿಎಂ ಡಿ.ಕೆ.ಶಿವಕುಮಾರ್ ಅವರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನ್ನು ಉಲ್ಲಂಘಿಸಿ ಕುಂಭಮೇಳಕ್ಕೆ ಭೇಟಿ ನೀಡಿದ್ದಾರೆ. ಜೊತೆಗೆ ಅಲ್ಲಿನ ವ್ಯವಸ್ಥೆಗೆ ಉತ್ತರ ಪ್ರದೇಶ ಸರ್ಕಾರವನ್ನು ಶ್ಲಾಘಿಸಿದ್ದಾರೆ. ಖರ್ಗೆಯವರದ್ದು ನಿಜವಾದ ಕಾಂಗ್ರೆಸ್ಸಾ ಅಥವಾ ಡಿ.ಕೆ.ಶಿವಕುಮಾರ್ ಅವರದ್ದು ನಿಜವಾದ ಕಾಂಗ್ರೆಸ್ಸಾ ಎಂದು ಅವರೇ ಹೇಳಬೇಕು. ಇಲ್ಲಿ ಯಾರನ್ನು ನಂಬಬೇಕು ಹಾಗೂ ಅನುಸರಿಸಬೇಕೆಂದು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಗೊಂದಲ ಕಾಡುತ್ತಿದೆ ಎಂದು ವ್ಯಂಗ್ಯವಾಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ