Belagavi NewsBusinessKannada NewsKarnataka NewsNationalPolitics

*ಕ್ಷುಲ್ಲಕ ಕಾರಣಕ್ಕೆ ನಮ್ಮ ಕಂಡಕ್ಟರ್ ಮೇಲೆ ಹಲ್ಲೆ ಆಗಿದೆ: ಸಚಿವ ರಾಮಲಿಂಗಾ ರೆಡ್ಡಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕ್ಷುಲ್ಲಕ ಕಾರಣಕ್ಕೆ ನಮ್ಮ ಕಂಡಕ್ಟರ್ ಮೇಲೆ ಹಲ್ಲೆ ಮಾಡಿದ್ದಾರೆ‌.‌ ಸದ್ಯ ಕಂಡಕ್ಟರ್ ಆರೋಗ್ಯ ಸ್ಥಿರವಾಗಿದ್ದು ಏನೂ ತೊಂದರೆ ಇಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿಯವರು ತಿಳಿಸಿದರು.‌

ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಂಡಕ್ಟರ್ ಮಹಾದೇವ ಹುಕ್ಕೇರಿ ಅವರ ಆರೋಗ್ಯ ವಿಚಾರಿಸಿದ ಬಳಿಕ ಮಾಧ್ಯಮಗಳ ಜೊತೆಗೆ ಅವರು ಮಾತನಾಡಿದರು. ಇನ್ನೂ ಎರಡು ದಿನ ಅವರನ್ನು ಆಸ್ಪತ್ರೆಯಲ್ಲೆ ಇಟ್ಟುಕೊಂಡು ವೈದ್ಯರು ಮನೆಗೆ ಕಳಿಸುತ್ತಾರೆ. ನಮ್ಮ ಎಂಡಿ ಮತ್ತು ಸ್ಥಳೀಯ ಅಧಿಕಾರಿಗಳು ಪ್ರತಿದಿನ ಬಂದು ಅವರ ಯೋಗಕ್ಷೇಮ ವಿಚಾರಿಸುತ್ತಿದ್ದಾರೆ. ಇನ್ನು ಪೋಕ್ಸೋ ಕೇಸ್ ದಾಖಲಿಸಿದ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳುವ ಬಗ್ಗೆ ನಮ್ಮ ಎಂಡಿ ಡಿಐಜಿ ಅವರ ಜೊತೆ ಮಾತನಾಡಿದ್ದಾರೆ. ನಾನು ಕೂಡ ಗೃಹಮಂತ್ರಿಗಳ ಜತೆಗೆ ಮಾತನಾಡುತ್ತೇನೆ.‌ ಮಹಾದೇವ ಪರವಾಗಿ ಮಾಧ್ಯಮಗಳು, ಸಾರ್ವಜನಿಕರು, ಸರ್ಕಾರ ಮತ್ತು ಪೊಲೀಸರು ಸೇರಿ ಎಲ್ಲರೂ ಇದ್ದಾರೆ ಎಂದರು.

ಪೋಕ್ಸೋ ಕೇಸ್ ನಿಂದ ಕಂಡಕ್ಟರ್ ಮಹಾದೇವ ಹುಕ್ಕೇರಿ ಸ್ವಲ್ಪ ಚಿಂತೆ ಹಚ್ಚಿಕೊಂಡಿದ್ದಾರೆ. ಈಗಾಗಲೇ ನಮ್ಮ ಎಂಡಿ, ಕಮಿಷನರ್ ಮಾತನಾಡಿದ್ದಾರೆ. ಬೇಕು ಅಂತಾನೆ ಅವರ ವಿರುದ್ಧ ಸುಳ್ಳು ಕೇಸ್ ಕೊಟ್ಟಿದ್ದಾರೆ.‌ ಏನೇ ದೂರು ಕೊಟ್ಟರೂ ತನಿಖೆ ಮಾಡುತ್ತಾರೆ. ಆದರೆ, ಪೊಲೀಸರು ಕಾಮನ್ ಸೆನ್ಸ್ ಉಪಯೋಗ ಮಾಡಬೇಕಿತ್ತು. ಆ ಬಸ್ಸಿನಲ್ಲಿ ಆಗ 90 ಜನ ಪ್ರಯಾಣ ಮಾಡುತ್ತಿದ್ದರು. ರಾಜ್ಯದಲ್ಲಿ ಪ್ರತಿದಿನ 1 ಲಕ್ಷ 72 ಸಾವಿರ ಟ್ರಿಪ್ ಇರುತ್ತವೆ.  65 ವರ್ಷಗಳಿಂದ ನಮ್ಮ ಇಲಾಖೆ ನೌಕರರ ಮೇಲೆ ಈ ರೀತಿಯ ದೂರು ಬಂದಿಲ್ಲ. ಉದ್ದೇಶಪೂರ್ವಕವಾಗಿಯೇ ಆ ರೀತಿ ಸುಳ್ಳು ಕೇಸ್ ಕೊಟ್ಟಿದ್ದಾರೆ ಎಂದು ಆರೋಪಿಸಿದರು.

ಮೊದಲಿಗೆ ಚಿತ್ರದುರ್ಗದಲ್ಲಿ ನಮ್ಮವರು ಅವರ ಬಸ್ಸಿಗೆ ಮಸಿ ಬಳಿದರು. ಮಾರನೇ ದಿನ ಮಹಾರಾಷ್ಟ್ರದಲ್ಲಿ ನಮ್ಮ ಬಸ್ಸಿಗೆ ಅವರು ಮಸಿ ಬಳಿದರು.‌ ಹಾಗಾಗಿ, ಈ ರೀತಿ ಬಸ್ ಗಳಿಗೆ ಮಸಿ ಬಳಿಯೋದರಲ್ಲಿ ಅರ್ಥವಿಲ್ಲ. ಇದರಿಂದ ಎರಡು ರಾಜ್ಯಗಳು ಸಾರಿಗೆ ಇಲಾಖೆಗಳಿಗೆ ನಷ್ಟ ಆಗುತ್ತದೆ. ಅಲ್ಲದೇ ಬಸ್ ಸಂಚಾರ ಸ್ಥಗಿತವಾಗಿದ್ದರಿಂದ ಸಾರ್ವಜನಿಕರಿಗೂ ಅನಾನುಕೂಲ ಆಗುತ್ತದೆ ಎಂದರು.

Home add -Advt

ಈಗಾಗಲೇ ತಪ್ಪು ಮಾಡಿದವರನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಶಿವಸೇನೆ ಪಕ್ಷ ಇಂಥವರನ್ನು ಬೆಂಬಲಿಸಬಾರದಿತ್ತು. ಈ ಸಣ್ಣ ವಿಚಾರವನ್ನು‌ ಶಿವಸೇನೆ ಗಂಭೀರವಾಗಿ ತೆಗೆದುಕೊಳ್ಳಬಾರದು. ನಮ್ಮ ಸರ್ಕಾರಿ ನೌಕರನ ಮೇಲೆ ಹಲ್ಲೆ ಮಾಡಿದ್ದಕ್ಕೆ ಪೊಲೀಸರು ಸರಿಯಾದ ಕ್ರಮ ತೆಗೆದುಕೊಂಡಿದ್ದಾರೆ. ಈ ವಿಚಾರದಲ್ಲಿ ಶಿವಸೇನೆ ಮಧ್ಯಪ್ರವೇಶ ಮಾಡಬಾರದಿತ್ತು ಎಂದು ರಾಮಲಿಂಗಾರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದರು.

ಮಹಾರಾಷ್ಟ್ರದಲ್ಲಿ ನಮ್ಮ ಬಸ್ ತಡೆದು, ಚಾಲಕ ಮತ್ತು ಕಂಡಕ್ಟರ್ ಮೇಲೆ ದಬ್ಬಾಳಿಕೆ ಮಾಡುವುದು ತಪ್ಪು. ಅಂಥವರ ಮೇಲೆ ಮಹಾರಾಷ್ಟ್ರ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು. ಸಣ್ಣ ವಿಚಾರಕ್ಕೆ ಅಕ್ಕ ಪಕ್ಕದ ರಾಜ್ಯಗಳ ಜೊತೆಗೆ ಸೌಹಾರ್ದತೆ ಕೆಡಿಸಿಕೊಳ್ಳಬಾರದು. ಕರ್ನಾಟಕ ಪೊಲೀಸರು ಸರಿಯಾದ ಕ್ರಮ ತೆಗೆದುಕೊಂಡಿದ್ದಾರೆ ಅಂತಾ ಶಿವಸೇನೆಯವರು ಸುಮ್ಮನಿದ್ದು ಬಿಟ್ಟಿದ್ದರೆ ಇದೆಲ್ಲಾ ಆಗುತ್ತಿರಲಿಲ್ಲ ಎಂದು ರಾಮಲಿಂಗಾರೆಡ್ಡಿ ಹೇಳಿದರು.

ಎಂಇಎಸ್ ಮುಖಂಡರು ಗುಂಡಾಗಿರಿ ಪ್ರದರ್ಶಿಸುತ್ತಿದ್ದಾರೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಆ ಬಗ್ಗೆ ನನಗೆ ಮಾಹಿತಿ ಇಲ್ಲ. ಆ ರೀತಿ ಯಾರಾದರೂ ಗೂಂಡಾಗಿರಿ ಮಾಡಿದ್ದರೆ ನೀವೇ ದೂರು ಕೊಡಿ. ಪೊಲೀಸರು ಅವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತಾರೆ. ಪೊಲೀಸ್ ಕಮಿಷನರ್ ಜೊತೆ ನಾನು ಮಾತನಾಡುತ್ತೇನೆ ಎಂದು ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button