Politics

*ಬೃಹತ್‌ ಮೈಸೂರು ಮಹಾನಗರ ಪಾಲಿಕೆಯನ್ನಾಗಿಸಲು ಚಿಂತನೆ: ಸಚಿವ ಬೈರತಿ ಸುರೇಶ್‌*

ಪ್ರಗತಿವಾಹಿನಿ ಸುದ್ದಿ: ಮೈಸೂರು ಮಹಾನಗರ ಪಾಲಿಕೆಯನ್ನು ಮೇಲ್ದರ್ಜೆಗೇರಿಸಿ ಬೃಹತ್‌ ಮೈಸೂರು ಮಹಾನಗರ ಪಾಲಿಕೆಯನ್ನಾಗಿ ರಚಿಸಲು ಉದ್ದೇಶಿಸಲಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವರಾದ ಬಿ. ಎಸ್.‌ ಸುರೇಶ (ಬೈರತಿ)ಯವರ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ಇಂದು ಸಭೆ ಜರುಗಿತು.

ಮೈಸೂರು ಮಹಾನಗರ ಪಾಲಿಕೆಯನ್ನು ಬೃಹತ್‌ ಮೈಸೂರು ಮಹಾನಗರ ಪಾಲಿಕೆಯನ್ನಾಗಿ ರಚನೆ ಮಾಡಿ ಮೇಲ್ದರ್ಜೆಗೇರಿಸುವ ಸಂಬಂಧ ಪ್ರಸ್ತಾಪಿತ ಬೃಹತ್‌ ಮೈಸೂರು ಮಹಾನಗರ ಪಾಲಿಕೆಯ ಎಲ್ಲೆ(ಗಡಿ) ಯನ್ನು ಗುರುತಿಸಿ 2018 ರ ವಾರ್ಡ್‌ ಪುನರ್‌ ವಿಂಗಡನೆ (Delimitation) ಅನ್ನು ಪರಿಗಣನೆಗೆ ತೆಗೆದುಕೊಂಡು ಹಾಲಿ ಮೈಸೂರು ಮಹಾನಗರ ಪಾಲಿಕೆ ಸರಹದ್ದಿಗೆ ಹೊಂದಿಕೊಂಡಂತೆ ಇರುವ ನಗರಸಭೆ, ಪಟ್ಟಣ ಪಂಚಾಯತಿ ಹಾಗೂ ಗ್ರಾಮ ಪಂಚಾಯಿತಿಗಳನ್ನು ವಿಲೀನ ಪಡಿಸಿಕೊಂಡು ಯೋಜನಾ ಬದ್ದ ಬೆಳವಣಿಗೆಗೆ ಉದ್ದೇಶಿಸಲಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಸ್ಥಳೀಯ ಸಂಸ್ಥೆಗಳ ಅನುಮೋದನೆಯನ್ನು ಪಡೆದು ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸಚಿವ ಬೈರತಿ ಸುರೇಶ ಅವರು ಸೂಚಿಸಿದರು.

ಮೈಸೂರು ಸುತ್ತ ಮುತ್ತಲಿನ 20 ರಿಂದ 30 ಹಳ್ಳಿಗಳನ್ನು ಬೃಹತ್‌ ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಸೇರಿಸಿಕೊಂಡು ಇದಕ್ಕೆ ಸಂಬಂಧಿಸಿದಂತೆ ವಿಸ್ತೃತವಾದ ಯೋಜನಾ ವರದಿಯನ್ನು ಸಿದ್ದಪಡಿಸಿಕೊಂಡು ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಲೂ ಸಿದ್ದತೆ ಮಾಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

Home add -Advt

ಪ್ರಸ್ತುತ ಮೈಸೂರು ಮಹಾನಗರ ಪಾಲಿಕೆ ಜನಸಂಖ್ಯೆ 13.30 ಲಕ್ಷದಷ್ಟಿದ್ದು, ಮೈಸೂರು ಮಹಾನಗರ ಪಾಲಿಕೆ ಸರಹದ್ದಿಗೆ ಹೊಂದಿಕೊಂಡಂತೆ ಇರುವ ನಗರಸಭೆ, ಪಟ್ಟಣ ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿಗಳನ್ನು ಸೇರಿಸಿಕೊಂಡರೆ 16.80 ಲಕ್ಷ ಜನಸಂಖ್ಯೆ ಆಗುತ್ತದೆ ಎಂದು ಸಭೆಗೆ ಮೈಸೂರು ಜಿಲ್ಲಾಧಿಕಾರಿಗಳು ತಿಳಿಸಿದಾಗ ಮೈಸೂರಿನಲ್ಲಿ ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳಿಗೆ ಕೊರತೆ ಇರುವುದಿಲ್ಲ, ಹೀಗಿರುವಾಗ ಬೃಹತ್‌ ಮೈಸೂರು ಮಹಾನಗರ ಪಾಲಿಕೆಯನ್ನು ರಚಿಸಲು ಯಾವುದೇ ರೀತಿಯ ಅಡೆತಡೆ ಇರುವುದಿಲ್ಲ ಎಂದು ಹೇಳಿದರು.

ಈಗಾಗಲೇ ಮೈಸೂರು ಮಹಾನಗರ ಪಾಲಿಕೆ ಸರಹದ್ದಿಗೆ ಹೊಂದಿಕೊಂಡಿರುವ ಕೆಲವು ಪ್ರದೇಶಗಳಿಗೆ ಪಾಲಿಕೆಯ ವತಿಯಿಂದಲೇ ಕುಡಿಯುವ ನೀರಿನ ಸವಲತ್ತನ್ನು ಒದಗಿಸಲಾಗುತ್ತಿದ್ದು, ಈ ವ್ಯಾಪ್ತಿಯಲ್ಲಿ ಹೆಚ್ಚಿನ ಬಡಾವಣೆಗಳು ಸಹ ಅಭಿವೃದ್ಧಿಗೊಂಡಿದ್ದು, ನಿವಾಸಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಬೇಡಿಕೆಯು ಹೆಚ್ಚಾಗಿರುತ್ತದೆ. ಅದರಂತೆ ಸೇವೆ ಪಾಲಿಕೆಯಿಂದ ವಿಸ್ತರಿಸಬೇಕಾಗಿದೆ ಎಂದು ಅಧಿಕಾರಿಗಳ ಸಭೆಗೆ ತಿಳಿಸಿದರು.

ಮೈಸೂರು ಸುತ್ತ ಮುತ್ತಲಿನ ಗ್ರಾಮಗಳ/ಬಡಾವಣೆಗಳನ್ನು ಮೈಸೂರು ಮಹಾನಗರ ಪಾಲಿಕೆ ಆಡಳಿತ ವ್ಯಾಪ್ತಿಗೆ ಒಳಪಡಿಸಿ ಎಂದು ಸೂಚಿಸಿದರು.

ಮೈಸೂರು ಮಹಾನಗರ ಪಾಲಿಕೆ, ಹೂಟಗಳ್ಳಿ ನಗರಸಭೆ, ಶ್ರೀರಾಂಪುರ, ರಮ್ಮನಹಳ್ಳಿ, ಕಡಕೋಳ ಮತ್ತು ಬೋಗಾದಿ ಪಟ್ಟಣ ಪಂಚಾಯಿತಿ, ಇಲವಾಲ ಗ್ರಾಮ ಪಂಚಾಯಿತಿಯ ಇಲವಾಲ ಗ್ರಾಮ, ಸಿದ್ದಲಿಂಗಪುರ ಗ್ರಾಮ ಪಂಚಾಯಿತಿ, ಚಾಮುಂಡಿ ಬೆಟ್ಟ ಗ್ರಾಮ ಪಂಚಾಯಿತಿ, ಆಲನಹಳ್ಳಿ ಗ್ರಾಮ ಪಂಚಾಯಿತಿ ಮತ್ತು ನಾಗನಹಳ್ಳಿ ಗ್ರಾಮ ಪಂಚಾಯಿತಿಯ ಶ್ಯಾದನಹಳ್ಳಿ ಗ್ರಾಮ ಮೈಸೂರು ಮಹಾನಗರ ಪಾಲಿಕೆಯ ಸರಹದ್ದಿಗೆ ಹೊಂದಿಕೊಂಡಿದೆ.

ಇವುಗಳಲ್ಲಿ ಕೆಲ ಸ್ಥಳೀಯ ಸಂಸ್ಥೆಯ ಕೌನ್ಸಿಲ್‌ ಸಭೆಯಲ್ಲಿ ಬೃಹತ್‌ ಮೈಸೂರು ಮಹಾನಗರ ಪಾಲಿಕೆಗೆ ಸೇರಿಸುವ ಪ್ರಸ್ತಾವನೆಗೆ ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿರುತ್ತಾರೆ ಎಂದು ಅಧಿಕಾರಿಗಳು ಸಭೆಗೆ ತಿಳಿಸಿದರು.

ಬಾಕಿ ಉಳಿದ ಸ್ಥಳೀಯ ಸಂಸ್ಥೆಯ ಕೌನ್ಸಿಲ್ ಸಭೆಯಲ್ಲಿ ಪ್ರಸ್ತಾವನೆಯನ್ನು ಇರಿಸಿ ಅನುಮೋದನೆಯನ್ನು ಪಡೆದು ಸರ್ಕಾರಕ್ಕೆ ಅದಷ್ಟು ಬೇಗ ಮೇಲ್ದರ್ಜೆಗೇರಿಸಲು ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸುವಂತೆ ನಗರಾಭಿವೃದ್ಧಿ ಮತ್ತು ನಗರ ಯೋಜನೆ ಅಧಿಕಾರಿಗಳಿಗೆ ಸೂಚಿಸಿದರು.

ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ, ದೀಪಾ ಚೋಳಾನ್‌, ಮೈಸೂರು ಲಕ್ಷ್ಮೀಕಾಂತ ರೆಡ್ಡಿ ಜಿ, ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ ವ್ಯವಸ್ಥಾಪಕ ನಿರ್ದೇಶಕ ಬಿ. ಶರತ್, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಡಾ|| ಸೆಲ್ವಮಣಿ ಆರ್, ನಗರಾಭಿವೃದ್ಧಿ ಪ್ರಾಧಿಕಾರಗಳು ಮತ್ತು ನಗರ ಮತ್ತು ಗ್ರಾಮಾಂತರ ಯೋಜನಾ ಆಯುಕ್ತಾಲಯದ ಆಯುಕ್ತರಾದ ವೆಂಕಟಾಚಲಪತಿ ಆರ್, ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರಾದ ತನ್ವೀರ್‌ ಶೇಖ್‌, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ರಘುನಂದನ್‌, ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶಕರಾದ ಎನ್.‌ ಕೆ. ತಿಪ್ಪೇಸ್ವಾಮಿ ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button