
ಪ್ರಗತಿವಾಹಿನಿ ಸುದ್ದಿ: ದೇಹಲಿ ಪ್ರವಾಸದಲ್ಲಿರುವ ಸಚಿವ ಸತೀಶ್ ಜಾರಕಿಹೊಳಿ, ಜೆಡಿಎಸ್ ವರಿಷ್ಠರಾದ ಎಚ್ .ಡಿ. ದೇವೇಗೌಡ ಮತ್ತು ಎಚ್ .ಡಿ. ಕುಮಾರಸ್ವಾಮಿಯವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ.
ರಾಜ್ಯ ರಾಜಕಾರಣದಲ್ಲಿ ಹಲವು ವಿವಾದಗಳು ನಡೆಯುತ್ತಿರುವಂತೆಯೇ ಸಚಿವ ಸತೀಶ್ ಜಾರಕಿಹೊಳಿ ಮಂಗಳವಾರ ರಾತ್ರಿ ಡಿನ್ನರ್ ನೆಪದಲ್ಲಿ ನವದೆಹಲಿಯಲ್ಲಿ ಈ ಭೇಟಿ ಮಾಡಿದ್ದಾರೆ.
ಸಿಎಂ ಕುರ್ಚಿ ಬದಲಾವಣೆ, ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ವಿಚಾರದ ಬಗ್ಗೆ ಕೆಲ ದಿನಗಳ ಹಿಂದೆ ಭಾರಿ ಚರ್ಚೆ ನಡೆದಿತ್ತು. ಹೈಕಮಾಂಡ್ ವಾರ್ನಿಂಗ್ ಬೆನ್ನಲ್ಲೇ ಎಲ್ಲವೂ ತಣ್ಣಗಾಗಿತ್ತು. ಬಜೆಟ್ ಅಧಿವೇಶನ ಮುಗಿಯುತ್ತಿದ್ದಂತೆಯೇ ಸಚಿವರ ಹನಿಟ್ರ್ಯಾಪ್ ಯತ್ನ ಪ್ರಕರಣ ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಚರ್ಚೆಗೆ ಗ್ರಾಸವಾಗಿದೆ. ಈ ಎಲ್ಲಾ ಬೆಳವಣಿಗೆ ಬೆನ್ನಲ್ಲೇ ದೆಹಲಿಗೆ ಭೇಟಿ ನೀಡಿರುವ ಸಚಿವ ಸತೀಶ್ ಜಾರಕಿಹೊಳಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಜೊತೆ ಡಿನ್ನರ್ ಮೀಟಿಂಗ್ ನಡೆಸಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.