
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಹಾಸ್ಟೆಲಿನ ಸ್ವಚ್ಛತೆ, ಶಿಸ್ತು ಎಸ್.ಎಸ್. ಎಲ್.ಸಿ ಹಾಗೂ ಪಿಯುಸಿ ಫಲಿತಾಂಶ ಸುಧಾರಣೆ ಮತ್ತು ಕಟ್ಟುನಿಟ್ಟಾಗಿ ವಸತಿ ನಿಲಯದಲ್ಲಿದ್ದು ಕೆಲಸವನ್ನು ನಿರ್ವಹಿಸಬೇಕೆಂದು ವಾರ್ಡನ್ ಹಾಗೂ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯತ್ ಸಿಇಒ ರಾಹುಲ್ ಶಿಂಧೆ ಅವರು ನಿರ್ದೇಶನ ನೀಡಿದರು.
ನಗರದ ಸುವರ್ಣ ಸೌಧದ ಸಭಾಂಗಣದಲ್ಲಿ ಮಂಗಳವಾರ (ಮೇ-27) ರಂದು ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಪರಿಶಿಷ್ಠ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧೀನದಲ್ಲಿ ಬರುವ ಮ್ಯಾಟ್ರೀಕ್ ಪೂರ್ವ ಹಾಗೂ ಮ್ಯಾಟ್ರೀಕ್ ನಂತರದ ವಾರ್ಡನರಿಗೆ ನಡೆದ ಒಂದು ದಿನದ ಪುನಶ್ಚೇತನ ಕಾರ್ಯಾಗಾರ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈ ಕಾರ್ಯಾಗಾರಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಕೆ.ಎಲ್.ಇ ಜೆ ಎನ್ಎಮ್ಸಿ ಪಬ್ಲಿಕ್ ಹೆಲ್ತ್ ಅಸೊಸಿಯೆಟ್ ಪ್ರೊಪೆಸರ್ ಆದ ಡಾ: ಅಶ್ವಿನಿ ನರಸನ್ನವರ ಜೀವನ ಕೌಶಲ್ಯದ ಕುರಿತು ವಿದ್ಯಾರ್ಥಿ ನಿಲಯದ ನಿರ್ವಹಣೆ ಕುರಿತು ವಾರ್ಡನರಿಗೆ ಮಾಹಿತಿ ನೀಡಿದರು.
ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ರಾಮನಗೌಡ ಕನ್ನೊಳಿ ಪ್ರಾಸ್ತಾವಿಕವಾಗಿ ಕಾರ್ಯಾಗಾರದ ಕುರಿತು ಮಾತನಾಡಿದರು. ಅದರಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಹರ್ಷ ಎಸ್ ವಾರ್ಡನ ಕರ್ತವ್ಯ ಹೊಣೆಗಾರಿಕೆ ಕುರಿತು ತಿಳಿಸಿದರು.
ಜಿಲ್ಲಾ ಪರಿಶಿಷ್ಠ ವರ್ಗಗಳ ಕಲ್ಯಾಣ ಅಧಿಕಾರಿ ಬಸವರಾಜ ಕುರಿಹುಲಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ಪೂಜಾರಿ, ಜಿಲ್ಲೆಯ ನಾಲ್ಕು ಇಲಾಖೆಯ ಎಲ್ಲ ವಾರ್ಡನರು ತಾಲ್ಲೂಕಾ ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹಾಜರಿದ್ದರು.