Kannada NewsKarnataka News

’ಏಕೀಕರಣೋತ್ತರ ಕರ್ನಾಟಕ’ ಕುರಿತ ವಿಚಾರ ಸಂಕಿರಣ

 ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸ್ಥಾಪನೆಯಾಗಿ ಹತ್ತು ವರ್ಷಗಳು ತುಂಬುತ್ತಿರುವ ಹಿನ್ನೆಲೆಯಲ್ಲಿ ಈ ವರ್ಷವನ್ನು ವಿಶ್ವವಿದ್ಯಾಲಯವು ದಶಮಾನೋತ್ಸವದ ಸಂಭ್ರಮದ ವರ್ಷವನ್ನಾಗಿ ಆಚರಿಸುತ್ತಿದೆ.

ಅದಕ್ಕಾಗಿ ಹಲವು ರಚನಾತ್ಮಕ ಕಾರ್ಯಕ್ರಮಗಳನ್ನು ರೂಪಿಸಿಕೊಂಡಿದೆ. ಪುಸ್ತಕ ಪ್ರಕಟಣೆ, ಸರಣಿ ವಿಚಾರಸಂಕಿರಣಗಳು, ವಿಶೇಷ ಉಪನ್ಯಾಸಗಳು, ಕಾರ್ಯಾಗಾರಗಳು, ಸಿಂಪೋಜಿಯಂಗಳು, ಸಾಂಸ್ಕೃತಿಕ ಉತ್ಸವಗಳನ್ನು ಆಚರಿಸುವ ಉದ್ದೇಶವನ್ನು ಹೊಂದಲಾಗಿದೆ ಎಂದು ಕುಲಪತಿ ರಾಮಚಂದ್ರೇಗೌಡ ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ಹಿನ್ನೆಲೆಯಲ್ಲಿ ಈವರ್ಷದ ರಾಜ್ಯೋತ್ಸವವನ್ನು ವಿಶೇಷವಾಗಿ ಆಚರಿಸುವ ಉದ್ದೇಶದಿಂದ ದಿನಾಂಕ ೨೫.೧೧.೨೦೧೯ರಂದು ಒಂದು ದಿನದ ’ಏಕೀಕರಣೋತ್ತರ ಕರ್ನಾಟಕ’ ಎನ್ನುವ ವಿಷಯ ಕುರಿತು ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ. ಏಕೀಕರಣದ ನಂತರದಲ್ಲಿ ಕರ್ನಾಟಕ ಹೊಂದಿದ ಅಭಿವೃದ್ಧಿಯನ್ನು ಪರಾಮರ್ಶಿಸುವ ಉದ್ದೇಶದ ವಿಚಾರ ಸಂಕಿರಣವನ್ನು ನಾಡಿನ ಹಿರಿಯ ಸಂಸ್ಕೃತಿ ಚಿಂತಕರಾದ ಪ್ರೊ. ಬರಗೂರು ರಾಮಚಂದ್ರಪ್ಪ ಅವರು ಉದ್ಘಾಟಿಸಲಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಲಪತಿಗಳಾದ ಪ್ರೊ. ರಾಮಚಂದ್ರಗೌಡ ಅವರು ವಹಿಸುವರು. ಅತಿಥಿಗಳಾಗಿ ಕುಲಸಚಿವರಾದ ಪ್ರೊ. ಬಸವರಾಜ ಪದ್ಮಶಾಲಿ ಹಾಗೂ ಹಣಕಾಸು ಅಧಿಕಾರಿಗಳಾದ ಪ್ರೊ. ಡಿ. ಎನ್ ಪಾಟೀಲರು ಆಗಮಿಸಲಿರುವರು. ಹಿರಿಯ ಪತ್ರಕರ್ತರಾದ ಹಾಗೂ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಮಹಾದೇವ ಪ್ರಕಾಶ ಅವರು ’ಏಕೀಕರಣೋತ್ತರ ಸಮಾಜೋ – ರಾಜಕೀಯ ವಿದ್ಯಮಾನಗಳು’ ಎನ್ನುವ ವಿಷಯ ಕುರಿತು ವಿಷಯಮಂಡನೆ ಮಾಡುವರು.

ಹಿರಿಯ ಅರ್ಥತಜ್ಞ ಪ್ರೊ. ಟಿ ಆರ. ಚಂದ್ರಶೇಖರ್ ಅವರು ’ಏಕೀಕರಣೋತ್ತರ ಸಮಾಜೋ – ಆರ್ಥಿಕ ವಿದ್ಯಮಾನಗಳು’ ಕುರಿತು ವಿಷಯ ಮಂಡಿಸಿ ಚರ್ಚಿಸಲಿರುವವರು.
ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಸಮಾರೋಪ ಭಾಷಣವನ್ನು ಡಾ. ರಂಗರಾಜ ವನದುರ್ಗ ಅವರು ಮಾಡುವರು. ಹಿರಿಯ ಕನ್ನಡಪರ ಚಿಂತಕರಾದ ಹಾಗೂ ಮಾಜಿ ಮಹಾಪೌರರಾದ ಡಾ. ಸಿದ್ಧನಗೌಡ ಪಾಟೀಲ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿರುವರು. ಸಮಾರಂಭದ ಅಧ್ಯಕ್ಷತೆಯನ್ನು ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆಯ ಮುಖ್ಯಸ್ಥರಾದ ಪ್ರೊ. ಎಸ್ ಎಂ ಗಂಗಾಧರಯ್ಯ ಅವರು ವಹಿಸುವರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button