Belagavi NewsBelgaum NewsPolitics

*ಅಧಿಕಾರಿಗಳಿಗೆ ಖಡಕ್ ಸಂದೇಶ ನೀಡಿದ ಸಚಿವ ಸತೀಶ್‌ ಜಾರಕಿಹೊಳಿ*

ಪ್ರಗತಿವಾಹಿನಿ ಸುದ್ದಿ: ಅಭಿವೃದ್ಧಿ ಕೆಲಸ ಮಾಡಲು ಸದಾ ಅಧಿಕಾರಿಗಳಿಗೆ ಸಹಕಾರ ನೀಡುತ್ತೇವೆ. ಆದರೆ ಪ್ರತಿ ಕೆಲಸಗಳನ್ನು ಸಿಎಂ ಅಥವಾ ನಾವೇ ಹೇಳಲು ಆಗಲ್ಲ. ಅಭಿವೃದ್ಧಿಯಲ್ಲಿ ನಿರ್ಲಕ್ಷ್ಯ ಅಥವಾ ಕಾನೂನು ಸುವ್ಯವಸ್ಥೆ ಸರಿಯಾರಿ ನಿಭಾಯಿಸದಿದ್ದರೆ ಅಂತಹ ಅಧಿಕಾರಿಗಳಿಗೆ ಜಿಲ್ಲೆಯಲ್ಲಿ ಸೇವೆ ಸಲ್ಲಿಸಲು ಅವಕಾಶವಿಲ್ಲ ಎಂದು ಲೋಕೋಪಯೋಗಿ ಇಲಾಖೆ ಹಾಗೂ ಬಿಳಗಾವಿ ಜಿಲ್ಲೆ ಉಸ್ತುವಾರಿ ಸಚಿವ ಸತೀಶ್‌ ಜಾರಕಿಹೊಳಿ ಅವರು ಹೇಳಿದರು.

ನಗರದ ಕುವೇಂಪು ನಗರದ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆ ದೊಡ್ಡ ಜಿಲ್ಲೆಯಾಗಿದ್ದು, ಜಿಲ್ಲಾ ಮಟ್ಟದ ಅಧಿಕಾರಿಗಳು ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಬೇಕು. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು, ಇಲ್ಲಿನ ಜನರ ಹಿತ ಕಾಪಾಡುವುದು ಮುಖ್ಯ. ಕರ್ತವ್ಯದಲ್ಲಿ ನಿರ್ಲಕ್ಷ್ಯ ವಹಿಸಿದರೆ ಸರ್ಕಾರಕ್ಕೆ, ನಮಗೂ ಕೆಟ್ಟ ಹೆಸರು ಬರುತ್ತದೆ. ಜಿಲ್ಲೆಯಲ್ಲಿ ಕೆಲ ಘಟನೆಗಳಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ವಿಫಲವಾಗಿದ್ದರಿಂದ ಪೊಲೀಸ್ ಕಮಿಷನರ್ ಅವರನ್ನು ವರ್ಗಾವಣೆಗೊಳಿಸಲಾಗಿದೆ ಎಂದು ತಿಳಿಸಿದರು.

ಇನ್ನು ಹಿಡಕಲ್​ ಜಲಾಶಯದಿಂದ ಧಾರವಾಡ ಕೈಗಾರಿಕಾ ಪ್ರದೇಶಕ್ಕೆ ನೀರು ಒಯ್ಯುಲು ಈಗಾಗಲೇ ಮೂರು ಇಲಾಖೆಗಳು ಅನುಮತಿ ನೀಡಿವೆ. ಧಾರವಾಡದ ಕೆಐಎಡಿಬಿ ವತಿಯಿಂದ ಕಾಮಗಾರಿ ನಡೆಯುತ್ತಿದೆ. ಸುಮಾರು 110 ಕಿ.ಮೀ. ಪೈಪ್​​ಲೈನ್​​​ ಮೂಲಕ ಧಾರವಾಡ ಕೈಗಾರಿಕಾ ಪ್ರದೇಶಕ್ಕೆ ನೀರು ಒಯ್ಯುತ್ತಿದ್ದಾರೆ. ಎಷ್ಟು ನೀರು ಒಯ್ಯುತ್ತಿದ್ದಾರೆಂಬ ಮಾಹಿತಿ ಇಲ್ಲ. ಈ ಕುರಿತು ಸಭೆ ನಡೆಸಿ ಭವಿಷ್ಯದಲ್ಲಿ ನಮ್ಮ ಜಿಲ್ಲೆಗೆ ನೀರಿನ ಅಭಾವ ಉಂಟಾಗಬಾರದು ಎಂದು ಸಿಎಂ ಸಿದ್ದರಾಮಯ್ಯನವರಿಗೆ ಪತ್ರ ಬರೆಯುತ್ತೇನೆ ಎಂದು ಹೇಳಿದರು.

ಬೆಳಗಾವಿ ಜಿಲ್ಲೆಯಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಲ್ಲಿ ಅಕ್ರಮ ನಡೆಯುತ್ತಿದೆ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಕಳೆದ ಎರಡು ಕೆಡಿಪಿ ಸಭೆಗೆ ಸ್ಲಂ ಬೋರ್ಡ್ ಅಧಿಕಾರಿ ಗೈರಾಗಿದ್ದರು. ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಮೂಲಕ ನಡೆಯುತ್ತಿರುವ ಕಾಮಗಾರಿಗಳ ಬಗ್ಗೆ ತನಿಖೆ ನಡೆಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸುತ್ತೇನೆಂದು ತಿಳಿಸಿದರು.

Home add -Advt

ಕನ್ನಡ ಭಾಷೆ ಹುಟ್ಟಿದ್ದು ತಮಿಳಿನಿಂದ ಎಂಬ ನಟ ಕಮಲ ಹಾಸನ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ನಟ ಕಮಲ ಹಾಸನ್ ಹೇಳಿಕೆ ಅತಂತ್ಯ ಖಂಡನೀಯ. ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಈ ರೀತಿ ಕನ್ನಡದ ಬಗ್ಗೆ ಮಾತನಾಡಿದ ನಟ ಕಮಲ ಹಾಸನ್ ಮೊದಲು ಕನ್ನಡಿಗರ ಬಳಿ ಕ್ಷಮೆ ಕೇಳಬೇಕೆಂದು ಆಗ್ರಹಿಸಿದರು.

ಆರ್‌ ಸಿಬಿ & ಪಂಜಾಬ ಐಪಿಎಲ್‌ ಅಂತಿಮ ಮ್ಯಾಚ್‌ ಬಗ್ಗೆ ಮಾತನಾಡಿ, ಎಲ್ಲರೂ ನಮ್ಮವರು ಗೆಲ್ಲಲಿ ಎನ್ನುವುದು ಸ್ವಾಭಾವಿಕ. ಹೀಗಾಗಿ ನಾಳೆ ನಡೆಯುವ ಪಂದ್ಯದಲ್ಲಿ ನಮ್ಮ ಆರ್‌ಸಿಬಿ ಗೆಲ್ಲಲಿ ಎಂದು ಹರಿಸಿದ ಸಚಿವರು, ಕಳೆದ ಇಪ್ಪತ್ತು ವರ್ಷಗಳಿಂದ ನಾನು ಕ್ರಿಕೆಟ್‌, ಸಿನಿಮಾ ನೋಡುತ್ತಿಲ್ಲ. ಆದರೆ ಕ್ರಿಕೆಟ್‌ ನನ್ನ ನೆಚ್ಚಿನ ಕ್ರೀಡೆ. ಹೀಗಾಗಿ ಸಮಯ ಸಿಕ್ಕಾಗ ಈಗಲೂ ಕ್ರಿಕೆಟ್‌ ಆಡುತ್ತೇನೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಶಾಸಕ ಆಸೀಪ್‌ (ರಾಜು) ಸೇಠ್‌ ಇದ್ದರು.

Related Articles

Back to top button