Latest

ಬಿಜೆಪಿ ಹೈಕಮಾಂಡ್ ಅಂಗಳ ತಲುಪಿದ ‘ಕಾಮನ್ ಸೆನ್ಸ್’ ಗಲಾಟೆ

 

 

 

   ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಬೆಳಗಾವಿಯ ಗೋಗಟೆ ವೃತ್ತದ ರಸ್ತೆ ಓವರ್ ಬ್ರಿಜ್ ಉದ್ಘಾಟನೆ ವೇಳೆ ನಡೆದ ಗಲಾಟೆ ಪ್ರಕರಣ ಬಿಜೆಪಿ ಹೈಕಮಾಂಡ್ ಅಂಗಳ ತಲುಪಿದೆ.

ಕಾರ್ಯಕ್ರಮದ ಹಿನ್ನೆಲೆಯಲ್ಲಿ ಪತ್ರಿಕೆಗಳಲ್ಲಿ ನೀಡಿದ ಜಾಹಿರಾತಿನಲ್ಲಿ ಕೇವಲ ಲೋಕಸಭಾ ಸದಸ್ಯ ಸುರೇಶ ಅಂಗಡಿ ಹೆಸರನ್ನು ಮಾತ್ರ ಪ್ರಕಟಿಸಿರುವುದು, ಇದರಿಂದಾಗಿ ಪ್ರಭಾಕರ ಕೋರೆ ಸಿಟ್ಟಾಗಿರುವುದು, ಕಾಮನ್ ಸೆನ್ಸ್ ಇಲ್ಲವೇ ಎನ್ನುವಂತಹ ಮಾತಿನೊಂದಿಗೆ ಸುರೇಶ ಅಂಗಡಿ ಕೋರೆಯವರನ್ನು ಅವಮಾನಿಸಿರುವುದು ಎಲ್ಲವನ್ನೂ ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿದೆ ಎಂದು ಗೊತ್ತಾಗಿದೆ.

ಬೆಳಗಾವಿ ಜಿಲ್ಲೆಗೆ ಸಂಬಂಧಿಸಿದಂತೆ ಮೂವರು ಲೋಕಸಭಾ ಸದಸ್ಯರು, ಒಬ್ಬ ರಾಜ್ಯಸಭಾ ಸದಸ್ಯರಿದ್ದಾರೆ. ಪ್ರೋಟೋಕಾಲ್ ಪ್ರಕಾರ ಮೂವರ ಹೆಸರನ್ನು ಉಲ್ಲೇಖಿಸಬೇಕು. ರೈಲ್ವೆ ಓವರ್ ಬ್ರಿಜ್ ಇರುವುದು ನಗರದಲ್ಲಾಗಿರುವುದರಿಂದ ಸುರೇಶ ಅಂಗಡಿ ಮತ್ತು ಪ್ರಭಾಕರ ಕೋರೆ ಅವರ ಹೆಸರನ್ನಾದರೂ ಹಾಕಬೇಕಿತ್ತು. ಆದರೆ ಪ್ರಭಾಕರ ಕೋರೆ ಅವರ ಹೆಸರನ್ನು ಕೈ ಬಿಟ್ಟು ರೈಲ್ವೆ ಇಲಾಖೆ ಜಾಹಿರಾತು ಪ್ರಕಟಿಸಿದೆ. ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಕೊಡುವುದರಲ್ಲಿ, ಬ್ಯಾನರ್ ಪ್ರಕಟಿಸುವಲ್ಲಿ ಎಲ್ಲದರಲ್ಲೂ ಇಲಾಖೆ ಕೋರೆಯವರನ್ನು ಕಡೆಗಣಿಸಿದೆ. 

ಇದರಿಂದ ಕೋಪಗೊಂಡ ಕೋರೆ ವೇದಿಕೆಗೆ ಬರಲು ನಿರಾಕರಿಸಿದ್ದರು. ಈ ವೇಳೆ ಸುರೇಶ ಅಂಗಡಿ ಕೋರೆಯವರನ್ನುದ್ದೇಶಿಸಿ, ಇಲ್ಲಿ ಹೆಸರು ಮುಖ್ಯವಲ್ಲ, ಇಷ್ಟೊಂದು ಹಿರಿಯರಿದ್ದೀರಿ, ನಿಮಗೆ ಕಾಮನ್ ಸೆನ್ಸ್ ಇಲ್ಲವೇ? ಎಂದೆಲ್ಲ ಬಹಿರಂಗವಾಗಿಯೇ ಮಾತನಾಡಿದ್ದರು. ಸಚಿವ ಸತೀಶ್ ಜಾರಕಿಹೊಳಿ ಹಾಗೂ ನೂರಾರು ನಾಗರಿಕರ ಸಮ್ಮುಖದಲ್ಲೇ ಈ ಪ್ರಕರಣ ನಡೆದಿದೆ. ನಂತರ ಒತ್ತಾಯಪೂರ್ವಕವಾಗಿ ಕೋರೆಯವರನ್ನು ವೇದಿಕೆ ಹತ್ತಿಸಿದ್ದರು.

ಈ ವೇಳೆ ಸುರೇಶ ಅಂಗಡಿಯವರ ಬಾಡಿ ಲ್ಯಾಂಗ್ವೇಜ್ ಕೂಡ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಕೋರೆ ಭಾಷಣ ಮಾಡುವಾಗಿ, ಓವರ್ ಬ್ರಿಜ್ ಗೆ ಅಂಗಡಿ ಹೆಸರನ್ನಿಡಿ ಎಂದು ವ್ಯಂಗ್ಯವಾಗಿ ಹೇಳಿದ್ದರು. ಈ ಕುರಿತು ಪತ್ರ ಬರೆಯುವುದಾಗಿಯೂ ಹೇಳಿದ್ದರು. 

ಈ ಇಡೀ ಪ್ರಕರಣ ಹೈಕಮಾಂಡ್ ಮೆಟ್ಟಿಲೇರಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಈ ಸಂಬಂಧ ರೈಲ್ವೆ ಇಲಾಖೆ ಮತ್ತು ಸುರೇಶ ಅಂಗಡಿಯವರಿಗೆ ನೊಟೀಸ್ ಜಾರಿಗೊಳಿಸುವ ಸಾಧ್ಯತೆಯೂ ಇದೆ ಎನ್ನಲಾಗಿದೆ. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button