ಸಿಟಿ ಸ್ಮಾರ್ಟ್ ಆಗುತ್ತಿದೆ, ಕುಲಗೆಡಿಸಬೇಡಿ: ಅಗೆಯುವವರಿಗೆ ಅಭಯ ಪಾಟೀಲ ಎಚ್ಚರಿಕೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆ ನಡೆಯುತ್ತಿರುವ ವೇಳೆಯಲ್ಲೇ ಬೇರೆ ಬೇರೆ ಇಲಾಖೆಯವರೂ ಕೆಲಸ ಕೈಗೆತ್ತಿಕೊಳ್ಳುತ್ತಿದ್ದಾರೆ. ಎಲ್ಲಿ ನೋಡಿದರೂ ರಸ್ತೆಗಳನ್ನು ಅಗೆಯಲಾಗಿದೆ. ಇದರಿಂದಾಗಿ ಸಾರ್ವಜನಿಕರು ಪರದಾಡುವಂತಾಗಿದೆ.
ಈ ಹಿನ್ನೆಲೆಯಲ್ಲಿ ಶಾಸಕ ಅಭಯ ಪಾಟೀಲ ಸ್ಮಾರ್ಟ್ ಸಿಟಿ ಕಚೇರಿಯಲ್ಲಿ, ಸ್ಮಾರ್ಟ್ ಸಿಟಿ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳ ಕೋ-ಆರ್ಡಿನೇಶನ್ ಮೀಟಿಂಗ್ ನಡೆಸಿದರು. ಹೆಸ್ಕಾಂ, ನಗರ ನೀರು ಸರಬರಾಜು ಇಲಾಖೆ, ಗ್ಯಾಸ್ ಪೈಪ್ ಲೈನ್ ಗುತ್ತಿಗೆದಾರರು ಸಭೆಯಲ್ಲಿ ಭಾಗವಹಿಸಿದ್ದರು.
ಅಗೆಯುವ ಕೆಲಸವನ್ನು ತಕ್ಷಣ ಪೂರ್ಣಗೊಳಿಸಬೇಕು. ಸ್ಮಾರ್ಟ್ ಸಿಟಿ ಕೆಲಸಗಳು ಮುಗಿದ ನಂತರ ಮತ್ತೆ ಅಗೆಯಲು ಅವಕಾಶವಿಲ್ಲ. ಈಗಲಾದರೂ ಅಗೆಯುವ ಮುನ್ನ ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಇಲಾಖೆಗಳ ಮಧ್ಯೆ ಸರಿಯಾಗಿ ಮಾಹಿತಿ ವಿನಿಮಯ ಮಾಡಿಕೊಂಡು ಯೋಜನೆ ಕೈಗೆತ್ತಿಕೊಳ್ಳಬೇಕು. ಇಲ್ಲವಾದಲ್ಲಿ ಜನರು ಪರದಾಡುವಂತಾಗುತ್ತದೆ ಎಂದು ಅಭಯ ಪಾಟೀಲ ತಿಳಿಸಿದರು.
ಗ್ಯಾಸ್ ಪೈಪ್ ಲೈನ್ ಅಳವಡಿಯಲು ರಸ್ತೆ ಅಗೆಯುವವರು ಮಹಾನಗರ ಪಾಲಿಕೆಗೆ ಸಮರ್ಪಕ ಮಾಹಿತಿ ನೀಡುತ್ತಿಲ್ಲ ಎಂದು ಮಹಾನಗರ ಪಾಲಿಕೆ ಆಯುಕ್ತ ಜಗದೀಶ ಕೆಎಚ್ ತಿಳಿಸಿದರು.
ಇದೇ ವೇಳೆ, ಸ್ಮಾರ್ಟ್ ಸಿಟಿ ಯೋಜನೆಯ ಕೆಲಸದ ಪ್ರಗತಿಯನ್ನು ಶಾಸಕರು ಪರಾಮರ್ಶಿಸಿದರು. ಸ್ಮಾರ್ಟ್ ಸಿಟಿ ಎಂಡಿ ಶಶಿಧರ ಕುರೇರ ವಿವಿಧ ಯೋಜನೆಗಳ ಪ್ರಗತಿಯನ್ನು ಶಾಸಕರಿಗೆ ವಿವರಿಸಿದರು.
ಸಧ್ಯ ಯೋಜನೆಗಳು ಒಂದು ಹಂತಕ್ಕೆ ಬಂದಿದ್ದು, ಸ್ಪಷ್ಟ ಸ್ವರೂಪ ಪಡೆದು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ. ಇದೇ ಮಾದರಿಯಲ್ಲಿ ಮುಂದುವರಿಸಬೇಕು. ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸದ ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಬೇಕು ಎಂದು ಅಭಯ ಪಾಟೀಲ ಸೂಚಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ