*ಸ್ವಚ್ಛ ಸರ್ವೇಕ್ಷಣ ಗ್ರಾಮೀಣ-2025 ಸರ್ವೇ ನಡೆಸಲು ಬರುವ ಸಂಸ್ಥೆಗೆ ಅಗತ್ಯ ಸಹಕಾರ ಮತ್ತು ಸೂಕ್ತ ಮಾಹಿತಿ ನೀಡಿ : ಜಿಪಂ ಸಿಇಒ ರಾಹುಲ್ ಶಿಂಧೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸ್ವಚ್ಛ ಭಾರತ ಮಿಷನ್(ಗ್ರಾ) ಯೋಜನೆಯಡಿ ಜಿಲ್ಲೆಯಲ್ಲಿ ಗ್ರಾಮೀಣ ಸ್ವಚ್ಛತೆ, ನೈರ್ಮಲ್ಯ ಕಾಪಾಡುವಿಕೆ, ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ, ಬಯಲು ಬಹಿರ್ದೆಸೆ ಮುಕ್ತ ಸುಸ್ಥಿರತೆ ಕಾಯ್ದುಕೊಳ್ಳಲು ಹಲವು ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ಎಲ್ಲಾ ಘಟಕಾಂಶಗಳ ಪ್ರಗತಿ ಹಾಗೂ ಸುಸ್ಥಿರತೆಯಲ್ಲಿ ಸಮುದಾಯ ಭಾಗವಹಿಸುವಿಕೆಗೆ ಹಮ್ಮಿಕೊಂಡಿರುವ ಹಲವು ಚಟುವಟಿಕೆಗಳ ಕುರಿತು ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ವತಿಯಿಂದ ಪ್ರತಿ ವರ್ಷ “ಸ್ವಚ್ಛ ಸರ್ವೇಕ್ಷಣ ಗ್ರಾಮೀಣ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ.
ಈ ಸಮೀಕ್ಷೆಯಿಂದ ಜಿಲ್ಲೆ ಹಾಗೂ ಗ್ರಾಮ ಪಂಚಾಯತಿಗಳ ಪ್ರಗತಿ ಪರಿಶೀಲಿಸಿ ಅಂಕಗಳನ್ನು ನೀಡುವ ಮೂಲಕ ಶ್ರೇಯಾಂಕವನ್ನು ನೀಡಿ ಅತಿ ಹೆಚ್ಚು ಅಂಕಗಳನ್ನು ಪಡೆದ ಜಿಲ್ಲೆಗಳಿಗೆ ಸನ್ಮಾನವನ್ನು ಸಹ ನೀಡಲಾಗುತ್ತಿದೆ. ಅಲ್ಲದೇ ಸಮೀಕ್ಷೆಯಿಂದ ಸ್ವಚ್ಛ ಭಾರತ ಮಿಷನ್(ಗ್ರಾ) ಯೋಜನೆಯಡಿ ಈವರೆಗೆ ನಿರ್ಮಿಸಿದ ಘಟಕಗಳ ಪ್ರಗತಿಯನ್ನು ಮೌಲ್ಯಮಾಪನ ನಡೆಸುವಂತಾಗುತ್ತದೆ.
ಸ್ವಚ್ಛ ಸರ್ವೇಕ್ಷಣ ಗ್ರಾಮೀಣ-2025ರ ಸರ್ವೆ ಕಾರ್ಯಕ್ಕೆ ಪ್ರತಿ ಜಿಲ್ಲೆಯಿಂದ 20 ಗ್ರಾಮಗಳನ್ನು ಆಯ್ಕೆ ಮಾಡಿಕೊಳ್ಳಲಾಗಿರುತ್ತದೆ. ವೈಯಕ್ತಿಕ ಗೃಹ ಶೌಚಾಲಯ, ಸಮುದಾಯ ಶೌಚಾಲಯ, ಘನ ತ್ಯಾಜ್ಯ ನಿರ್ವಹಣಾ ಘಟಕ, ದ್ರವ ತ್ಯಾಜ್ಯ ನಿರ್ವಹಣೆ, ಗೋಬರ್-ಧನ್ ಘಟಕ, ಮಾಹಿತಿ ಶಿಕ್ಷಣ ಮತ್ತು ಸಂವಹನ ಹಾಗೂ ತರಬೇತಿ ಕಾರ್ಯಕ್ರಮಗಳ ಕುರಿತು ನೇರವಾಗಿ ಪರಿಶೀಲಿಸಲಿದ್ದಾರೆ ಹಾಗೂ ಸಾರ್ವಜನಿಕರಿಂದ SSG-2025 Mobile App ಮೂಲಕ ಸ್ವಚ್ಛ ಭಾರತ ಮಿಷನ್(ಗ್ರಾ) ಯೋಜನೆಯಡಿ ಪಡೆದ ಸೌಲಭ್ಯಗಳ ಕುರಿತು ಅಭಿಪ್ರಾಯ ಸಂಗ್ರಹಿಸಲಿದ್ದಾರೆ.
ಸರ್ವೆ ಕಾರ್ಯವು ದಿನಾಂಕ 22.06.2025 ರಿಂದ 15.07.2025ರವರೆಗೆ ನಡೆಸುವುದಾಗಿ ತಿಳಿಸಿದ್ದು, ಈ ಕಾರ್ಯಕ್ಕೆ ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು, Academy of Management Studies(AMS) Lucknow ಎಂಬ ಸಂಸ್ಥೆಯನ್ನು ನೇಮಿಸಿಕೊಂಡಿದೆ. ಈ ಸಂಸ್ಥೆಯ ಪ್ರತಿನಿಧಿಗಳು ನಿಗದಿತ ದಿನಾಂಕದಂದು ಕೇಂದ್ರ ಸರ್ಕಾರ ನೀಡಿರುವ ಗ್ರಾಮಗಳಿಗೆ ನೇರವಾಗಿ ಸರ್ವೇ ಕಾರ್ಯಕ್ಕೆ ಭೇಟಿ ನೀಡಿ ಸರ್ವೆ ನಡೆಸಲಿದ್ದು ಈ ಸಂಸ್ಥೆಯ ಪ್ರತಿನಿಧಿಗಳು ಆಯ್ದ ಗ್ರಾಮ ಪಂಚಾಯತಿಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಇವರಿಗೆ ಅಗತ್ಯ ಸಹಕಾರ ಮತ್ತು ಸೂಕ್ತ ಮಾಹಿತಿ ನೀಡಲು ಗ್ರಾಮ ಪಂಚಾಯತ ಅಭಿವೃದ್ದಿ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಜಿಪಂ ಸಿಇಒ ರಾಹುಲ್ ಶಿಂಧೆ ರವರು ಸೂಚನೆ ನೀಡಿದ್ದಾರೆ.
ಸದರಿ ವಿಷಯವನ್ನು ಅತೀ ಜರೂರು ಎಂದು ಭಾವಿಸಿ ತಮ್ಮ ತಾಲೂಕಿನಲ್ಲಿ ಈವರೆಗೆ ಸ್ವಚ್ಛ ಭಾರತ ಮಿಷನ್(ಗ್ರಾ) ಯೋಜನೆಯಡಿ ನಿರ್ಮಿಸಿದ ವಿವಿಧ ಘಟಕಗಳು ನಿರಂತರ ಕಾರ್ಯಾಚರಣೆ ಮತ್ತು ಸುಸ್ಥಿರತೆ ಕಾಯ್ದುಕೊಳ್ಳಲು ಅಗತ್ಯ ಕ್ರಮವಹಿಸುವುದು ಹಾಗೂ ಸ್ವಚ್ಛ ಸರ್ವೇಕ್ಷಣ ಗ್ರಾಮೀಣ-2025ರ ಕುರಿತು ಗ್ರಾಮ ಪಂಚಾಯತಿಗಳಿಗೆ ಹಾಗೂ ಸಾರ್ವಜನಿಕರಿಗೆ ಮಾಹಿತಿ ನೀಡುವಂತಹ ಮಾಹಿತಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಗಳು ಮತ್ತು ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಾರ್ವಜನಿಕರು SSG-2025 Mobile App ನಲ್ಲಿ ತಾವೂ SBM-G ಅಡಿ ಪಡೆದಿರುವ ಸೌಲಭ್ಯಗಳ ಕುರಿತು ಮಾಹಿತಿ ನೀಡಲು ಪ್ರೇರೇಪಿಸುವಂತಹ ಸಂದೇಶಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಪಡಿಸಿ “ಸ್ವಚ್ಛ ಸರ್ವೇಕ್ಷಣ ಗ್ರಾಮೀಣ- 2025” ರ ಸರ್ವೆ ಕಾರ್ಯವನ್ನು ಯಶಸ್ವಿಗೊಳಿಸುವಂತೆ ಜಿಪಂ ಸಿಇಒ ರಾಹುಲ್ ಶಿಂಧೆ ರವರು ತಾಲೂಕಿನ ಎಲ್ಲ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚಿಸಿದ್ದಾರೆ.