ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ಕರ್ನಾಟಕ ಲೋಕಸೇವಾ ಆಯೋಗ(ಕೆ.ಪಿ.ಎಸ್.ಸಿ)ದ ನೂತನ ಸದಸ್ಯರಾಗಿ ಇತ್ತೀಚೆಗೆ ಅಧಿಕಾರ ವಹಿಸಿಕೊಂಡಿರುವ ಕೆ.ಎಲ್.ಇ. ಸಂಸ್ಥೆಯ ಸವದತ್ತಿಯ ಎಸ್.ವಿ.ಬೆಳ್ಳುಬ್ಬಿ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಎಂ. ಬಿ. ಹೆಗ್ಗಣ್ಣವರ ಅವರನ್ನು ಅವರ ಆತ್ಮೀಯ ಬಳಗದ ಪರವಾಗಿ ಶನಿವಾರ ಅಭಿನಂದಿಸಲಾಯಿತು.
ಬೆಳಗಾವಿಗೆ ಆಗಮಿಸಿದ್ದ ಅವರನ್ನು ಇಲ್ಲಿನ ಶಿವಬಸವ ನಗರದಲ್ಲಿರುವ, ಹುಬ್ಬಳ್ಳಿಯ ಪಿ.ಸಿ.ಜಾಬಿನ್ ಮಹಾವಿದ್ಯಾಲಯದ ವಿಶ್ರಾಂತ ಪ್ರಾಚಾರ್ಯ ಡಾ. ವ್ಹಿ.ಬಿ.ಹಿರೇಮಠ ಅವರ ನಿವಾಸದಲ್ಲಿ ಹೆಗ್ಗಣ್ಣವರ ಅವರಿಗೆ ಶಾಲು ಹೊದಿಸಿ ಫಲ-ಪುಷ್ಪ ನೀಡಿ ಗೌರವಿಸಲಾಯಿತು.
ಲೋಕಸೇವಾ ಆಯೋಗದ ಕರ್ತವ್ಯವನ್ನು ಅತ್ಯಂತ ಪ್ರಾಮಾಣಿಕವಾಗಿ ನಿರ್ವಹಿಸಿ ಸಂಸ್ಥೆ ಮತ್ತು ಉತ್ತರ ಕರ್ನಾಟಕಕ್ಕೆ ಒಳ್ಳೆಯ ಹೆಸರು ತರುವಂತೆ ಕಾರ್ಯ ನಿರ್ವಹಿಸಬೇಕೆಂದು ಡಾ. ವ್ಹಿ. ಬಿ. ಹಿರೇಮಠ ಅವರು ಈ ಸಂದರ್ಭದಲ್ಲಿ ಕಿವಿಮಾತು ಹೇಳಿದರು.
ರಾಜ್ಯ ಸರಕಾರದ ವಿಶ್ರಾಂತ ಅಧೀಕ್ಷಕ ಅಭಿಯಂತರ ಸಿ. ಬಿ. ಹಿರೇಮಠ, ಲಿಂಗರಾಜ ಮಹಾವಿದ್ಯಾಲಯದ ಕನ್ನಡ ವಿಭಾಗದ ಪ್ರಾಧ್ಯಾಪಕ ರವಿ ಚಿಕ್ಕಮಠ, ನಿಪ್ಪಾಣಿ ಜಿ.ಆಯ್.ಬಾಗೇವಾಡಿ ಮಹಾವಿದ್ಯಾಲಯದ ವಾಣಿಜ್ಯ ವಿಭಾಗದ ಮುಖ್ಯಸ್ತ ಡಾ. ಬಿ.ಎಂ.ಹಿರೇಮಠ ಮುಂತಾದವರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ