
ಪ್ರಗತಿವಾಹಿನಿ ಸುದ್ದಿ: ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ವಿದ್ಯಾರ್ಹತೆ ಜತೆಗೆ ಜೀವನದಲ್ಲಿ ಯಶಸ್ಸು ಸಾಧಿಸಲು ಕಠಿಣ ಪರಿಶ್ರಮದ ಅವಶ್ಯಕತೆ ಇದ್ದು, ಈ ದಿಶೆಯಲ್ಲಿ ವಿದ್ಯಾರ್ಥಿಗಳು ಪ್ರಯತ್ನಿಸಬೇಕು ಎಂದು ಸಂಸದೆ ಪ್ರಿಯಂಕಾ ಜಾರಕಿಹೊಳಿ ಹೇಳಿದರು.
ಬೆಳಗಾವಿ ನಗರದ ಕುಮಾರ ಗಂಧರ್ವ ಸಭಾಭವನದಲ್ಲಿ ಭಾನುವಾರ ಕರ್ನಾಟಕ ರಾಜ್ಯ ಸರ್ಕಾರಿ ಸಂಘದ ವತಿಯಿಂದ ಬೆಳಗಾವಿ ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗಳ ರಾಜ್ಯ ಸರ್ಕಾರಿ ನೌಕರರ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಅವರು ಮಾತನಾಡಿದರು.
ಸ್ಪರ್ಧಾತ್ಮಕ ಜಗತ್ತಿನಲ್ಲಿ ಗುರಿ ಮುಟ್ಟಬೇಕಾದರೆ ಗುರುವಿನ ಮಾರ್ಗದರ್ಶನ ಅಗತ್ಯವಾಗಿದೆ. ಹೀಗಾಗಿ ವಿದ್ಯಾರ್ಥಿಗಳು ಗುರಿ ಇಟ್ಟುಕೊಂಡು ಛಲ ಬಿಡದೇ ತಮ್ಮ ಗುರಿಯನ್ನು ಮುಟ್ಟುವಲ್ಲಿ ಶತಾಯಗತಾಯ ಶ್ರಮಿಸಿ ಯಶಸ್ವಿಯಾಗಬೇಕು ಎಂದು ಹೇಳಿದರು.
ಬದುಕಿನ ಉದ್ದಕ್ಕೂ ನಾವು ಎಲ್ಲರಿಗೂ ಒಳ್ಳೆದನ್ನು ಬಯಸಿದಾಗ ಮಾತ್ರ, ನಾವು ಇಟ್ಟಕೊಂಡ ಗುರಿಯನ್ನು ಮುಟ್ಟಲು ಸಾಧ್ಯವಾಗುತ್ತದೆ. ಆದ್ದರಿಂದ ನಾವು ನಮ್ಮ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ಈ ನಿಟ್ಟಿನಲ್ಲಿ ಸಾಗಬೇಕಾಗಿದೆ ಎಂದು ಸಂಸದರು ತಮ್ಮ ಇಂಗಿತವನ್ನು ವ್ಯಕ್ತಪಡಿಸಿದರು.
ಕಳೆದ ಮೂವತ್ತು ವರ್ಷಗಳಿಂದ ತಂದೆಯವರಾದ ಸತೀಶ ಜಾರಕಿಹೊಳಿ ಅವರು ಜಿಲ್ಲೆ ಮತ್ತು ರಾಜ್ಯಾದ್ಯಂತ ಶಿಕ್ಷಣ, ಕ್ರೀಡೆ, ಸಾಹಿತ್ಯ ಹಾಗೂ ಸಾಮಾಜಿಕವಾಗಿ ಸಾಕಷ್ಟು ಪ್ರೇರಣೆ ನೀಡಿದ್ದಾರೆ. ಇದರಿಂದಾಗಿ ನಮ್ಮ ವಿದ್ಯಾರ್ಥಿಗಳು ಪುರಸ್ಕಾರ ಪಡೆದುಕೊಂಡಿರುವುದು ಹೆಮ್ಮೆ ವಿಷಯ.
ಬೆಳಗಾವಿ ಜಿಲ್ಲೆಯ ನಮ್ಮ ವಿದ್ಯಾರ್ಥಿಗಳು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ಮೂಲಕ ಈ ನೆಲದ ಹೆಸರನ್ನು ದೇಶದ “ಭೂ” ಪಟದಲ್ಲಿ ಗುರುತ್ತಿಸುವಂತೆ ಮಾಡಬೇಕು. ಅದಕ್ಕಾಗಿ ಸಹಾಯ-ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಮಹಾಸ್ವಾಮೀಜಿ ಮಾತನಾಡಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಸಿ.ಎಸ್. ಷಡಕ್ಷರಿ ಅವರು ಪ್ರಾಮಾಣಿಕವಾಗಿ ಸರ್ಕಾರಿ ನೌಕರರ ಹಿತ ಕಾಪಾಡುವ ಕೆಲಸ ಮಾಡುತ್ತಿದ್ದು, ಸರ್ಕಾರಿ ನೌಕರರ ಸಂಘವನ್ನು ಪ್ರಗತಿಯತ್ತ ಕೊಂಡ್ಯೊಯ್ಯುವ ಶಕ್ತಿ ಅವರಲ್ಲಿದೆ. ಕಾರಣ ಅವರ ನೇತೃತ್ವದಲ್ಲಿ ಈ ಸಂಘವು ಇನ್ನಷ್ಟು ಏಳಿಗೆ ಕಾಣಲೆಂದು ಶ್ರೀಗಳು ಹರಸಿದರು.
ಮಕ್ಕಳ ಭವಿಷ್ಯ ರೂಪಿಸುವಲ್ಲಿ ಪೋಷಕರ ಪಾತ್ರ ಅತೀ ಮುಖ್ಯವಾಗಿದೆ. ಆ ನಿಟ್ಟಿನಲ್ಲಿ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಕ್ರೀಡೆ, ಕಲೆ, ಸಾಹಿತ್ಯ, ಸಂಗೀತ ಮತ್ತಿತರ ಕ್ಷೇತ್ರಗಳಲ್ಲಿ ಪಾಲ್ಗೊಳ್ಳಲು ಪ್ರೇರೇಪಿಸಬೇಕು. ಮಕ್ಕಳು ಕಲಿಕೆಯಲ್ಲಿ ಯಾವ ಗುರಿಯತ್ತ ಸಾಗುತ್ತಾರೆ ಎಂಬುವುದನ್ನು ಪೋಷಕರು ಅರಿತುಕೊಂಡು ಅವರಿಗೆ ಪ್ರೋತ್ಸಾಹ ನೀಡಬೇಕು ಎಂದು ಶ್ರೀಗಳು ಹೇಳಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಕ್ಷರಿ, ಬೆಳಗಾವಿ ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಶಂಕರ ಎಸ್. ಗೋಕಾವಿ, ಬೆಳಗಾವಿ ಜಿಲ್ಲಾಧ್ಯಕ್ಷ ಬಸವರಾಜ ರಾಯವ್ವಗೋಳ, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ಹಾಗೂ ವಿಭಾಗೀಯ ಉಪಾಧ್ಯಕ್ಷ ಬಿ.ಎ. ಕುಂಬಾರ, ಪ್ರಧಾನ ಕಾರ್ಯದರ್ಶಿ, ಗಿರಿಗೌಡ ಹೆಚ್., ರಾಜ್ಯ ಖಜಾಂಚಿವಿ.ವಿ. ಶಿವರುದ್ರಯ್ಯ, ಜೆ.ಬಿ.ಭಾಗೋಜಿಕೊಪ್ಪ ಸೇರಿದಂತೆ ರಾಜ್ಯ ಪದಾಧಿಕಾರಿಗಳು, ಬೆಳಗಾವಿ ಜಿಲ್ಲೆ ಮತ್ತು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಎಲ್ಲಾ ಪದಾಧಿಕಾರಿಗಳು, ತಾಲ್ಲೂಕು ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಗೂ ನಾಮನಿರ್ದೇಶಿತ ಪದಾಧಿಕಾರಿಗಳು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.