*ಸಿಇಟಿ ಸಕ್ಷಮ ಕಾರ್ಯಕ್ರಮ ಮರು ಪ್ರಾರಂಭ: ಜಿಪಂ ಸಿಇಒ ರಾಹುಲ್ ಶಿಂಧೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸಿಇಟಿ ಸಕ್ಷಮ ಕಾರ್ಯಕ್ರಮ ವಿದ್ಯಾರ್ಥಿಗಳ ಬೇಡಿಕೆಯಂತೆ ಶನಿವಾರ ಜಿಲ್ಲೆಯಲ್ಲಿ ಮರು ಪ್ರಾರಂಭಿಸಲಾಯಿತು.
ಸನ್ 2024-25 ನೇ ಸಾಲಿನಲ್ಲಿ ಜಿಪಂ ಸಿಇಒ ರಾಹುಲ್ ಶಿಂಧೆ ರವರ ಕನಸಿನ ಕಾರ್ಯಕ್ರಮವನ್ನು ಜುಲೈ 2024 ರಂದು ಪ್ರಾರಂಭಿಸಲಾಯಿತು. ಸದರಿ ಕಾರ್ಯಕ್ರಮದಡಿಯಲ್ಲಿ ಜಿಲ್ಲೆಯ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ-05 ಪರೀಕ್ಷೆ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ-05 ಪರೀಕ್ಷೆಗಳನ್ನು ಏರ್ಪಡಿಸಲಾಗಿದ್ದು, ಇದರಿಂದ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ಬಹಳ ಅನುಕೂಲವಾಗಿದ್ದು ಆದ್ದರಿಂದ ಸದರಿ ಸಕ್ಷಮ ಯೋಜನೆಯನ್ನು 2025-26ನೇ ಸಾಲಿಗೆ ಮರು ಪ್ರಾರಂಭಿಸಿ ದಿನಾಂಕ 12.07.2025 ರಂದು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಆಯಾ ಕಾಲೇಜುಗಳ ಪ್ರಾಂಶುಪಾಲರ ಸಮ್ಮುಖದಲ್ಲಿ ಸಕ್ಷಮ್ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಯಿತು.
ಸದರಿ ಪರೀಕ್ಷೆಗೆ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಿಂದ 1882 ವಿದ್ಯಾರ್ಥಿಗಳು ಮತ್ತು ಬೆಳಗಾವಿ ಶೈಕ್ಷಣಿಕ ಜಿಲ್ಲೆಯಿಂದ 1383 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿರುತ್ತಾರೆ. ಸದರಿ ಪರೀಕ್ಷೆಯ ಮೌಲ್ಯಮಾಪನ ಕಾರ್ಯ ಪ್ರಗತಿಯಲ್ಲಿದ್ದು ಫಲಿತಾಂಶವನ್ನು ಕಾಲೇಜುವಾರು ಅತೀ ಶೀಘ್ರದಲ್ಲಿ ಪ್ರಕಟಿಸಲಾಗುವುದು ಎಂದು ಜಿಪಂ ಸಿಇಒ ರಾಹುಲ್ ಶಿಂಧೆ ರವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಮುಂದುವರೆದು, ಜಿಪಂ ಸಿಇಒ ರಾಹುಲ್ ಶಿಂಧೆ ರವರು ಜೆಇಇ ಮತ್ತು ನೀಟ್ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಸಿದ್ದಗೊಳಿಸಲು ಸಕ್ಷಮ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ನುರಿತ ಉಪನ್ಯಾಸಕರುಗಳಿಂದ ವಿಶೇಷ ತರಗತಿಗಳನ್ನು ನಡೆಸಲು ಬೆಳಗಾವಿ ಮತ್ತು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಉಪ ನಿರ್ದೇಶಕರುಗಳಿಗೆ ಸೂಕ್ತ ನಿರ್ದೇಶನ ನೀಡಿರುತ್ತಾರೆ.