
FIR ದಾಖಲು
ಪ್ರಗತಿವಾಹಿನಿ ಸುದ್ದಿ: ಬಸ್ ಗಾಗಿ ಕಾಯುತ್ತಿದ್ದ ಪ್ರಯಾಣಿಕರ ಮೇಲೆಯೇ ಬಿಎಂಟಿಸಿ ಬಸ್ ಹರಿದು, ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಪೀಣ್ಯ ಎರಡನೇ ಹಂತದಲ್ಲಿ ಈ ದುರಂತ ಸಂಭವಿಸಿದೆ. ಫುಟ್ ಪಾತ್ ಮೇಲೆ ನಿಂತಿದ್ದ ಐವರ ಮೇಲೆ ಬಿಎಂಟಿಸಿ ಬಸ್ ಹರಿದಿದೆ. ಗಂಭೀರವಾಗಿ ಗಾಯಗೊಂಡಿದ್ದ ಐವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಓರ್ವ ಗಾಯಾಳು ಮಹಿಳೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ನಾಲ್ವರಿಗೆ ಚಿಕಿತ್ಸೆ ಮುಂದುವರೆದಿದೆ.
ಪ್ರಯಾಣಿಕರ ಮೇಲೆ ಹರಿದ ಬಸ್ ಕ್ಯಾಂಟಿನ್ ಗೆ ನುಗ್ಗಿದೆ. ವಸ್ತುಗಳೆಲ್ಲಾ ಚಲ್ಲಾಪಿಲ್ಲಿಯಾಗಿವೆ. ಬಸ್ ಚಾಲಕನ ಬೇಜವಾಬ್ದಾರಿಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.
ಮೃತ ಮಹಿಳೆಯನ್ನು ಸುಮಾ (25) ಎಂದು ಗುರುತಿಸಲಾಗಿದೆ. ತರಿಕೆರೆ ಮೂಲದ ಸುಮಾ ಬ್ಯಾಂಕ್ ಉದ್ಯೋಗಿಯಾಗಿದ್ದು, ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದರು. ಇನ್ನು ಗಾಯಾಳು ಪ್ರಯಾಣಿಕರು ನೀಡಿದ ದೂರಿನ ಹಿನ್ನೆಲೆಯಲ್ಲಿ ಬಸ್ ಚಾಲಕನ ವಿರುದ್ಧ ಎಫ್ಐಆರ್ ದಾಖಲಾಗಿದೆ.