
ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ ವಲಸಿಗರ ಹಾವಳಿ ಮಿತಿ ಮೀರುತ್ತಿದ್ದು, ಕನ್ನಡಿಗರ ಬಗ್ಗೆ ಹಾಗೂ ಕನ್ನಡಿಗ ಕೊರಿಯರ್ ಬಾಯ್ ಗೆ ಬಾಯಿಗೆ ಬಂದಂತೆ ಮಾತನಡಿದ್ದ ಹಿಂದಿವಾಲಾನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿ ಮಿಥುನ್ ಸರ್ಕಾರ್ ಎಂದು ಗುರುತಿಸಲಾಗಿದೆ. ಪಶ್ಚಿಮ ಬಂಗಾಳ ಮೂಲದವನು. ಬೆಂಗಳೂರಿನ ಬೊಮ್ಮನಹಳ್ಳಿಯ ಬೇಗೂರಿನಲ್ಲಿ ವಾಸವಾಗಿದ್ದ. ಮಿಥುನ್ ಸರ್ಕಾರ್ ಆನ್ ಲೈನ್ ನಲ್ಲಿ ಟೀ ಶರ್ಟ್ ಬುಕ್ ಮಾಡಿದ್ದ. ಕೊರಿಯರ್ ಬಾಯ್ ರಂಜಿತ್ ಎಂಬ ಯುವಕ ವಿಳಾಸ ಕೇಳಲು ಕರೆ ಮಾಡಿದ್ದಕ್ಕೆ ಭಾಷೆ ವಿಚಾರವಾಗಿ ಕ್ಯಾತೆ ತೆಗೆದಿದ್ದಾನೆ.
ಕನ್ನಡಿಗ ರಂಜಿತ್ ಗೆ ಅವಾಚ್ಯವಾಗಿ ನಿಂದಿಸಿ ಕನ್ನಡ ಭಾಷೆ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿದ್ದಾನೆ. ಬೆಂಗಳೂರಿನಲ್ಲಿ ನಾವು ೭೦% ಇದ್ದೇವೆ. ನಾವು ಇಲ್ಲಿಂದ ಹೋದರೆ ಕನ್ನಡಿಗರ ಬಳಿ ಟೊಮೆಟೊ ತೆಗೆದುಕೊಳ್ಳಲೂ 10 ರೂಪಾಯಿ ಗತಿ ಇರಲ್ಲ ಅಂತ ನಾಲಿಗೆ ಹರಿಬಿಟ್ಟಿದ್ದಾನೆ.
ಹಿಂದಿವಾಲಾನ ದುರಹಂಕಾರದ ಆಡೀಯೋ ವೈರಲ್ ಆಗುತ್ತಿದ್ದಂತೆ ಬೊಮ್ಮನಹಳ್ಳಿ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿತ್ತು. ಇದೀಗ ಪೊಲೀಸರು ಮಿಥುನ್ ಸರ್ಕಾರ್ ನನ್ನು ಬಂಧಿಸಿದ್ದಾರೆ.