Belagavi NewsBelgaum NewsKannada NewsKarnataka NewsLatest

*ರಚನಾತ್ಮಕ ಕೆಲಸಗಳ ಮೂಲಕ ನಿರಂತರ ಕ್ರಿಯಾಶೀಲತೆಯನ್ನು ಉಳಿಸಿಕೊಳ್ಳಿ: ಚನ್ನರಾಜ ಹಟ್ಟಿಹೊಳಿ*

ಪಂತನಗರ ಕ್ಷೇಮಾಭಿವೃದ್ಧಿ ಸಂಘ ಉದ್ಘಾಟನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :  ಪಂತ ಬಾಳೇಕುಂದ್ರಿ ಗ್ರಾಮದ ಶ್ರೀ ಪಂತನಗರ ರಹವಾಸಿಗಳ ಕ್ಷೇಮಾಭಿವೃದ್ಧಿ ಸಂಘವನ್ನು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಭಾನುವಾರ ಉದ್ಘಾಟಿಸಿದರು. 

ಪಂತನಗರದ ನಿವಾಸಿಗಳು ಬಹಳಷ್ಟು ಶ್ರಮ ಜೀವಿಗಳು, ದೇಶಕ್ಕಾಗಿ ಸಾಕಷ್ಟು ತ್ಯಾಗ, ಕೊಡುಗೆ ನೀಡಿದ್ದಾರೆ. ಇಲ್ಲಿನ ಶೇ.70ಕ್ಕಿಂತ ಹೆಚ್ಚಿನ ಜನರು ನಿವೃತ್ತ ಸೈನಿಕರು, ಉಳಿದವರು ಕೂಡ ಶಿಕ್ಷಕರಾಗಿ, ಬೇರೆ ಬೇರೆ ರೀತಿಯ ಸರಕಾರಿ ಸೇವೆಯಲ್ಲಿದ್ದವರು. ಇಲ್ಲಿನ ಅಭಿವೃದ್ಧಿಗಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಎಲ್ಲ ರೀತಿಯ ಸಹಕಾರ ನೀಡುತ್ತಿದ್ದಾರೆ ಎಂದು ಚನ್ನರಾಜ ಹೇಳಿದರು. 

Home add -Advt

 ಸುಮಾರು 2.5ಕಿಮೀ ಸಿಸಿ ರಸ್ತೆ ನಿರ್ಮಾಣ ಮಾಡಲಾಗಿದೆ. ಇಲ್ಲಿ ಸಮುದಾಯ ಭವನ ನಿರ್ಮಾಣ ಮಾಡುವುದಕ್ಕಾಗಿ 50 ಲಕ್ಷ ರೂ. ಅನುದಾನ ಮಂಜೂರು ಮಾಡಿಸಲಾಗಿದೆ. ಮುಂದಿನ ದಿನಗಳಲ್ಲಿ ನಿಮ್ಮ ಅಗತ್ಯಕ್ಕೆ ತಕ್ಕಂತೆ ಅಭಿವೃದ್ಧಿ ಕೈಗೊಳ್ಳಲಾಗುವುದು ಎಂದರು. 

ಈ ಸಂಘ ನಿಮ್ಮಲ್ಲಿರುವ ಒಗ್ಗಟ್ಟಿನ ಪ್ರತೀಕ, ಪರಸ್ಪರರ ಮೇಲಿರುವ ಕಾಳಜಿ, ಗೌರವ, ಪ್ರೀತಿ, ವಿಶ್ವಾಸದ ಸಂಕೇತ ಎಂದು ನಾನು ಭಾವಿಸುತ್ತೇನೆ. ಇಲ್ಲಿನ ಹೆಚ್ಚಿನವರು ನಿವೃತ್ತಿ ಜೀವನ ನಡೆಸುತ್ತಿರುವವರು, ಹಾಗಾಗಿ ಪ್ರತಿಯೊಬ್ಬರಿಗೂ ಬೇರೆಯವರ ಸಹಾಯ, ಸಹಕಾರ ಅಗತ್ಯ.  ಈ ಸಂಘದ ಮೂಲಕ ಇಲ್ಲಿನ ಪ್ರತಿಯೊಬ್ಬರಲ್ಲಿ, ನಿಮ್ಮೊಂದಿಗೆ ನಾವಿದ್ದೇವೆ, ನಮ್ಮೊಂದಿಗೆ ನೀವಿದ್ದೀರಿ ಎನ್ನುವ ಸಂದೇಶ ಸಾರುವ ಜೊತೆಗೆ, ಎಲ್ಲರಲ್ಲಿ ಆತ್ಮ ವಿಶ್ವಾಸ ಮೂಡಿಸುವ, ಧೈರ್ಯ ತುಂಬುವ ಕೆಲಸ ಮಾಡಿದ್ದೀರಿ. ಎಲ್ಲರ ಸುರಕ್ಷತೆಯ, ಪರಸ್ಪರ ಸಾಮರಸ್ಯದ ಜವಾಬ್ದಾರಿಯನ್ನು ಪ್ರತಿಯೊಬ್ಬರೂ ಹೊತ್ತಿದ್ದೀರಿ.  ಒಟ್ಟಾಗಿ ಚಟುವಟಿಕೆಗಳನ್ನು ಆಯೋಜಿಸುವ ಮೂಲಕ, ರಚನಾತ್ಮಕ ಕೆಲಸಗಳ ಮೂಲಕ ನಿರಂತರ ಕ್ರಿಯಾಶೀಲತೆಯನ್ನು ಉಳಿಸಿಕೊಳ್ಳಬಹುದು ಎಂದು ಚನ್ನರಾಜ ಹೇಳಿದರು.

 ನಿಮ್ಮ ಮಕ್ಕಳಲ್ಲಿ ಸಂಸ್ಕಾರ ಬೆಳೆಸುವ, ಅವರಿಗೆ ಜೀವನ ವಿಧಾನ ಕಲಿಸುವ ಕೆಲಸವನ್ನು ಸಹ ಸಂಘದ ವತಿಯಿಂದ ಮಾಡಬೇಕು. ಮಕ್ಕಳಲ್ಲಿ ಜೀವನಕ್ಕೆ ಬೇಕಾದಂತಹ ಕೌಶಲ್ಯಗಳನ್ನು ಬೆಳೆಸುವಂತಹ ಕೆಲಸವನ್ನು ಸಹ ಇಲ್ಲಿ ಯೋಜಿಸಬಹುದು. ಕ್ಷಣದಿಂದ ಕ್ಷಣಕ್ಕೆ ಬೆಳೆಯುತ್ತಿರುವ, ಬದಲಾಗುತ್ತಿರುವ ಈ ಸ್ಫರ್ಧಾತ್ಮಕ ಜಗತ್ತಿನಲ್ಲಿ ನಿಮ್ಮ ಮಕ್ಕಳು ಈಜಿ ದಡ ಸೇರಬೇಕಾದರೆ ಅವರನ್ನು ಚಿಕ್ಕವರಿದ್ದಾಗಲೇ ಆ ಮಟ್ಟಿಗೆ ಸಜ್ಜುಗೊಳಿಸುವ ಕೆಲಸವನ್ನು ಸಹ ನೀವು ಯೋಚಿಸಬಹುದು. ಹಾಗೆಯೇ, ನಿವೃತ್ತರು ಸದಾ ಕ್ರಿಯಾಶೀಲರಾಗಿರುವ ದಿಸೆಯಲ್ಲಿ ಏನೆಲ್ಲ ಮಾಡಬಹುದೋ ಅದನ್ನು ಕೂಡ ಯೋಚಿಸಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಇಂತಹ ಸಂಘಗಳಿದ್ದಾಗ ನಿಮ್ಮ ಪ್ರದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ, ಎರಡು ಕೈಗಳಿಗಿಂತ ಹತ್ತು ಕೈಗಳು ಸೇರಿದಾಗ, ನೂರು ಕೈಗಳು ಸೇರಿದಾಗ ಅದರ ಪರಿಣಾಮವೇ ಬೇರೆಯಾಗುತ್ತದೆ.  ಈ ಸಂಘದ ರೂವಾರಿಗಳನ್ನು ನಾನು ಅಭಿನಂದಿಸುತ್ತೇನೆ, ಎಲ್ಲರೂ ಇದಕ್ಕೆ ಸಹಕಾರ ನೀಡುವ ಮೂಲಕ ವಯಕ್ತಿಕ ಬೆಳವಣಿಗೆಗೆ, ತನ್ಮೂಲಕ ಸಂಘದ, ನಿಮ್ಮ ಪಂತ ನಗರದ ಬೆಳವಣಿಗೆಗೆ ಕಾರಣೀಕರ್ತರಾಗುತ್ತೀರಿ. ಬೆಳಗಾವಿ ಗ್ರಾಮೀಣ ಕ್ಷೇತ್ರವನ್ನು ಬಹಳಷ್ಟು ಅಭಿವೃದ್ಧಿ ಮಾಡಬೇಕೆಂದು ಲಕ್ಷ್ಮೀ ಹೆಬ್ಬಾಳಕರ್ ಅವರು ಕಳೆದ 7-8 ವರ್ಷಗಳಿಂದಲೂ ಅವಿಶ್ರಾಂತವಾಗಿ ಶ್ರಮಿಸುತ್ತಿದ್ದಾರೆ.

7 ವರ್ಷದ ಹಿಂದೆ ಹೋಲಿಸಿದರೆ ಈಗ ಕ್ಷೇತ್ರದ ಚಿತ್ರಣ ಸಾಕಷ್ಟು ಬದಲಾವಣೆಯಾಗಿದೆ. ಮೂಲಭೂತ ಸೌಲಭ್ಯಗಳ ಅಭಿವೃದ್ಧಿಯ ಒಂದು ಹಂತ ಬಹುತೇಕ ಮುಗಿದಿದ್ದು, ಮುಂದಿನ ದಿನಗಳಲ್ಲಿ ಕ್ಷೇತ್ರಕ್ಕೆ ಹಲವಾರು ಅಭಿವೃದ್ಧಿ ಯೋಜನೆಗಳನ್ನು ತರುವ ಮತ್ತೊಂದು ಹಂತದ ಅಭಿವೃದ್ಧಿಯನ್ನು ಕೈಗೊಳ್ಳಲಿದ್ದಾರೆ. ಇದಕ್ಕೆ ನಿಮ್ಮೆಲ್ಲರ ಸಹಕಾರ ಅಗತ್ಯವಾಗಿದೆ, ಅವರು ನಿಮ್ಮೊಂದಿಗೆ ನಿಂತ ಹಾಗೆಯೇ ನೀವು ಕೂಡ ಸದಾ ಅವರೊಂದಿಗೆ, ನನ್ನ ಅಭಿವೃದ್ಧಿಯ ಕೆಲಸಗಳೊಂದಿಗೆ ನಿಲ್ಲುತ್ತೀರಿ ಎಂದು ಆಶಿಸುತ್ತೇನೆ ಎಂದು ಚನ್ನರಾಜ ಹಟ್ಟಿಹೊಳಿ ಹೇಳಿದರು.

ಘಾಳೇಶ್ವರ ಮಠದ ಶ್ರೀ ಚಿದಾನಂದ ಮಹಾಸ್ವಾಮಿಗಳು, ಸಂಘದ ಅಧ್ಯಕ್ಷ ರಾಮಪ್ಪ ಹಟ್ಟಿ,  ಉಪಾಧ್ಯಕ್ಷ ಶಂಕರಾನಂದ ಮದಿಹಳ್ಳಿ, ಸಂಘದ ಪದಾಧಿಕಾರಿಗಳು, ಮಾಜಿ ಸೈನಿಕರ ಕಲ್ಯಾಣ ಸಂಘದ ಸರ್ವ ಸದಸ್ಯರು, ಡಾ.ಎಸ್.ರಾಧಾಕೃಷ್ಣ ಗುರುಬಳಗ ಮತ್ತು ಪಂತ ನಗರದ ಸಮಸ್ತ ನಾಗರಿಕರು ಉಪಸ್ಥಿತರಿದ್ದರು.

Related Articles

Back to top button