Belagavi NewsBelgaum NewsKannada NewsKarnataka News

*ಮಂಗಾಯಿ ಜಾತ್ರೆಯಲ್ಲಿ ಪ್ರಾಣಿಬಲಿ ಮಾಡದಂತೆ ಮನವಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನಾಳೆಯಿಂದ 24 ಜುಲೈ ವರೆಗೆ ಬೆಳಗಾವಿ ನಗರದ ವಡಗಾಂವ್ ನಲ್ಲಿ ನಡೆಯಲಿರುವ ಶ್ರೀ ಮಂಗಾಯಿ ದೇವಿ ಜಾತ್ರೆಯಲ್ಲಿ, ದೇವಾಲಯದ ಮುಂಭಾಗ, ಕಾಂಪೌಂಡ್ ಒಳಗೆ ಮತ್ತು ಹೊರಗೆ, ಹಾಗೂ ದೇವಾಲಯದ ಸುತ್ತಮುತ್ತಲಿನ ಪರಿಸರ, ಹಾಗೂ ರಸ್ತೆಯ ಇಕ್ಕೆಲಗಳಲ್ಲಿ, ಹೊರವಲಯ ಹಾಗೂ ಸಾರ್ವಜನಿಕ ಧಾರ್ಮಿಕ ಸಮಾವೇಶದಲ್ಲಿ ಯಾವುದೇ ಪ್ರಾಣಿಗಳ ಬಲಿ ನಡೆಯದಂತೆ ಮನವಿ ಮಾಡಲಾಗಿದೆ.

ದೇವಾಲಯದ ಮೇಲೆ ಪ್ರಾಣಿಗಳ ತೂರಾಟ, ಪ್ರಾಣಿ ಅಂಗಾಗಗಳ ನೈವೇದ್ಯ ಸಲ್ಲಿಕೆ/ಪ್ರದರ್ಶನ ಇತ್ಯಾದಿ ಕಾನೂನು ಬಾಹಿರ ಕೃತ್ಯಗಳು ಜರುಗದಂತೆ 1959ರ ಕರ್ನಾಟಕ ಪ್ರಾಣಿಬಲಿಗಳ ಪ್ರತಿಬಂಧಕ ಅಧಿನಿಯಮ ಹಾಗೂ 1963 ಮತ್ತು 1975 ರ ನಿಯಮಗಳ ಪ್ರಕಾರ ಮತ್ತು ರಾಜ್ಯ ಹೈಕೋರ್ಟ್ ಆದೇಶದಂತೆ ಕಟ್ಟುನಿಟ್ಟಿನ/ ವ್ಯಾಪಕ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ಮತ್ತು ಪಶು ಪ್ರಾಣಿಬಲಿ ನಿರ್ಮೂಲನ ಜಾಗೃತಿ ಮಹಸಂಘ, ಬಸವ ಧರ್ಮ ಜ್ಞಾನ ಪೀಠದ ಅಧ್ಯಕ್ಷರಾದ ಶ್ರೀ ದಯಾನಂದ ಸ್ವಾಮೀಜಿಯವರು ಕರ್ನಾಟಕ ಸರ್ಕಾರ, ಬೆಳಗಾವಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದಾರೆ.

ಪ್ರಾಣಿಬಲಿಯು ಅನಾಗರೀಕವು ಅಂಧಶ್ರದ್ಧೆಯೂ, ಪರಿಸರ ಮಾಲಿನ್ಯಕಾರಕ ಆಗಿದ್ದು ಇದು ಕಾನೂನು ಮತ್ತು ಧರ್ಮ ವಿರೋಧಿ ಆಗಿದೆ, ಆದರಿಂದ ಭಕ್ತಾದಿಗಳು ಪ್ರಾಣಿಬಲಿ ತ್ಯಜಿಸಿ ಅಹಿಂಸಾತ್ಮಕವಾಗಿ ಸಾತ್ವಿಕ ಪೂಜೆ ಸಲ್ಲಿಸಬೇಕು ಎಂದು ಸ್ವಾಮೀಜಿ ಭಕ್ತರಲ್ಲಿ ವಿನಂತಿಸಿದ್ದಾರೆ. 

ದೇವಾಲಯಗಳು ವಧಾಲಯಗಳಾಗದೆ ದಿವ್ಯಾಲಯವಾಗಬೇಕು, ಜಾತ್ರಾ ಪರಿಸರಗಳ ಧಾರ್ಮಿಕ ಸ್ಥಾನಗಳು ಕಟುಕರ ಕೇರಿಗಳಾಗಬಾರದು, ಜೀವ ತೆಗೆಯುವ ಮೃತ್ಯು ಕೂಪವಾಗಬಾರದು, ಪ್ರಾಣಿಹಿಂಸೆ ಮತ್ತು ಮಧ್ಯ ಮಾದಕ ಪದಾರ್ಥಗಳಿಂದ ಮುಕ್ತವಾಗಿರಬೇಕು, ಅಹಿಂಸೆ ಕರುಣೆ, ಪ್ರೇಮ, ಜೀವದಯೆ, ಮಾನವೀಯತೆ, ಆಧ್ಯಾತ್ಮಿಕತೆ ಮುಂತಾದ ದಿವ್ಯ ಮೌಲ್ಯಗಳನ್ನು ಸಾರುವ ಸುಸಂಸ್ಕಾರ ನೀಡುವ ದಿವ್ಯ ಧಾಮಗಳಾಗಬೇಕು, ಸಧ್ಬಕ್ತಿ, ಸುಜ್ಞಾನ ಮತ್ತು ಸದಾಚಾರಗಳ ತ್ರಿವೇಣಿ ಸಂಗಮವಾಗಬೇಕು, ಈ ಹಿನ್ನೆಲೆಯಲ್ಲಿ ಭಕ್ತಾದಿಗಳು, ಸಮಾಜ, ದೇವಾಲಯದ ಆಡಳಿತ ಮಂಡಳಿ ಹಾಗೂ ಸರ್ಕಾರ ಮತ್ತು ಸುದ್ದಿ ಮಾಧ್ಯಮಗಳು ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿರುವ ಸ್ವಾಮೀಜಿಯವರು ಈ ಪ್ರಾಣಿಬಲಿ ತಡೆ ಕುರಿತು ಅಹಿಂಸಾ ಪ್ರಾಣಿದಯಾ ಅಧ್ಯಾತ್ಮ  ಸಂದೇಶಯಾತ್ರೆಯನ್ನು ಜಾತ್ರಾ ಪರಿಸರದಲ್ಲಿ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

Home add -Advt

ಈ ಕುರಿತು ಸರ್ಕಾರ, ಬೆಳಗಾವಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗೆ ಲಿಖಿತ ಮನವಿಯನ್ನು ಸಲ್ಲಿಸಲಾಗಿದೆ.

Related Articles

Back to top button