
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಸ್ವಾತಂತ್ರೋತ್ಸವ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಆರ್‌ಎಸ್‌ಎಸ್ ಅನ್ನು ಹೊಗಳಿದ್ದರು. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಹರಿಪ್ರಸಾದ್, ದೇಶದಲ್ಲಿ ಶಾಂತಿ ಕದಡಲು ಆರ್‌ಎಸ್‌ಎಸ್ ನವರು ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ ನಾನು ಆರ್‌ಎಸ್‌ಎಸ್ ಅನ್ನು ತಾಲಿಬಾನ್‌ಗೆ ಹೋಲಿಸುತ್ತೇನೆ ಎಂದು ಬಿ.ಕೆ ಹರಿಪ್ರಸಾದ್ ವಿವಾದಕ್ಕೀಡಾಗಿದ್ದಾರೆ.
ಭಾರತೀಯ ತಾಲಿಬಾನ್‌ಗಳಾಗಿರುವ ಆರ್‌ಎಸ್‌ಎಸ್ ನವರನ್ನು ಪ್ರಧಾನಿಯವರು ಕೆಂಪು ಕೋಟೆಯಿಂದ ಶ್ಲಾಘಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಆರ್ ಎಸ್‌ಎಸ್ ಅನ್ನು ಇಡೀ ದೇಶದಲ್ಲಿ ದೊಡ್ಡ ಸಂಘಟನೆ ಎಂದು ಬಿಂಬಿಸಿಕೊಳ್ಳುತ್ತಾರೆ. ಆದರೆ ಅದು ನೋಂದಣಿ ಆಗಿರುವ ಸಂಘಟನೆ ಅಲ್ಲ. ಅವರಿಗೆ ಹಣ ಎಲ್ಲಿಂದ ಬರುತ್ತೆ.?. ಕಳೆದ 52 ವರ್ಷಗಳಿಂದ ಆರ್ ಎಸ್ಎಸ್ ಕಚೇರಿ ಮೇಲೆ ತ್ರಿವರ್ಣಧ್ವಜ ಹಾರಿಸಿಲ್ಲ ಏಕೆ ಎಂದು ಪ್ರಶ್ನಿಸಿದರು.
ಮೊಹಮ್ಮದ್ ಅಲಿ ಜಿನ್ನಾ ಕಾಂಗ್ರೆಸ್ ಮತ್ತು ಆಗಿನ ವೈಸ್‌ರಾಯ್ ಲಾರ್ಡ್ ಮೌಂಟ್‌ಬ್ಯಾಟನ್ ಅವರು ದೇಶ ವಿಭಜನೆಗೆ ಕಾರಣ ಎಂದು ಎನ್ ಸಿಇಆರ್‌ಟಿ ಪಠ್ಯದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಆರ್ ಎಸ್‌ಎಸ್ ಹಾಗೂ ಬಿಜೆಪಿಯವರು ಇತಿಹಾಸವನ್ನು ತಿರುಚುವುದರಲ್ಲಿ ಪ್ರವೀಣರು ಎಂದು ಕಿಡಿಕಾರಿದ್ದಾರೆ.
ದೇಶಕ್ಕಾಗಿ ಪ್ರಾಣ ತೆತ್ತವರ ಹೆಸರನ್ನು ಹೇಳುವುದನ್ನು ಬಿಟ್ಟು ಓಲೈಕೆಗಾಗಿ ಮೋದಿಯವರು ಆರ್ ಎಸ್‌ಎಸ್ ಅನ್ನು ಕೆಂಪುಕೋಟೆಯಲ್ಲಿ ನಿಂತು ಹೊಗಳಿದ್ದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದರು.
ಒಟ್ಟಿನಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ತಾಲಿಬಾನ್ ಗೆ ಹೋಲಿಕೆ ಮಾಡುವ ಮೂಲಕ ಬಿ.ಕೆ ಹರಿಪ್ರಸಾದ್ ವಿವಾದಕ್ಕೀಡಾಗಿದ್ದಾರೆ.