
ಪ್ರಗತಿವಾಹಿನಿ ಸುದ್ದಿ: ಉಪರಾಷ್ಟ್ರಪತಿ ಚುನಾವಣೆಗೆ ಇಂಡಿಯಾ ಒಕ್ಕೊಟದ ಅಭ್ಯರ್ಥಿ ಬಿ ಸುದರ್ಶನ್ ರೆಡ್ಡಿ ಅವರು ಇಂದು ತಮ್ಮ ನಾಮಪತ್ರವನ್ನು ಸಲ್ಲಿಕೆ ಮಾಡಿದ್ದಾರೆ.
ಇತ್ತೀಚೆಗೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಉಪರಾಷ್ಟ್ರಪತಿ ಚುನಾವಣೆಗೆ ಅಭ್ಯರ್ಥಿಯಾಗಿ ಬಿ ಸುದರ್ಶನ್ ರೆಡ್ಡಿ ಅವರ ಹೆಸರನ್ನು ಘೋಷಿಸಿದ್ದರು. ಇಂದು ಉಪರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನ ಆಗಿದ್ದರಿಂದ ಕೊನೆಯ ಘಳಿಗೆಯಲ್ಲಿ ಅವರು ಕಾಂಗ್ರೆಸ್‌ನ ಹಿರಿಯ ನಾಯಕರೊಂದಿಗೆ ತೆರಳಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ನಾಮಪತ್ರ ಸಲ್ಲಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸುದರ್ಶನ್ ರೆಡ್ಡಿ ಸಂವಿಧಾನದಲ್ಲಿ ಪ್ರತಿಪಾದಿಸಲಾದ ಮೌಲ್ಯಗಳಿಗೆ ಆಳವಾದ ನಮ್ರತೆ ಮತ್ತು ಅಚಲ ಬದ್ಧತೆಯಿಂದ ನಾಮಪತ್ರ ಸಲ್ಲಿಸಿದ್ದೇನೆ. ನನ್ನ ಜೀವನವು ಪ್ರಜಾಪ್ರಭುತ್ವ ಸಂಪ್ರದಾಯಗಳಲ್ಲಿ ಬೇರೂರಿದೆ. ಭಾರತದ ನಿಜವಾದ ಶಕ್ತಿ ಪ್ರತಿಯೊಬ್ಬ ವ್ಯಕ್ತಿಯ ಘನತೆಯಲ್ಲಿದೆ ಎಂದು ಅವರು ಹೇಳಿದರು.
ಬಿ ಸುದರ್ಶನ್ ರೆಡ್ಡಿ ಅವರ ನಾಮಪತ್ರ ಸಲ್ಲಿಕೆಯ ಸಮಯದಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವು ವಿರೋಧ ಪಕ್ಷದ ನಾಯಕರು ಅವರೊಂದಿಗೆ ಹಾಜರಿದ್ದರು.