Pragativahini Special

*ಮೌಲ್ಯಾಧಾರಿತ ರಾಜಕಾರಣ ದ ಹರಿಕಾರ ಮಾಜಿ ಸಿಎಂ ರಾಮಕೃಷ್ಣ ಹೆಗಡೆ ಜನ್ಮದಿನ*

ಲೇಖನ: ರವೀಂದ್ರ ಹೆಗಡೆ

ಆಗಸ್ಟ್ 29, ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಕೇಂದ್ರದ ಮಾಜಿ ಸಚಿವ, ಯೋಜನಾ ಆಯೋಗದ ಮಾಜಿ ಉಪಾಧ್ಯಕ್ಷ ಹಾಗೂ ಕರ್ನಾಟಕದಲ್ಲಿ “ಮೌಲ್ಯಾಧಾರಿತ ರಾಜಕಾರಣ” ದ ಹರಿಕಾರ ಎಂದೇ ಪರಿಗಣಿಸಲ್ಪಟ್ಟ ನಮ್ಮ ರಾಜ್ಯ ಕಂಡ ಕೆಲವೇ ಕೆಲವು ಮುತ್ಸದ್ಧಿ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದ ಶ್ರೀ ರಾಮಕೃಷ್ಣ ಹೆಗಡೆಯವರ ಜನ್ಮದಿನ.

ರಾಮಕೃಷ್ಣ ಮಹಾಬಲೇಶ್ವರ ಹೆಗಡೆಯವರು 1926 ರ ಆಗಸ್ಟ್ 29 ರಂದು ಅಂದಿನ ಮುಂಬೈ ಪ್ರಾಂತ್ಯದ ಭಾಗವಾಗಿದ್ದ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ದೊಡ್ಮನೆ ಗ್ರಾಮದ ಹವ್ಯಕ ಬ್ರಾಹ್ಮಣ ಸಮುದಾಯದ ಮಹಾಬಲೇಶ್ವರ ಹೆಗಡೆ ಹಾಗೂ ಸರಸ್ವತಿ ಹೆಗಡೆ ದಂಪತಿಗಳಿಗೆ ಜನಿಸಿದರು.

ರಾಮಕೃಷ್ಣ ಹೆಗಡೆಯವರು ತಮ್ಮ ಆರಂಭಿಕ ಶಿಕ್ಷಣವನ್ನು ಪೂರೈಸಿದ ನಂತರ ಕಾಶಿಯ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದಲ್ಲಿ ಉನ್ನತ ವ್ಯಾಸಂಗವನ್ನು ಪಡೆದು ತರುವಾಯ ಅಲಹಾಬಾದ್ ವಿಶ್ವವಿದ್ಯಾನಿಲಯದಿಂದ ಕಾನೂನು ಪದವಿಯನ್ನು ಗಳಿಸಿದರು. ನಂತರ ಹೆಗಡೆಯವರು ತಮ್ಮ ವಕೀಲಿ ವೃತ್ತಿಯನ್ನು ಆರಂಭಿಸಿದರು.

Home add -Advt

ಈ ನಡುವೆ ತಮ್ಮ ವಿದ್ಯಾರ್ಥಿ ದೆಸೆಯಲ್ಲಿಯೇ ಹೆಗಡೆಯವರು 1942 ರ “ಕ್ವಿಟ್ ಇಂಡಿಯಾ” ಚಳವಳಿಯಲ್ಲಿ ಪಾಲ್ಗೊಳ್ಳುವುದರೊಂದಿಗೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದರು.

ಸ್ವಾತಂತ್ರ್ಯಾನಂತರ 1954 ರಿಂದ 1957 ರ ಅವಧಿಗೆ ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಹೆಗಡೆಯವರು 1958 ರಲ್ಲಿ ಮೈಸೂರು ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿಯಾಗಿ ನೇಮಕಗೊಂಡು 1962 ರ ವರೆಗೆ ಆ ಹುದ್ದೆಯಲ್ಲಿದ್ದರು.

1957 ರಲ್ಲಿ ಅಂದಿನ ನಮ್ಮ ಮೈಸೂರು ರಾಜ್ಯದ ವಿಧಾನ ಸಭೆಗೆ ಮೊಟ್ಟಮೊದಲ ಬಾರಿಗೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಕ್ಷೇತ್ರದಿಂದ ಆಯ್ಕೆಗೊಂಡ ಹೆಗಡೆಯವರು, ಆರಂಭದಲ್ಲಿ ಮುಖ್ಯಮಂತ್ರಿ ನಿಜಲಿಂಗಪ್ಪನವರ ಸಚಿವ ಸಂಪುಟದಲ್ಲಿ ಉಪ ಸಚಿವರಾಗಿ ನೇಮಕಗೊಂಡು ತರುವಾಯ ಸಂಪುಟ ದರ್ಜೆ ಸಚಿವ ಸ್ಥಾನಕ್ಕೆ ಪದೋನ್ನತಿ ಹೊಂದಿದ್ದರು. ಹೀಗೆ ಹೆಗಡೆಯವರು ರಾಜ್ಯ ಸರ್ಕಾರದಲ್ಲಿ 1958 ರಿಂದ 1971 ರ ಅವಧಿಗೆ ಮುಖ್ಯಮಂತ್ರಿಗಳಾಗಿದ್ದ ನಿಜಲಿಂಗಪ್ಪ ಹಾಗೂ ವೀರೇಂದ್ರ ಪಾಟೀಲ್ ರವರ ಸಚಿವ ಸಂಪುಟದಲ್ಲಿ ಯುವಜನ ಕಲ್ಯಾಣ ಮತ್ತು ಕ್ರೀಡೆ, ಸಹಕಾರ, ಕೈಗಾರಿಕೆ, ಯೋಜನೆ, ಪಂಚಾಯತ್ ರಾಜ್, ವಾರ್ತಾ ಮತ್ತು ಪ್ರಚಾರ, ಅಬಕಾರಿ ಹಾಗೂ ಹಣಕಾಸು ಖಾತೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದರು.

ಏತನ್ಮಧ್ಯೆ 1969 ರ ರಾಷ್ಟ್ರಪತಿ ಚುನಾವಣೆಗಳ ನಂತರ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು ವಿಭಜನೆಗೊಂಡ ಸಂದರ್ಭದಲ್ಲಿ ಹೆಗಡೆಯವರು ತಮ್ಮ ರಾಜಕೀಯ ಮಾಗದರ್ಶಕರಾದ ನಿಜಲಿಂಗಪ್ಪನವರನ್ನು ಹಿಂಬಾಲಿಸಿ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರ ವಿರೋಧಿ ಬಣವಾದ ಸಂಸ್ಥಾ ಕಾಂಗ್ರೆಸ್ ನ್ನು ಸೇರಿದ್ದರು.

ನಂತರ ಮುಖ್ಯಮಂತ್ರಿ ದೇವರಾಜ ಅರಸ್ ರವರ ಅಧಿಕಾರಾವಧಿಯಲ್ಲಿ ಹೆಗಡೆಯವರು 1974 ರ ವರೆಗೆ ಕರ್ನಾಟಕ ವಿಧಾನ ಪರಿಷತ್ತಿನಲ್ಲಿ ಪ್ರತಿಪಕ್ಷದ ನಾಯಕರಾಗಿ ಕಾರ್ಯನಿರ್ವಹಿಸಿದರು. ಪ್ರಧಾನಿ ಇಂದಿರಾ ಗಾಂಧಿಯವರು 1975 ರಲ್ಲಿ ದೇಶದಲ್ಲಿ ಆಂತರಿಕ ತುರ್ತುಪರಿಸ್ಥಿತಿಯನ್ನು ಹೇರಿದಾಗ ಹೆಗಡೆಯವರು ಸಹ ಇತರ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರೊಂದಿಗೆ ಬಂಧನಕ್ಕೊಳಪಟ್ಟು ಸೆರೆಮನೆವಾಸ ಅನುಭವಿಸಿದರು.

1977 ರಲ್ಲಿ ಆಂತರಿಕ ತುರ್ತುಪರಿಸ್ಥಿತಿಯ ತೆರವಿನ ನಂತರ ಅಸ್ತಿತ್ವಕ್ಕೆ ಬಂದ ಜನತಾ ಪಕ್ಷದ ಕರ್ನಾಟಕ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಹೆಗಡೆಯವರು ನೇಮಕಗೊಂಡರು. ನಂತರ ಅವರು 1978 ರಿಂದ 1983 ರ ಅವಧಿಗೆ ರಾಜ್ಯಸಭಾ ಸದಸ್ಯರಾಗಿ ಕಾರ್ಯನಿರ್ವಹಿಸಿದರು.

1983 ರ ಕರ್ನಾಟಕ ವಿಧಾನಸಭಾ ಚುನಾವಣೆಗಳಲ್ಲಿ ಜನತಾ ಪಕ್ಷ ಹಾಗೂ ಕರ್ನಾಟಕ ಕ್ರಾಂತಿ ರಂಗದ ಮೈತ್ರಿಕೂಟವು ಅತೀ ದೊಡ್ಡ ಬಣವಾಗಿ ಹೊರಹೊಮ್ಮಿ, ಪ್ರಬಲ ಕೋಮುಗಳಾದ ಒಕ್ಕಲಿಗ, ವೀರಶೈವ ಹಾಗೂ ಹಿಂದುಳಿದ ವರ್ಗದ ಬಣಗಳ ನಡುವೆ ಮುಖ್ಯಮಂತ್ರಿ ಹುದ್ದೆಗೆ ತೀವ್ರ ಪೈಪೋಟಿ ಏರ್ಪಟ್ಟಾಗ, ಜನತಾ ಪಕ್ಷದ ವರಿಷ್ಠರು ಸಂಧಾನ ಅಭ್ಯರ್ಥಿಯಾಗಿ ರಾಮಕೃಷ್ಣ ಹೆಗಡೆಯವರನ್ನು ಆಯ್ಕೆ ಮಾಡಿದುದರಿಂದ ಅವರು ಅನಿರೀಕ್ಷಿತವಾಗಿ ಕರ್ನಾಟಕದ ಪ್ರಪ್ರಥಮ ಕಾಂಗ್ರೆಸ್ಸೇತರ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಜನತಾ ಪಕ್ಷಕ್ಕೆ ಸಂಪೂರ್ಣ ಬಹುಮತವಿಲ್ಲದಿದ್ದ ಕಾರಣ ಬಿ ಜೆ ಪಿ ಮತ್ತು ಪಕ್ಷೇತರರ ಬೆಂಬಲದಿಂದ ಹೆಗಡೆಯವರು ಸರ್ಕಾರ ರಚನೆ ಮಾಡುವ ಅನಿವಾರ್ಯ ಪರಿಸ್ಥಿತಿಯು ಆಗ ನಿರ್ಮಾಣವಾಗಿತ್ತು.

1983 ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಹೆಗಡೆಯವರು ಸ್ಪರ್ಧಿಸಿರದಿದ್ದ ಕಾರಣ ಮುಖ್ಯಮಂತ್ರಿಯಾಗಿ ಆಯ್ಕೆಯಾದ ನಂತರ ಪಿ ಜಿ ಆರ್ ಸಿಂಧಿಯರವರು ತೆರವುಗೊಳಿಸಿದ ಕನಕಪುರ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಹೆಗಡೆಯವರು ಸ್ಪರ್ಧಿಸಿ, ಜಯಗಳಿಸಿ ವಿಧಾನಸಭೆಯನ್ನು ಪ್ರವೇಶಿಸಿದರು.

1984 ರ ಅಕ್ಟೋಬರ್ ಅಂತ್ಯಕ್ಕೆ ಅಂದಿನ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರ ದಾರುಣ ಹತ್ಯೆಯ ನಂತರ ಡಿಸೆಂಬರ್ ನಲ್ಲಿ ನಡೆದ ಲೋಕಸಭಾ ಚುನಾವಣೆಗಳಲ್ಲಿ ಕರ್ನಾಟಕದಲ್ಲಿ ಅಧಿಕಾರದಲ್ಲಿದ್ದ ಜನತಾ ಪಕ್ಷವು ನಿರೀಕ್ಷಿತ ಯಶಸ್ಸನ್ನು ಗಳಿಸದೇ ಕೇವಲ 4 ಕ್ಷೇತ್ರಗಳಲ್ಲಿ ಮಾತ್ರ ಗೆಲುವನ್ನು ಪಡೆದಿದ್ದರಿಂದ ಪಕ್ಷದ ಈ ಕಳಪೆ ಸಾಧನೆಗೆ ನೈತಿಕ ಹೊಣೆಹೊತ್ತ ಮುಖ್ಯಮಂತ್ರಿ ಹೆಗಡೆಯವರು ತಮ್ಮ ಸರ್ಕಾರದ ರಾಜೀನಾಮೆ ಸಲ್ಲಿಸುವುದರೊಂದಿಗೆ ವಿಧಾನಸಭೆಯ ವಿಸರ್ಜನೆಗೆ ಶಿಫಾರಸ್ಸು ಮಾಡಿದರು.

ನಂತರ 1985 ರ ಮಾರ್ಚ್ ನಲ್ಲಿ ಕರ್ನಾಟಕ ವಿಧಾನಸಭೆಗೆ ಜರುಗಿದ ಮಧ್ಯoತರ ಚುನಾವಣೆಗಳಲ್ಲಿ ಜನತಾ ಪಕ್ಷವು ಸರಳ ಬಹುಮತ ಗಳಿಸಿ, ತನ್ನ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಮರಳಿದ ಕಾರಣ ಬೆಂಗಳೂರಿನ ಬಸವನಗುಡಿ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಹೆಗಡೆಯವರು ಎರಡನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರದ ಗದ್ದುಗೆಗೆ ಏರಿದರು. 1985 ರ ಹೆಗಡೆಯವರ ಸಚಿವ ಸಂಪುಟದಲ್ಲಿ ಸಿದ್ದರಾಮಯ್ಯನವರು ಮೊಟ್ಟ ಮೊದಲ ಬಾರಿಗೆ ಪಶುಸಂಗೋಪನಾ ಖಾತೆಯ ರಾಜ್ಯ ಸಚಿವರಾಗಿ ನೇಮಕಗೊಂಡಿದ್ದರು.

ಹೆಗಡೆಯವರ ಅಧಿಕಾರಾವಧಿಯಲ್ಲಿ ಕರ್ನಾಟಕದಲ್ಲಿ ಮೊಟ್ಟಮೊದಲ ಬಾರಿಗೆ ಅಧಿಕಾರ ವಿಕೇಂದ್ರೀಕರಣ ಪ್ರಕ್ರಿಯೆಗೆ ಚಾಲನೆ ದೊರೆತು, “ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆ” ಯನ್ನು ಜಾರಿಗೆ ತರುವ ಮೂಲಕ “ಮಂಡಲ ಪಂಚಾಯತ್”, “ತಾಲ್ಲೂಕ್ ಪಂಚಾಯತ್” ಹಾಗೂ “ಜಿಲ್ಲಾ ಪರಿಷತ್” ಎಂಬ ಮೂರು ಹಂತದ ಪಂಚಾಯತ್ ರಾಜ್ ಸಂಸ್ಥೆಗಳನ್ನು ಅಸ್ತಿತ್ವಕ್ಕೆ ತಂದು, ಜನಪ್ರತಿನಿಧಿಗಳೇ ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರ ನಿರ್ವಹಿಸುವ ವ್ಯವಸ್ಥೆಗೆ ನಾಂದಿ ಹಾಡುವ ಮೂಲಕ ಪಂಚಾಯತ್ ರಾಜ್ ಸಂಸ್ಥೆಗಳನ್ನು ಹುಟ್ಟುಹಾಕಿದ ಭಾರತದ ಕೆಲವೇ ಕೆಲವು ರಾಜ್ಯಗಳಲ್ಲಿ ಕರ್ನಾಟಕವೂ ಸಹ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಹೆಗಡೆಯವರ ಸರ್ಕಾರದಲ್ಲಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆಯ ಸಚಿವರಾಗಿದ್ದ ಅಬ್ದುಲ್ ನಜೀರ್ ಸಾಬ್ ರವರು “ಪಂಚಾಯತ್ ರಾಜ್ ಕಾಯ್ದೆ” ಯ ಯಶಸ್ವಿ ಅನುಷ್ಠಾನದಲ್ಲಿ ಅತ್ಯಂತ ಮಹತ್ವದ ಪಾತ್ರವನ್ನು ನಿರ್ವಹಿಸಿದ್ದರು ಎಂಬುದನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು.

ಕರ್ನಾಟಕವು ಹೆಗಡೆಯವರ ಅಧಿಕಾರಾವಧಿಯಲ್ಲಿ ಕಂಡ ಮತ್ತೊಂದು ಮಹತ್ವದ ಬೆಳವಣಿಗೆಯೆಂದರೆ ಸರ್ಕಾರದ ಆಡಳಿತದಲ್ಲಿ ಪಾರದರ್ಶಕತೆಯನ್ನು ತರುವ ಉದ್ದೇಶದಿಂದ ಮುಖ್ಯಮಂತ್ರಿಯವರನ್ನೂ ಒಳಗೊಂಡಂತೆ ಸಾರ್ವಜನಿಕ ಸೇವೆಯ ಪರಿಧಿಯಲ್ಲಿ ಬರುವ ಎಲ್ಲಾ ವ್ಯಕ್ತಿಗಳ ವಿರುದ್ಧ ಬರುವ ಯಾವುದೇ ಭ್ರಷ್ಟಾಚಾರದ ಆರೋಪಗಳ ವಿಚಾರಣೆಗೆ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಅನ್ವಯ “ಕರ್ನಾಟಕ ಲೋಕಾಯುಕ್ತ” ಸಂಸ್ಥೆಯನ್ನು ಆಸ್ತಿತ್ವಕ್ಕೆ ತರುವ ಮೂಲಕ ಕರ್ನಾಟಕದಲ್ಲಿ ಒಂದು ರಾಜಕೀಯ ಕ್ರಾಂತಿಯ ಕಹಳೆಯನ್ನು ಮೊಳಗಿಸಿ, ಭ್ರಷ್ಟಾಚಾರ ನಿಯಂತ್ರಣಕ್ಕೆ ಒಂದು ಸಾಂಸ್ಥಿಕ ವ್ಯವಸ್ಥೆಯನ್ನು ಜಾರಿಗೆ ತಂದ ಕೆಲವೇ ಕೆಲವು ರಾಜ್ಯಗಳಲ್ಲಿ ಕರ್ನಾಟಕವು ಮುಂಚೂಣಿಯಲ್ಲಿತ್ತು ಎಂಬುದು ಅತ್ಯಂತ ಗಮನಾರ್ಹವಾದ ಸಂಗತಿ. 1986 ರಲ್ಲಿ ಭಾರತದ ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಎ ಡಿ ಕೋಶಲ್ ರವರು ರಾಜ್ಯದ ಪ್ರಪ್ರಥಮ ಲೋಕಾಯುಕ್ತರಾಗಿ ನೇಮಕಗೊಳ್ಳುವುದರೊಂದಿಗೆ ಲೋಕಾಯುಕ್ತ ಸಂಸ್ಥೆಯು ಕರ್ನಾಟಕದಲ್ಲಿ ವಿಧ್ಯುಕ್ತವಾಗಿ ಅಸ್ತಿತ್ವಕ್ಕೆ ಬಂದಿತು.

ಕರ್ನಾಟಕದಲ್ಲಿ ಆಡಳಿತ ಯಂತ್ರದ ಎಲ್ಲಾ ಹಂತಗಳಲ್ಲೂ ಕನ್ನಡ ಭಾಷೆಗೆ ಪ್ರಾಧಾನ್ಯತೆ ನೀಡುವ ಉದ್ದೇಶದಿಂದ ಹೆಗಡೆಯವರು ಸರ್ಕಾರದ ಆದೇಶದ ಪರಿಣಾಮಕಾರಿ ಅನುಷ್ಠಾನದ ಮೇಲ್ವಿಚಾರಣೆಗೆ “ಕನ್ನಡ ಕಾವಲು ಸಮಿತಿ” ಯನ್ನು ಅಸ್ತಿತ್ವಕ್ಕೆ ತರುವ ಮೂಲಕ ರಾಜ್ಯದಲ್ಲಿ ಕನ್ನಡ ಭಾಷೆಗೆ ಅಗ್ರಸ್ಥಾನ ನೀಡುವಲ್ಲಿ ಶ್ರಮಿಸಿಸಿದರು. 1983 ರ ಜೂನ್ ನಲ್ಲಿ ಇಂದಿನ ಕರ್ನಾಟಕದ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯನವರು “ಕನ್ನಡ ಕಾವಲು ಸಮಿತಿ”ಯ ಮೊಟ್ಟ ಮೊದಲ ಅಧ್ಯಕ್ಷರಾಗಿ ನೇಮಕಗೊಂಡು ಸರಿಸುಮಾರು ಒಂದೂವರೆ ವರ್ಷದ ಅವಧಿಗೆ ಆ ಹುದ್ದೆಯಲ್ಲಿದ್ದರು. ಕಾಲಾನಂತರದಲ್ಲಿ ಸಮಿತಿಯ ಹೆಸರು “ಕನ್ನಡ ಕಾವಲು ಮತ್ತು ಗಡಿ ಸಲಹಾ ಸಮಿತಿ” (1985), “ಕನ್ನಡ ಅಭಿವೃದ್ಧಿ ಮಂಡಳಿ” (1990) ಎಂಬುದಾಗಿ ರೂಪಾoತರಗೊಂಡು ಅಂತಿಮವಾಗಿ 1992 ರಲ್ಲಿ “ಕನ್ನಡ ಅಭಿವೃದ್ಧಿ ಪ್ರಾಧಿಕಾರ” ಎಂದು ಮರುನಾಮಕರಣಗೊಂಡಿತು.

ಮುಖ್ಯಮಂತ್ರಿಯಾಗಿ ಹೆಗಡೆಯವರು ಅತ್ಯಂತ ಜನಪ್ರಿಯತೆಯನ್ನು ಗಳಿಸಿದ್ದರು ಮತ್ತು ಒಬ್ಬ ಸಮರ್ಥ ಆಡಳಿತಗಾರ ಎಂದೂ ಸಹ ಗುರುತಿಸಲ್ಪಟ್ಟಿದ್ದರು. ಆದರೆ ಹೆಗಡೆಯವರ ವಿರುದ್ಧ ಕೆಲವು ಭ್ರಷ್ಟಾಚಾರದ ಆರೋಪಗಳು ಸಹ ಕೇಳಿ ಬಂದಿದ್ದವು. 1986 ರ ಫೆಬ್ರವರಿಯಲ್ಲಿ ಕರ್ನಾಟಕ ಉಚ್ಛ ನ್ಯಾಯಾಲಯವು ಹೆಗಡೆಯವರ ಸರ್ಕಾರವು ನೀಡಿದ ಸಾರಾಯಿ ಬಾಟ್ಲಿoಗ್ ಗುತ್ತಿಗೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರದ ನಿರ್ಧಾರವನ್ನು ಖಂಡಿಸಿದುದರ ಕಾರಣ ಹೆಗಡೆಯವರು ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರೂ ಮೂರು ದಿನಗಳ ನಂತರ ಅದನ್ನು ಹಿಂಪಡೆದು ಅಧಿಕಾರದಲ್ಲಿ ಮುಂದುವರೆದರು. ಆದರೆ, 1988 ರ ಆಗಸ್ಟ್ ನಲ್ಲಿ ಕೆಲವು ರಾಜಕಾರಣಿಗಳು ಮತ್ತು ಉದ್ಯಮಿಗಳ ದೂರವಾಣಿಯ ಕದ್ದಾಲಿಕೆಯ ಆರೋಪವು ಹೆಗಡೆಯವರ ಸರ್ಕಾರದ ಮೇಲೆ ಬಂದ ಪರಿಣಾಮ ಆಗಸ್ಟ್ 10 ರಂದು ಹೆಗಡೆಯವರು ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಅಧಿಕಾರದಿಂದ ನಿರ್ಗಮಿಸಿದರು.

ತರುವಾಯ 1989 ರ ಲೋಕಸಭಾ ಚುನಾವಣೆಗಳಲ್ಲಿ ಕೇಂದ್ರದಲ್ಲಿ ವಿ ಪಿ ಸಿಂಗ್ ರವರ ನೇತೃತ್ವದ ಸರ್ಕಾರವು ಅಧಿಕಾರಕ್ಕೆ ಬಂದಾಗ ಹೆಗಡೆಯವರು 1989 ರ ಡಿಸೆಂಬರ್ 5 ರಿಂದ 1990 ರ ಜುಲೈ 6 ರ ವರೆಗೆ ಕೇಂದ್ರ “ಯೋಜನಾ ಆಯೋಗ” ದ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು.

1991 ರಲ್ಲಿ ನಡೆದ ಲೋಕಸಭಾ ಚುನಾವಣೆಗಳಲ್ಲಿ ಹೆಗಡೆಯವರು ಬಾಗಲಕೋಟೆ ಕ್ಷೇತ್ರದಿಂದ ಸ್ಪರ್ಧಿಸಿದರೂ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಸಿದ್ದು ನ್ಯಾಮಗೌಡರವರ ವಿರುದ್ಧ ಪರಾಭವಗೊಂಡರು. 1996 ರ ಏಪ್ರಿಲ್ ನಲ್ಲಿ ಹೆಗಡೆಯವರು ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಗೆ ಆಯ್ಕೆಗೊಂಡು 2002 ರ ಏಪ್ರಿಲ್ ವರೆಗೂ ಸಂಸದರಾಗಿದ್ದರು.

ಏತನ್ಮಧ್ಯೆ 1996 ರ ಲೋಕಸಭಾ ಚುನಾವಣೆಗಳ ನಂತರ ಸಂಭವಿಸಿದ ರಾಜಕೀಯ ಸ್ಥಿತ್ಯಂತರದ ಪರಿಣಾಮ ಜೂನ್ 1 ರಂದು ದೇವೇಗೌಡರು ಅನಿರೀಕ್ಷಿತವಾಗಿ ದೇಶದ ಪ್ರಧಾನಿಯಾಗಿ ಅಧಿಕಾರ ಗದ್ದುಗೆಗೆ ಏರಿದರು. ನಂತರ ನಡೆದ ನಾಟಕೀಯ ರಾಜಕೀಯ ಬೆಳವಣಿಗೆಯೊಂದರಲ್ಲಿ ಅಂದಿನ ಜನತಾದಳದ ರಾಷ್ಟೀಯ ಅಧ್ಯಕ್ಷರಾಗಿದ್ದ ಲಾಲೂ ಪ್ರಸಾದ್ ಯಾದವ್ ರವರು ದೇವೇಗೌಡರ ನಿರ್ದೇಶನದ ಮೇರೆಗೆ ಹೆಗಡೆಯವರನ್ನು ಜನತಾದಳ ಪಕ್ಷದಿಂದ ಉಚ್ಛಾಟಿಸಿದರು.

ತರುವಾಯ ಹೆಗಡೆಯವರು “ಕರ್ನಾಟಕ ನವನಿರ್ಮಾಣ ವೇದಿಕೆ” ಎಂಬ ರಾಜಕೀಯೇತರ ಸಾಮಾಜಿಕ ಸಂಘಟನೆಯನ್ನು ಹುಟ್ಟುಹಾಕಿದರು. ಕ್ರಮೇಣ ಹೆಗಡೆಯವರು ತಮ್ಮದೇ ಆದ “ಲೋಕಶಕ್ತಿ” ಎಂಬ ರಾಜಕೀಯ ಪಕ್ಷವನ್ನು ಸಹ ಸ್ಥಾಪಿಸಿದರು. 1998 ರಲ್ಲಿ ಜರುಗಿದ ಮಧ್ಯoತರ ಲೋಕಸಭಾ ಚುನಾವಣೆಗಳಲ್ಲಿ ಲೋಕಶಕ್ತಿ ಪಕ್ಷವು ಬಿ ಜೆ ಪಿ ಯೊಂದಿಗೆ ಕರ್ನಾಟಕದಲ್ಲಿ ಸ್ಥಾನ ಹೊಂದಾಣಿಕೆ ಮಾಡಿಕೊಂಡ ಪರಿಣಾಮ ಆ ಮೈತ್ರಿಕೂಟವು ಕರ್ನಾಟಕದಲ್ಲಿ ಬಹುತೇಕ ಕ್ಷೇತ್ರಗಳಲ್ಲಿ ಗೆಲುವನ್ನು ಸಾಧಿಸುವಲ್ಲಿ ಯಶಸ್ವಿಯಾಯಿತು.

1998 ರ ಲೋಕಸಭಾ ಚುನಾವಣೆಗಳ ನಂತರ ಕೇಂದ್ರದಲ್ಲಿ ಅಸ್ತಿತ್ವಕ್ಕೆ ಬಂದ ಪ್ರಧಾನಿ ವಾಜಪೇಯಿಯವರ ನೇತೃತ್ವದ ಎನ್ ಡಿ ಎ ಸರ್ಕಾರದಲ್ಲಿ ಹೆಗಡೆಯವರು ವಾಣಿಜ್ಯ ಸಚಿವರಾಗಿ ನಿಯುಕ್ತಿಗೊಂಡು, 1998 ರ ಮಾರ್ಚ್ ನಿಂದ 1999 ರ ಅಕ್ಟೋಬರ್ ವರೆಗೂ ಆ ಹುದ್ದೆಯಲ್ಲಿದ್ದರು.

1999 ರ ಚುನಾವಣೆಗಳ ವೇಳೆಗೆ ಜನತಾದಳ ಪಕ್ಷವು ವಿಭಜನೆಗೊಂಡು ಅಂದಿನ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಜೆ ಎಚ್ ಪಟೇಲರ ಬಣದೊಂದಿಗೆ ಹೆಗಡೆಯವರ ಲೋಕಶಕ್ತಿ ಪಕ್ಷವು ವಿಲೀನಗೊಂಡು “ಸಂಯುಕ್ತ ಜನತಾದಳ” ಎಂಬ ಹೊಸಪಕ್ಷವು ಅಸ್ತಿತ್ವಕ್ಕೆ ಬಂದಿತು. ಆದರೆ ಚುನಾವಣೆಗಳಲ್ಲಿ ಈ ಪಕ್ಷವು ಜನ ಬೆಂಬಲವನ್ನು ಗಳಿಸಲು ವಿಫಲವಾಗಿ ಸೋಲನ್ನು ಅನುಭವಿಸಿದರ ಪರಿಣಾಮ ಜೆ ಎಚ್ ಪಟೇಲರ ಸರ್ಕಾರ ಅಧಿಕಾರದಿಂದ ನಿರ್ಗಮಿಸಿ, ಎಸ್ ಎಂ ಕೃಷ್ಣರವರ ನೇತೃತ್ವದ ಕಾಂಗ್ರೆಸ್ ಸರ್ಕಾರವು ಆಡಳಿತ ಚುಕ್ಕಾಣಿಯನ್ನು ಹಿಡಿಯಿತು.

ಈ ಬೆಳವಣಿಗೆಯ ನಂತರ ಸಕ್ರಿಯ ರಾಜಕೀಯದಿಂದ ಅಂತರ ಕಾಯ್ದುಕೊಂಡ ಹೆಗಡೆಯವರು ಕ್ರಮೇಣ ಸಾರ್ವಜನಿಕ ಜೀವನದ ನೇಪಥ್ಯಕ್ಕೆ ಸರಿದುಹೋದರು. ನಂತರದ ವರ್ಷಗಳಲ್ಲಿ ಧೀರ್ಘ ಕಾಲ ಅನಾರೋಗ್ಯದಿಂದ ಬಳಲಿದ ಹೆಗಡೆಯವರು ತಮ್ಮ 77 ನೇ ವಯಸ್ಸಿನಲ್ಲಿ 2004 ರ ಜನವರಿ 12 ರಂದು ಬೆಂಗಳೂರಿನಲ್ಲಿ ಕೊನೆಯುಸಿರೆಳೆಯುವುದರೊಂದಿಗೆ ವರ್ಣರಂಜಿತ ವಕ್ತಿತ್ವವೊಂದು ಕರ್ನಾಟಕ ರಾಜಕೀಯ ಬಾನಂಗಣದಿಂದ ಮರೆಯಾಗಿಹೋಗಿತ್ತು.

ಹೆಗಡೆಯವರು ಒಬ್ಬ ಮುತ್ಸದ್ಧಿ ಹಾಗೂ ಚಾಣಾಕ್ಷ ರಾಜಕಾರಣಿ ಎಂಬುದರೊಂದಿಗೆ ಒಬ್ಬ ದಕ್ಷ ಮತ್ತು ಸಮರ್ಥ ಆಡಳಿತಗಾರ ಎಂದೂ ಸಹ ಸಾರ್ವಜನಿಕ ವಲಯದಲ್ಲಿ ಗುರುತಿಸಿಕೊಂಡಿದ್ದರು. “ಮರಣ ಮೃದಂಗ” ಮತ್ತು “ ಪ್ರಜಾಶಕ್ತಿ” ಎಂಬ ಚಲನಚಿತ್ರಗಳಲ್ಲಿ ಅಭಿನಯಿಸುವ ಮೂಲಕ ರಾಜಕೀಯ ಕ್ಷೇತ್ರದ ಆಚೆಗೂ ಹೆಗಡೆಯವರು ತಮ್ಮ ಪ್ರತಿಭೆಯನ್ನು ಮೆರೆದಿದ್ದರು.

ಕರ್ನಾಟಕದ ರಾಜಕಾರಣದಲ್ಲಿ ಜೀವರಾಜ್ ಆಳ್ವ, ಅಬ್ದುಲ್ ಸಮದ್ ಸಿದ್ದಿಕ್ಕಿ, ಎಂ ಪಿ ಪ್ರಕಾಶ್, ಪಿ ಜಿ ಆರ್ ಸಿಂಧಿಯ, ಕೆ ಆರ್ ರಮೇಶ್ ಕುಮಾರ್ ಹಾಗೂ ಆರ್ ವಿ ದೇಶಪಾಂಡೆಯವರನ್ನೂ ಒಳಗೊಂಡಂತೆ ಹಲವಾರು ರಾಜಕೀಯ ನಾಯಕರಿಗೆ ಮಾರ್ಗದರ್ಶಕರಾಗಿ ಅವರ ಭವಿಷ್ಯವನ್ನು ರೂಪಿಸುವಲ್ಲಿ ಹೆಗಡೆಯವರು ಮಹತ್ವದ ಪಾತ್ರವನ್ನು ನಿರ್ವಹಿಸಿದರು ಎಂಬುದನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು. ಆದರೆ, ರಾಜಕೀಯ ವಿಪರ್ಯಾಸವೆಂದರೆ ಹೆಗಡೆಯವರ ಕಟ್ಟಾ ಬೆಂಬಲಿಗರೆಂದೇ ಗುರುತಿಸಿಕೊಂಡಿದ್ದ ಈ ನಾಯಕರಲ್ಲಿ ಬಹುತೇಕರು ನಂತರದ ವರ್ಷಗಳಲ್ಲಿ ಕಾಂಗ್ರೆಸ್ ಗೆ ಪಕ್ಷಾoತರಗೊಳ್ಳುವ ಮೂಲಕ ತಮ್ಮ ರಾಜಕೀಯ ಗುರು ಹೆಗಡೆಯವರು ಪ್ರತಿಪಾದಿಸಿದ “ಮೌಲ್ಯಧಾರಿತ ರಾಜಕಾರಣ”ದ ಸಿದ್ಧಾಂತಕ್ಕೆ ತಿಲಾoಜಲಿಯನ್ನಿತ್ತು ರಾಜಕೀಯ ಅಣಕಕ್ಕೆ ಸಾಕ್ಷಿಯಾಗಿದ್ದು ಮಾತ್ರ ಒಂದು ದುರಂತ ಬೆಳವಣಿಗೆ ಎಂದರೆ ತಪ್ಪಾಗಲಾರದು.

ಕರ್ನಾಟಕದ ಪ್ರಪ್ರಥಮ ಕಾಂಗ್ರೆಸ್ಸೇತರ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿ, ರಾಜ್ಯದ ಆಡಳಿತದಲ್ಲಿ ಅಧಿಕಾರ ವಿಕೇಂದ್ರೀಕರಣ, ಭ್ರಷ್ಟಾಚಾರ ನಿಯಂತ್ರಣಕ್ಕೆ ಕಡಿವಾಣ ಹಾಕುವ ಲೋಕಾಯುಕ್ತ ಸಂಸ್ಥೆ ಹಾಗೂ ಕನ್ನಡಕ್ಕೆ ಪ್ರಾಧಾನ್ಯತೆ ನೀಡಲು ಕನ್ನಡ ಕಾವಲು ಸಮಿತಿಗೆ ನಾಂದಿ ಹಾಡುವ ಮೂಲಕ ಸಾರ್ವಜನಿಕ ಕ್ಷೇತ್ರದಲ್ಲಿ ಬದಲಾವಣೆಯ ಗಾಳಿ ಬೀಸುವಂತೆ ಮಾಡಿ, ರಾಜಕೀಯದಲ್ಲಿ ತಮ್ಮ ವಿಶಿಷ್ಟ ಛಾಪು ಮೂಡಿಸಿದ ಮುತ್ಸದ್ಧಿ ನಾಯಕ ದಿವಂಗತ ಶ್ರೀ ರಾಮಕೃಷ್ಣ ಹೆಗಡೆಯವರ 99 ನೇ ವರ್ಷದ ಜನ್ಮದಿನವಾದ ಆಗಸ್ಟ್ 29 ರ ಈ ಸಂದರ್ಭದಲ್ಲಿ ಅವರು ಕರ್ನಾಟಕಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸುವ ಮೂಲಕ ಅವರ ನೆನಪನ್ನು ಮೆಲುಕುಹಾಕೋಣ.

Related Articles

Back to top button