Kannada NewsKarnataka NewsLatest

ನಾಲ್ವರು ದರೋಡೆಕೋರರ ಬಂಧನ; 9 ಲಕ್ಷ ರೂ. ಮೌಲ್ಯದ ವಸ್ತು ಜಪ್ತಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನಾಲ್ಕು ಜನ ಕುಖ್ಯಾತ ದರೋಡೆಕೋರರನ್ನು ಬಂಧಿಸಲು ಯಶಸ್ವಿಯಾಗಿರುವ ಮಾರಿಹಾಳ ಠಾಣೆ ಪೊಲೀಸರು, ಅವರಿಂದ ಒಟ್ಟು ೯ ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ರಾಮಪ್ಪ ಉರ್ಫ್ ರಾಮ ತಂದೆ ಹುಲೆಪ್ಪ ಕರಿಕಾಳಿ (೨೦), ಸಾ. ಚಂದೂರ, ಹಾಲಿ ವಾಲ್ಮೀಕಿ ನಗರ, ಉದ್ಯಮಬಾಗ, ಬಸಪ್ಪ ಉರ್ಫ್ ವಾಂಡ್ ಬಸ್ಯಾ ತಂದೆ ಹುಲೆಪ್ಪ ಕರಿಕಾಳಿ (೨೧), ಸಾ. ಚಂದೂರ, ಹಾಲಿ ವಾಲ್ಮೀಕಿ ನಗರ, ಉದ್ಯಮಬಾಗ, ಸಂತೋಷ ಉರ್ಫ್ ಸಂತ್ಯಾ ತಂದೆ ಮನೋಹರ ಕಾಂಬಳೆ (೨೩), ಸಾ. ಹುಕ್ಕೇರಿ, ಹಾಲಿ ಜೈತುನ ಮಾಳ ಉದ್ಯಮಬಾಗ ಮತ್ತು ಸುನೀಲ ಬಸಪ್ಪ ತೋಟಗಿ (೨೮) ಸಾ. ಹುದಲಿ, ರಾಮೇಶ್ವರ ಗಲ್ಲಿ, ಹಾಲಿ ಚನ್ನಮ್ಮ ನಗರ ಸ್ಟೇಟ್ ಬ್ಯಾಂಕ್ ಹತ್ತಿರ ಬೆಳಗಾವಿ ಇವರೇ ಬಂಧಿತ ಆರೋಪಿಗಳಾಗಿದ್ದಾರೆ.
ದಿ. ೦೮-೧೨-೨೦೧೯ ರಂದು ಮಾರಿಹಾಳ ಪೊಲೀಸ್ ಠಾಣೆ ವ್ಯಾಪ್ತಿಯ ಕಬಲಾಪೂರ ಕ್ರಾಸ್ ಬಳಿಯ ಗೋಕಾಕ-ಬೆಳಗಾವಿ ರಸ್ತೆಯಲ್ಲಿ ಕೆಲ ಆರೋಪಿಗಳು ಜನರನ್ನು ಬೆದರಿಸಿ ಚಿನ್ನಾಭರಣ, ಹಣ ದರೋಡೆ ಮಾಡುತ್ತಿರುವ ಬಗ್ಗೆ ಮಂಜುನಾಥ ಸ್ವಾಮಿ ದೇಗಾವಿಮಠ ಎಂಬುವರು ಮಾರಿಹಾಳ ಠಾಣೆಗೆ ದೂರು ನೀಡಿದ್ದರು. ದೂರಿನ ಹಿನ್ನೆಲೆಯಲ್ಲಿ ತನಿಖೆ ಕೈಗೊಂಡ ಪೊಲೀಸರು ನಿಖರ ಮಾಹಿತಿಯ ಆಧಾರದಲ್ಲಿ ಡಿ.೧೦ ರಂದು ಬೆಳಗಾವಿ-ಗೋಕಾಕ ರಸ್ತೆಯ ಕರಿಕಟ್ಟಿ ಬಸವಣ್ಣ ದೇವಸ್ಥಾನದ ಹತ್ತಿರ ನಾಲ್ಕು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರಿಂದ ೬ ಲಕ್ಷ ೩೬ ಸಾವಿರ ರೂ. ಮೌಲ್ಯದ ಚಿನ್ನಾಭರಣ, ೯೦ ಸಾವಿರ ರೂ. ಮೌಲ್ಯದ ಪಲ್ಸರ್ ಬೈಕ್, ೩೫ ಸಾವಿರ ರೂ. ಮೌಲ್ಯದ ಹಿರೋ ಹೊಂಡಾ ಬೈಕ್, ೩೦ ಸಾವಿರ ರೂ. ಮೌಲ್ಯದ ಹಿರೊ ಹೋಂಡಾ ಪ್ಯಾಶನ್, ೨೯ ಸಾವಿರ ರೂ. ಮೌಲ್ಯದ ಹೀರೊ ಹೊಂಡಾ ಸ್ಪ್ಲೆಂಡರ್, ೩೦ ಸಾವಿರ ರೂ. ಮೌಲ್ಯದ ಯಮಾಹಾ ಬೈಕ್, ೫೦ ಸಾವಿರ ರೂ. ಮೌಲ್ಯದ ಆಟೊ ರಿಕ್ಷಾಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕಬಲಾಪೂರ ಕ್ರಾಸ್ ಬಳಿ ದರೋಡೆ ಪ್ರಕರಣ, ಹೊನ್ನಿಹಾಳ ಕ್ರಾಸ್‌ನಲ್ಲಿ ಮನೆಗಳವು, ತೀರ್ಥಕುಂಡೆಯಲ್ಲಿ ಮನೆಗಳವು, ಮೋದಗಾದಲ್ಲಿ ಮನೆ ಕಳ್ಳತನ, ಉದ್ಯಮಬಾಗದಲ್ಲಿ ಒಂದು ಮೋಟರ್ ಸೈಕಲ್ ಕಳ್ಳತನ, ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ೪ ಮೋಟರ್ ಸೈಕಲ್ ಕಳವು, ಕ್ಯಾಂಪ್ ಪ್ರದೇಶದಲ್ಲಿ ಒಂದು ಆಟೊ ರಿಕ್ಷಾ ಕಳ್ಳತನ ಹೀಗೆ ಒಟ್ಟು ನಾಲ್ಕು ಪೊಲೀಸ್ ಠಾಣೆ ವ್ಯಾಪ್ತಿಯ ೧೦ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವದಾಗಿ ಬಂಧಿತ ಆರೋಪಿಗಳು ವಿಚಾರಣೆ ಸಂದರ್ಭದಲ್ಲಿ ಒಪ್ಪಿಕೊಂಡಿದ್ದಾರೆ.
ಎಸಿಪಿ ಶಿವಾರೆಡ್ಡಿ, ಮಾರಿಹಾಳ ಪಿಐ ವಿಜಯಕುಮಾರ ಸಿನ್ನೂರ, ಪಿಎಸ್‌ಐ ಎಲ್.ಎಸ್. ಕರಿಗೌಡರ, ಎಎಸ್‌ಐ ಬಿ.ಎಸ್. ನಾವಲಗಿ, ಸಿಬ್ಬಂದಿಗಳಾದ ಬಿ.ಎಸ್. ನಾಯಕ, ಬಿ.ಬಿ. ಕಡ್ಡಿ, ಎ.ಎಂ. ಜಮಖಂಡಿ, ಎಂ.ಆರ್. ಸುಲಧಾಳ, ಎಲ್.ವೈ. ಯರಗುದ್ರಿ, ಆರ್.ಎಸ್. ತಳೇವಾಡ ಹಾಗೂ ರಮೇಶ ಅಕ್ಕಿ ಅವರ ತಂಡವು ಆರೋಪಿಗಳನ್ನು ಬಂಧಿಸಲು ಶ್ರಮಿಸಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button