
ಪ್ರಗತಿವಾಹಿನಿ ಸುದ್ದಿ: ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಮಣ್ಣು ಕುಸಿದು ಕಾರ್ಮಿಕರೊಬ್ಬರು ಮೃತಪಟ್ಟಿದ್ದು, ಮತ್ತೊಬ್ಬ ಕಾರ್ಮಿಕ ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿರುವ ಘಟನೆ ಬೆಂಗಳೂರಿನ ಯಲಹಂಕದಲ್ಲಿ ಸಂಭವಿಸಿದೆ.
ಯಲಹಂಕದ ಎಂಬೆಸ್ಸಿ ಗ್ರೂಪ್ ಸಂಸ್ಥೆಯ ಕಟ್ಟಡದಲ್ಲಿ ಈ ಘಟನೆ ನಡೆದಿದ್ದು, ಪಾಯ ಅಗೆಯಲು ಕಾರ್ಮಿಕರು ದೊಡ್ಡದಾದ ಗುಂಡಿಯನ್ನು ತೆಗೆದಿದ್ದರು. ಸೋಮವಾರ ರಾತ್ರಿ ಅನಿರೀಕ್ಷಿತವಾಗಿ ಮಳೆ ಸುರಿದ ಪರಿಣಾಮ ಗುಂಡಿಯಲ್ಲಿ ಮಳೆ ನೀರು ತುಂಬಿಕೊಂಡಿತ್ತು. ಕೂಡಲೇ ಕಾರ್ಮಿಕರು ಹೊರಬರಲು ಯತ್ನಿಸಿದ್ದರು.
ಎಲ್ಲಾ ಕಾರ್ಮಿಕರು ಬಂದರೂ ಇಬ್ಬರು ಮಾತ್ರ ಗುಂಡಿಯಲ್ಲೇ ಇದ್ದ ವೇಳೆ ಮಣ್ಣು ಜರೆದು ಬಿದ್ದಿತ್ತು. ಇದರ ಪರಿಣಾಮ ಇಬ್ಬರು ಮಣ್ಣಿನಡಿ ಸಿಲುಕಿದ್ದರು. ಕೂಡಲೆ ಎಲ್ಲರೂ ಮಣ್ಣನ್ನು ಸರಿಸಿ ಹೊರತೆಗೆಯಲು ಯತ್ನಿಸಿದರಾದರೂ ಅಷ್ಟರಲ್ಲಿ ಓರ್ವ ಮೃತಪಟ್ಟಿದ್ದು, ಮತ್ತೊಬ್ಬನ ಸ್ಥಿತಿ ಚಿಂತಾಜನಕವಾಗಿತ್ತು.
ಮೃತ ವ್ಯಕ್ತಿಯು ಆಂಧ್ರ ಮೂಲದ ವಲಸಿಗ ಕಾರ್ಮಿಕ ಎಂದು ತಿಳಿದುಬಂದಿದ್ದು ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಮತ್ತೋರ್ವ ಕಾರ್ಮಿಕನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಯಲಹಂಕ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.