
ಪ್ರಗತಿವಾಹಿನಿ ಸುದ್ದಿ : ಬಂಗಾಳಕೊಲ್ಲಿಯ ಆಂಧ್ರ ಕರಾವಳಿಯಲ್ಲಿ ವಾಯುಭಾರ ಕುಸಿತದ ಪರಿಣಾಮದಿಂದ ರಾಜ್ಯದಲ್ಲಿ ಸೆಪ್ಟೆಂಬರ್ 15ರ ತನಕ ಹಾಗೂ ದಕ್ಷಿಣ ಒಳನಾಡು ಭಾಗಗಳಲ್ಲಿ ಸೆಪ್ಟೆಂಬರ್ 14ರ ತನಕ ಮಳೆಯ ಮುನ್ಸೂಚನೆ ಇದೆ.
ಹವಾಮಾನ ಇಲಾಖೆಯ ವರದಿ ಪ್ರಕಾರ, ಕರಾವಳಿ, ಮಲೆನಾಡು, ಭಾಗದಲ್ಲಿ ಇಂದು ಹಾಗೂ ನಾಳೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಇನ್ನು ಕೆಲವು ಭಾಗಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಲಿದ್ದು, ಗಾಳಿಯ ವೇಗವು ಹೆಚ್ಚಿರಲಿದೆ.
ಚಿಕ್ಕಮಗಳೂರು, ಕೊಡಗು, ದಾವಣಗೆರೆ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಶಿವಮೊಗ್ಗ ಹಾಸನ, ಕೋಲಾರ, ರಾಮನಗರ, ಮಂಡ್ಯಮೈಸೂರು, ವಿಜಯನಗರ, ತುಮಕೂರು, ಬಳ್ಳಾರಿ, ಬೆಂಗಳೂರು ಗ್ರಾಮೀಣ, ಬೆಂಗಳೂರು, ಚಾಮರಾಜನಗರ ಸೇರಿದಂತೆ ಕೆಲವೆಡೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೆಂಗಳೂರಿನಲ್ಲಿ ಕೆಲವೆಡೆ ಮೋಡ ಕವಿದ ವಾತಾವರಣ ಇದ್ದು ಸಂಜೆಯ ವೇಳೆಗೆ ಉತ್ತಮ ಮಳೆಯಾಗುವ ನಿರೀಕ್ಷೆ ಯಿದೆ. ಆದರೆ ಹವಾಮಾನ ಇಲಾಖೆ ಯಾವುದೇ ಅಲರ್ಟ್ ಘೋಷಣೆ ಮಾಡಿಲ್ಲ.