
ಪ್ರಗತಿವಾಹಿನಿ ಸುದ್ದಿ: ಭ್ರಷ್ಟಾಚಾರ ಮತ್ತು ನಿರುದ್ಯೋಗದಿಂದ ಬೇಸತ್ತ ಯುವ ನೇಪಾಳಿಗಳು ನಡೆಸಿದ ಸಾಮೂಹಿಕ ಪ್ರತಿಭಟನೆಗಳ ನಂತರ ಪ್ರಧಾನಿ ಸ್ಥಾನಕ್ಕೆ ಕೆ.ಪಿ.ಶರ್ಮಾ ಓಲಿ ರಾಜೀನಾಮೆ ನೀಡಿದ ಬಳಿಕ ಮಧ್ಯಂತರ ಸರ್ಕಾರದ ಪ್ರಧಾನಿಯಾಗಿ ನೇಪಾಳದ ಮಾಜಿ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ ಅವರು ಪ್ರಮಾಣವಚನ ಸ್ವೀಕರಿಸಿದ್ದಾರೆ.
ಶುಕ್ರವಾರ ಸಂಜೆ ಶೀತಲ್ ನಿವಾಸದಲ್ಲಿ ರಾಷ್ಟ್ರಪತಿ ರಾಮಚಂದ್ರ ಪೌಡೆಲ್ ಅವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣವಚನ ಬೋಧಿಸಿದರು.
ಅಧ್ಯಕ್ಷ ರಾಮ್ ಚಂದ್ರ ಪೌಡೆಲ್, ನೇಪಾಳ ಸೇನಾ ಮುಖ್ಯಸ್ಥ ಜನರಲ್ ಅಶೋಕ್ ರಾಜ್ ಸಿಗ್ನಲ್ ಮತ್ತು ವಾರದ ಆರಂಭದಲ್ಲಿ ಮಾಜಿ ಪ್ರಧಾನಿ ಕೆ.ಪಿ. ಶರ್ಮಾ ಒಲಿ ಅವರ ರಾಜೀನಾಮೆಗೆ ಕಾರಣವಾದ ಜನರೇಷನ್ ಝಡ್ ಪ್ರತಿಭಟನಾ ಚಳವಳಿಯ ಪ್ರತಿನಿಧಿಗಳ ನಡುವಿನ ಒಮ್ಮತದ ನಂತರ ಪ್ರಧಾನಿ ಸ್ಥಾನಕ್ಕೆ ಕರ್ಕಿ ಅವರ ಹೆಸರನ್ನು ಅಂತಿಮಗೊಳಿಸಲಾಗಿತ್ತು.
ಮುಂದಿನ ಚುನಾವಣೆ ವರೆಗೆ ಉಸ್ತುವಾರಿ ಸರ್ಕಾರವನ್ನು ಮುನ್ನಡೆಸಲು ಕರ್ಕಿ ನೇತೃತ್ವದಲ್ಲಿ ಹಂಗಾಮಿ ಸರ್ಕಾರ ರಚನೆ ಬಗ್ಗೆ ಚರ್ಚೆ ನಡೆದಿತ್ತು. ಕಠ್ಮಂಡು ಮೇಯರ್ ಬಾಲೇಂದ್ರ ಶಾ ಹೆಸರು ಕೂಡ ಕೇಳಿಬಂದಿತ್ತು. ಆದರೆ, ಬಾಲೇಂದ್ರ ಅವರು ಹಂಗಾಮಿ ಪ್ರಧಾನಿ ಹುದ್ದೆಯನ್ನು ವಹಿಸಿಕೊಳ್ಳಲು ಉತ್ಸುಕರಾಗಿರಲಿಲ್ಲ. ಕರ್ಕಿ ಅವರ ಹೆಸರಿಗೆ ತಮ್ಮ ಬೆಂಬಲ ನೀಡಿದ್ದರು.