Karnataka NewsLatestPolitics

*ವಿಶೇಷ ಕ್ಯಾಬಿನೆಟ್‌ನಲ್ಲಿ ಕಾಂಗ್ರೆಸ್ ಸರ್ಕಾರದಿಂದ ಐತಿಹಾಸಿಕ ತೀರ್ಮಾನ: ಸಿಎಂ, ಡಿಸಿಎಂ ಎಲ್ಲಾ ಸಚಿವರಿಗೆ ಧನ್ಯವಾದ ತಿಳಿಸಿದ ಸಚಿವ ತಿಮ್ಮಾಪೂರ*

ಮುಳುಗಡೆ ರೈತರ ನೀರಾವರಿ ಜಮೀನಿಗೆ 40 ಲಕ್ಷ, ಒಣಭೂಮಿಗೆ 30 ಲಕ್ಷ ಘೋಷಣೆ

ಪ್ರಗತಿವಾಹಿನಿ ಸುದ್ದಿ: ಇಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ ಸಂಬಂಧ ನಡೆದ ವಿಶೇಷ ಕ್ಯಾಬಿನೆಟ್‌ನಲ್ಲಿ ಕಾಂಗ್ರೆಸ್ ಸರ್ಕಾರದಿಂದ ಐತಿಹಾಸಿಕ ತೀರ್ಮಾನ ತೆಗೆದುಕೊಳ್ಳಲಾಗಿದ್ದು, ಹಲವು ವರ್ಷಗಳ ಹೋರಾಟಕ್ಕೆ ಪ್ರತಿಫಲ ಸಿಕ್ಕಿದೆ ಎಂದು ಅಬಕಾರಿ ಮತ್ತು ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಆರ್ ಬಿ‌ ತಿಮ್ಮಾಪೂರ ಅವರು ಸಂತಸ ವ್ಯಕ್ತಪಡಿಸಿದರು.

ಕೃಷ್ಣಾ ಮೇಲ್ದಂಡೆ ಯೋಜನೆಯ ಹಿನ್ನೀರಿನಲ್ಲಿ ಮುಳುಗಡೆಯಾಗುವ ನೀರಾವರಿ ಜಮೀನಿಗೆ ಪ್ರತಿ ಎಕರೆಗೆ 40 ಲಕ್ಷ, ಒಣಭೂಮಿಗೆ 30 ಲಕ್ಷ ಕೊಡಬೇಕು ಎಂದು ಬೇಡಿಕೆ ಇಟ್ಟಿದ್ದರು. ಅದರಂತೆ ನಮ್ಮ ಸರ್ಕಾರ ನೀರಾವರಿ ಜಮೀನಿಗೆ 40 ಲಕ್ಷ, ಒಣಭೂಮಿಗೆ 30 ಲಕ್ಷ ಕೊಡಬೇಕು ಎಂದು ಸಚಿವ ಸಂಪುಟದಲ್ಲಿ ತೀರ್ಮಾನ ಮಾಡಲಾಗಿದೆ. ಜೊತೆಗೆ ಕಾಲುವೆ ನೀರ್ಮಾಣಕ್ಕೆ ಭೂಮಿ ಕಳೆದುಕೊಳ್ಳುವ ರೈತರ ನೀರಾವರಿ ಜಮೀನಿಗೆ 30 ಲಕ್ಷ, ಒಣ ಭೂಮಿಗೆ 25 ಲಕ್ಷ ನೀಡಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಸಚಿವ ತಿಮ್ಮಾಪೂರ ಅವರು ಹೇಳಿದರು.

Home add -Advt

ಆಲಮಟ್ಟಿ ಜಲಾಶಯವನ್ನು 519ರಿಂದ 524 ಮೀಟರ್‌ ರವರೆಗೂ ಎತ್ತರಿಸುವುದರಿಂದ 75 ಸಾವಿರಕ್ಕೂ ಹೆಚ್ಚು ಎಕರೆ ಜಮೀನು ಹಿನ್ನೀರಿನಲ್ಲಿ ಮುಳುಗಡೆಯಾಗಲಿದೆ. ಒಂದೇ ಹಂತದಲ್ಲಿ ಭೂಸ್ವಾಧೀನ ಖರೀದಿ ಮೂಲಕ ಸ್ವಾಧೀನಕ್ಕೆ ತೀರ್ಮಾನ ಮಾಡಲಾಗಿದೆ.

ಬೊಮ್ಮಾಯಿ ಸರ್ಕಾರದಲ್ಲಿ ಒಣಭೂಮಿಗೆ 20 ಲಕ್ಷ, ನೀರಾವರಿಗೆ 24 ಲಕ್ಷ ತೀರ್ಮಾನ ಮಾಡಿತ್ತು. ಆದರೆ ರೈತರು ಒಪ್ಪಿರಲಿಲ್ಲ. ಹಾಗಾಗಿ, ರೈತ ಸಂಘಟನೆಗಳು, ಎಲ್ಲಾ ಪಕ್ಷದ ಶಾಸಕರೊಂದಿಗೆ ಉಪ ಮುಖ್ಯಮಂತ್ರಿಗಳು, ಮುಖ್ಯಮಂತ್ರಿಗಳು ಹಲವು ಸಭೆ ನಡೆಸಿ, ಅಭಿಪ್ರಾಯ ಪಡೆದಿದ್ದರು. ಎಲ್ಲರ ಅಭಿಪ್ರಾಯ ಸಂಗ್ರಹಿಸಿ ಇವತ್ತಿನ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಅಂತಿಮ ತೀರ್ಮಾನ ಮಾಡಲಾಗಿದೆ‌. ಇದರಿಂದ ನಮ್ಮ ಭಾಗದ ಜನರಿಗೆ ಸಂತಸ ಆಗಲಿದೆ. ನುಡಿದಂತೆ ನಡೆಯುವುದು ನಮ್ಮ ಕಾಂಗ್ರೆಸ್ ಸರ್ಕಾರ. ಜನರಿಗೆ ನೀಡಿದ್ದ ಭರವಸೆಯಂತೆ ಈಡೇರಿಸಲಾಗುತ್ತಿದೆ‌. ಹುಟ್ಟುಹಬ್ಬದ ದಿನದಂದೇ ನಮ್ಮ ಭಾಗದ ಜನರ ಹೋರಾಟಕ್ಕೆ ಫಲ ಸಿಕ್ಕಿರುವುದು ಮತ್ತಷ್ಟು ನನಗೆ ಸಂತಸ ತಂದಿದೆ ಎಂದು ಸಚಿವ ತಿಮ್ಮಾಪೂರ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Back to top button