*ಮಲಪ್ರಭಾ ಸಕ್ಕರೆ ಕಾರ್ಖಾನೆ ಚುನಾವಣೆ: ಆಖಾಡಕ್ಕಿಳಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್*

ಪ್ರಗತಿವಾಹಿನಿ ಸುದ್ದಿ: ಎಂ.ಕೆ.ಹುಬ್ಬಳ್ಳಿ: ಎಂ.ಕೆ.ಹುಬ್ಬಳ್ಳಿಯ ಮಲಪ್ರಭಾ (ರಾಣಿ ಶುಗರ್ಸ್) ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯ ಚುನಾವಣೆಯ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಶುಕ್ರವಾರ ದಾಸ್ತಿಕೊಪ್ಪ ಗ್ರಾಮದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಪಾಲ್ಗೊಂಡರು.
ಮಲಪ್ರಭಾ ಸಹಕಾರಿ ಕಾರ್ಖಾನೆಯ ಪುನಶ್ಚೇತನ ರೈತರ ಪ್ಯಾನಲ್ ಪರವಾಗಿ ಪ್ರಚಾರ ನಡೆಸಿದ ಅವರು, ಪ್ಯಾನಲ್ ನ ಎಲ್ಲ ಅಭ್ಯರ್ಥಿಗಳಿಗೆ ಬೆಂಬಲ ನೀಡಬೇಕೆಂದು ಷೇರುದಾರರಲ್ಲಿ ಮನವಿ ಮಾಡಿದರು.

ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಗೆ ದಶಕಗಳ ಇತಿಹಾಸವಿದ್ದು, ಕಾರ್ಖಾನೆಗೂ ನಮ್ಮ ಕುಟುಂಬಕ್ಕೂ ಅವಿನಾಭಾವ ಸಂಬಂಧವಿದೆ. ಈ ಕಾರ್ಖಾನೆಯ ಸ್ಥಾಪಕ ನಿರ್ದೇಶಕರಾಗಿ ನಮ್ಮ ಮಾವನವರಾದ ದಿವಂಗತ ಗುರುಸಿದ್ದಪ್ಪ ಹೆಬ್ಬಾಳಕರ್ ಹಾಗೂ ದೊಡ್ಡಪ್ಪನವರಾದ ವೀರಭದ್ರಪ್ಪ ಹಟ್ಟಿಹೊಳಿ ಅವರು ಎರಡು ಬಾರಿ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ, ಜೊತೆಗೆ ಕುಟುಂಬದ ಅನೇಕ ಸದಸ್ಯರೂ ಸಹ ಈ ಕಾರ್ಖಾನೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಇಂತಹ ಕಾರ್ಖಾನೆಯನ್ನು ಸುಸ್ಥಿತಿಗೆ ತಂದು, ರೈತರು ಹಾಗೂ ಕಾರ್ಮಿಕರ ಹಿತ ಕಾಪಾಡಬೇಕಿದೆ. ಸರಕಾರದಿಂದಲೂ ಅಗತ್ಯ ನೆರವು ಪಡೆಯಲಾಗುವುದು. ಹಾಗಾಗಿ ಪುನಶ್ಚೇತನ ಪ್ಯಾನೆಲ್ ನ ಎಲ್ಲ ಅಭ್ಯರ್ಥಿಗಳನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.
ರೈತರಿಂದ ರೈತರಿಗಾಗಿಯೇ ಕಟ್ಟಲ್ಪಟ್ಟ ಕಾರ್ಖಾನೆ ಇದು. ಎಷ್ಟು ಶ್ರಮದಿಂದ ಕಾರ್ಖಾನೆ ಕಟ್ಟಲ್ಪಟ್ಟಿದೆ ಎನ್ನವುದು ನನಗ ಗೊತ್ತಿದೆ. ಈ ಕಾರ್ಖಾನೆಯನ್ನು ಹೀಗೆಯೇ ಬಿಟ್ಟರೆ ಮುಂದೊಂದು ದಿನ ರೈತರಿಗೆ ಕೆಟ್ಟ ಪರಿಸ್ಥಿತಿ ಬರಲಿದೆ ಎಂದು ಕೆಲವರು ನನ್ನ ಮನೆಗೆ ಬಂದು ಹೇಳಿದಾಗ ನಾನು ಜವಾಬ್ದಾರಿ ವಹಿಸಿಕೊಳ್ಳಲು ನಿರ್ಧರಿಸಿದೆ. ಚನ್ನರಾಜ ಹಟ್ಟಿಹೊಳಿ ವಿದ್ಯಾವಂತನಿದ್ದು, ಬುದ್ದಿವಂತನಿದ್ದಾನೆ. ಹಾಗಾಗಿ ಈ ಕಾರ್ಖಾನೆಯನ್ನು ಪುನಶ್ಚೇತನ ಮಾಡೋಣ, ಎಲ್ಲರ ಸಹಕಾರವಿರಲಿ ಎಂದರು,
ಈ ಸಭೆಯಲ್ಲಿ ಚನ್ನಮ್ಮನ ಕಿತ್ತೂರು ಶಾಸಕರಾದ ಬಾಬಾಸಾಹೇಬ್ ಪಾಟೀಲ, ಖಾನಾಪುರ ಶಾಸಕರಾದ ವಿಠ್ಠಲ ಹಲಗೇಕರ್, ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ ಹಟ್ಟಿಹೊಳಿ, ಶ್ರೀಕಾಂತ ನಾಗಪ್ಪ ಇಟಗಿ, ಶಂಕರ ಕಿಲ್ಲೇದಾರ್, ಶ್ರೀಶೈಲ್ ತುರಮರಿ, ರಘು ಪಾಟೀಲ, ರಾಮನಗೌಡ ಪಾಟೀಲ, ಶಿವಪುತ್ರಪ್ಪ ಮರಡಿ, ಸುರೇಶ ಹುಲಿಕಟ್ಟಿ, ಲಲಿತಾ ಪಾಟೀಲ, ಸುನಿತಾ ಲಂಗೂಟಿ, ಫಕೀರಪ್ಪ ಸಕ್ರೆಣ್ಣವರ್, ಶಂಕರೆಪ್ಪ ಹೊಳಿ, ಬಾಳಪ್ಪ ದುರ್ಗಪ್ಪ ಪೂಜಾರ್, ಭರಮಪ್ಪ ಶೀಗಿಹಳ್ಳಿ ಸೇರಿದಂತೆ ಅನೇಕ ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.