
ಪ್ರಗತಿವಾಹಿನಿ ಸುದ್ದಿ: ನಿಂತಿದ್ದ ಟ್ರಾಕ್ಟರ್ ಗೆ ಟಾಟಾ ಏಸ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಾನದಲ್ಲೇ ಸಾವನ್ನಪ್ಪಿದ್ದರೆ, 20ಕ್ಕೂ ಹೆಚ್ಚು ಜನ ಗಾಯಗೊಂಡಿರುವ ಘಟನೆ ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಕಾಕೋಳ ಗ್ರಾಮದ ಬಳಿ ನಡೆದಿದೆ.
ಮೃತರನ್ನು ದಾವಣಗೆರೆ ಜಿಲ್ಲೆ ಮಲೇಬೆನ್ನೂರಿನ ನಿವಾಸಿಗಳಾದ ನಿಂಗಮ್ಮ ಜಿಗಳೇರ್ (70), ಚಮನಸಾಬ್ ಕೆರಿಮತ್ತಿಹಳ್ಳಿ (65), ಮಾಬುಸಾಬ್ ದೊಡ್ಡಗುಬ್ಬಿ (65), ಎಂದು ಗುರುತಿಸಲಾಗಿದೆ. ಯಾವುದೋ ಕಾರ್ಯಕ್ರಮ ಮುಗಿಸಿ ವಾಪಸ್ ಆಗುವಾಗ ಈ ದುರ್ಘಟನೆ ಸಂಭವಿಸಿದೆ.
ಟ್ರಾಕ್ಟರ್ ಟ್ರೈಲರ್ ಹಿಂಬದಿ ಯಾವುದೇ ಲೈಟ್ ಅಥವಾ ರಿಫ್ಲೆಕ್ಟರ್ ಇಲ್ಲದೆ ಇರುವುದರಿಂದ ಕತ್ತಲಲ್ಲಿ ಅದು ಕಾಣಿಸಲ್ಲ. ಪರಿಣಾಮ ವೇಗವಾಗಿ ಬಂದ ಟಾಟಾ ಏಸ್ ರಸ್ತೆ ಬದಿ ನಿಲ್ಲಿಸಲಾಗಿದ್ದ ಟ್ರೈಲರ್ ಗೆ ಗುದ್ದಿದೆ ಎಂದು ತಿಳಿದುಬಂದಿದೆ.
ಸದ್ಯ ಈ ಘಟನೆಗೆ ಸಂಬಂಧಪಟ್ಟಂತೆ ರಾಣೇಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.