*ಕನ್ನೇರಿ ಸ್ವಾಮಿಜಿಗಳಿಗೆ ಕರ್ನಾಟಕ ಪ್ರವೇಶಿಸದಂತೆ ನಿರ್ಬಂಧ ಹೇರಲು ಒತ್ತಾಯ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ; ಕನ್ನೇರಿ ಕಾಡಸಿದ್ದೇಶ್ವರ ಮಠದ ಸ್ವಾಮಿಜಿಗಳು ನೀಡಿರುವ ವಿವಾದಾತ್ಮಕ ಹಾಗೂ ಅವಹೇಳನಕಾರಿ ಹೇಳಿಕೆ ಖಂಡಿಸಿ, ಬಸವಪರ ಸಂಘಟನೆಗಳ ವತಿಯಿಂದ ಕನ್ನೆರಿ ಮಠದ ಸ್ವಾಮಿಗಳಿಗೆ ಬೆಳಗಾವಿ ಸೇರಿದಂತೆ ಕರ್ನಾಟಕ ರಾಜ್ಯ ಪ್ರವೇಶಿಸದಂತೆ ನಿರ್ಬಂಧ ಹೇರಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶುಕ್ರವಾರ ಪ್ರತಿಭಟಿಸಿ, ಜಿಲ್ಲಾಡಳಿತದ ಮೂಲಕ ರಾಜ್ಯ ಸರಕಾರಕ್ಕೆ ಮನವಿ ರವಾನಿಸಲಾಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸೇರಿದ ಪ್ರತಿಭಟನಾಕಾರರು, ಕನ್ನೇರಿ ಕಾಡಸಿದ್ದೇಶ್ವರ ಮಠದ ಸ್ವಾಮಿಜಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಸ್ವಾಮೀಜಿಯವರ ಅವಹೇಳನಕಾರಿ ಹಾಗೂ ಪ್ರಚೋದನಾತ್ಮಕ ಹೇಳಿಕೆ ಸಮಾಜದಲ್ಲಿ ಶಾಂತಿ ಕದಡಿ ಕಾನೂನು ವ್ಯವಸ್ಥೆಗೆ ದಕ್ಕೆ ಬರುವ ಸಂಭವವಿದ್ದು, ಹೀಗಾಗಿ ಕೂಡಲೇ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ವೇಳೆ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಬಸವರಾಜ ರೊಟ್ಟಿ ಅವರು ಮಾತನಾಡಿ, ಇತ್ತೀಚಿಗೆ ಮಹಾರಾಷ್ಟ್ರದ ಬಿಳ್ಳೂರ ಮಠದಲ್ಲಿ ಜರುಗಿದ ಸಮಾರಂಭದಲ್ಲಿ ಕನ್ನೇರಿ ಕಾಡಸಿದ್ದೇಶ್ವರ ಮಠದ ಸ್ವಾಮಿಜಿಗಳು ಬಸವ ಸಂಸ್ಕೃತಿ ಅಭಿಯಾನವನ್ನು ಅಪಮಾನಿಸಿದ್ದಾರೆ. ಅಲ್ಲದೇ, ಲಿಂಗಾಯತ ಮಠಾಧೀಶರ ವಿರುದ್ಧ ಅವಾಚ್ಯ,ಅಶ್ಲೀಲ ಪದ ಬಳಕೆ ಮಾಡಿದ್ದಾರೆ. ಒಬ್ಬ ಸ್ವಾಮೀಜಿಗಳಾಗಿ ಈ ರೀತಿ ಪದ ಬಳಕೆ ಮಾಡಿರುವುದು ಖಂಡನೀಯ. ಇದು ಲಿಂಗಾಯಿತ ಧರ್ಮೀಯರಿಗೆ ಹಾಗೂ ಬಸವಣ್ಣನವರ ಅನುಯಾಯಿಗಳಿಗೆ ನೋವುಂಟು ಮಾಡಿದೆ.ಹೀಗಾಗಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.
ಪ್ರತಿಭಟನೆಯಲ್ಲಿ ಜಾಗತಿಕ ಲಿಂಗಾಯಿತ ಮಹಾಸಭೆಯ ಪ್ರವೀಣ ಚಿಕಲಿ, ಮುರುಗೇಶ ಶಿವಪೂಜಿ, ಮುರಿಗೆಪ್ಪ ಬಾಳಿ, ಲಿಂಗಾಯತ ಸಂಘಟನೆ ಅಧ್ಯಕ್ಷ ಈರಣ್ಣ ದೇಯಣ್ಣವರ, ಲಿಂಗಾಯತ ಕ್ಷೇಮಾಭಿವೃದ್ಧಿ ಸಂಘದ ಎಸ್.ಜಿ.ಸಿದ್ನಾಳ, ಶಂಕರ್ ಗುಡುಸ್, ಆರ್.ಪಿ.ಪಾಟೀಲ್, ಜಾಗತಿಕ ಲಿಂಗಾಯತ ಮಹಾಸಭಾ ಮಹಿಳಾ ಘಟಕದ ಅಧ್ಯಕ್ಷೆ ಪ್ರೇಮಕ್ಕ ಅಂಗಡಿ ಸೇರಿದಂತೆ ಇತರರು ಇದ್ದರು.
ನಾಗನೂರು ಭಕ್ತರಿಂದ ಮನವಿ
ನಾಗನೂರಿಯಿಂದ ಹಲವು ವಾಹನಗಳಲ್ಲಿ ಆಗಮಿಸಿದ ನೂರಾರು ಬಸವ ಭಕ್ತರು ಪ್ರತ್ಯೇಕವಾಗಿ ಮನವಿ ಸಲ್ಲಿಸಿದರು.