
ಪ್ರಗತಿವಾಹಿನಿ ಸುದ್ದಿ: ಬಿಬಿಎ ವಿದ್ಯಾರ್ಥಿನಿಯೊಬ್ಬಳು ಪಿಜಿಯಲ್ಲಿಯೇ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬಾಗಲೂರಿನಲ್ಲಿ ನಡೆದಿದೆ.
ಬೆಂಗಳೂರು ಹೊರವಲಯದ ಬಾಗಲೂರಿನ ಖಾಸಗಿ ಕಾಲೇಜು ಪಿಜಿಯಲ್ಲಿ ವಿದ್ಯಾರ್ಥಿನಿ ಸಾವಿಗೆ ಶರಣಾಗಿದ್ದಾಳೆ. ಸನಾ ಪರ್ವಿನ್ (೧೯) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ.
ಸೀನಿಯರ್ ವಿದ್ಯಾರ್ಥಿಯೊಬ್ಬ ಸನಾಳಿಗೆ ಕಿರುಕುಳ ನೀಡುತ್ತಿದ್ದ. ತನ್ನನ್ನು ಪ್ರೀತಿಸುವಂತೆ ಒತ್ತಾಯಿಸುತ್ತಿದ್ದ. ಇದೇ ಕಾರಣಕ್ಕೆ ಮನನೊಂದಿದ್ದ ಸನಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆಕೆಯ ಪೋಷಕರು ಆರೋಪಿಸಿದ್ದಾರೆ.
ಸನಾ ಮಡಿಕೇರಿ ಮೂಲದ ಯುವತಿಯಾಗಿದ್ದು, ಕೇರಳ ಮೂಲದ ವಿದ್ಯಾರ್ಥಿಯೊಬ್ಬ ಪಿಜಿ ಹಾಗೂ ಕಾಲೇಜು ಬಳಿ ಬಂದು ಸನಾಳಿಗೆ ಸತಾಯಿಸುತ್ತಿದ್ದ. ಕಳೆದ ಹತ್ತು ತಿಂಗಳಿಂದ ಕಿರುಕುಳ ನೀಡುತ್ತಿದ್ದ. ಅಸಭ್ಯ ಮೆಸೇಜ್ ಗಳನ್ನು ಕಳುಹಿಸುತ್ತಿದ್ದ ಎಂದು ಸನಾ ಪೋಷಕರು ಆರೋಪಿಸಿದ್ದಾರೆ. ಸನಾ ಆತ್ಮಹತ್ಯೆ ಕುರಿತು ಬಾಗಲೀರು ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.