*ಯಾವುದೇ ಸಂಘ, ಸಂಸ್ಥೆ ಬ್ಯಾನ್ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ: ಎಚ್.ಕೆ.ಪಾಟೀಲ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಯಾವುದೇ ಸಂಘ, ಸಂಸ್ಥೆ ಮತ್ತು ಸಂಘಟನೆಗಳನ್ನು ಬ್ಯಾನ್ ಮಾಡುವ ಪ್ರಸ್ತಾವನೆ ಮತ್ತು ಚಿಂತನೆ ನಮ್ಮ ಸರ್ಕಾರದ ಮುಂದಿಲ್ಲ ಎಂದು ರಾಜ್ಯದಲ್ಲಿ ಆರ್.ಎಸ್.ಎಸ್. ಬ್ಯಾನ್ ವಿಚಾರಕ್ಕೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ ಪ್ರತಿಕ್ರಿಯೆ ನೀಡಿದರು.
ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಆರ್.ಎಸ್.ಎಸ್. ಸಂಘಟನೆ ರಜಿಸ್ಟರ್ ಆಗಿಲ್ಲ. ಹಾಗಾಗಿ, ಅದನ್ನು ಬ್ಯಾನ್ ಮಾಡಬೇಕೆಂಬ ಬಿ.ಕೆ.ಹರಿಪ್ರಸಾದ ಹೇಳಿಕೆ ಕುರಿತು ಬೆಳಗಾವಿಯಲ್ಲಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ, ಬಿ.ಕೆ.ಹರಿಪ್ರಸಾದ ಅವರ ಅಭಿಪ್ರಾಯದ ಬಗ್ಗೆ ಅವರನ್ನೆ ನೀವು ಕೇಳಬೇಕು. ನಮ್ಮ ಸರ್ಕಾರದ ಮುಂದೆ ಅಂತಹ ಯಾವುದೇ ಚಿಂತನೆ ಇಲ್ಲ ಎಂದು ಎಚ್.ಕೆ.ಪಾಟೀಲ ಪುನರುಚ್ಚರಿಸಿದರು.
ಪ್ರತಿ ವರ್ಷ ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನ ನಡೆಸುವುದು ಪದ್ಧತಿಯಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಸಿದ್ಧತೆ ಕೈಗೊಳ್ಳಲಾಗುವುದು. ಔಪಚಾರಿಕ ನಿರ್ಧಾರ ತೆಗೆದುಕೊಂಡಿಲ್ಲ. ಅಲ್ಲದೇ ಇನ್ನೂ ದಿನಾಂಕ ಕೂಡ ನಿಗದಿ ಆಗಿಲ್ಲ. ಆದರೆ, ಪದ್ಧತಿಯಂತೆ ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನ ಮಾಡುವುದು ಸರ್ಕಾರದ ಚಿಂತನೆ ಆಗಿದೆ ಎಂದರು.
ನವೆಂಬರ್ 1ರಂದು ಭುವನೇಶ್ವರಿ ದೇವಿಯನ್ನು ಗೌರವಿಸುತ್ತಾ, ಕರ್ನಾಟಕ ಏಕೀಕರಣ ಆಗಿರುವುದನ್ನು ವೈಭವದಿಂದ ಆಚರಣೆ ಮಾಡುವುದು ಕರ್ನಾಟಕದಲ್ಲಿರುವ ಎಲ್ಲರ ಕರ್ತವ್ಯವಾಗಿದೆ. ಆ ಕೆಲಸವನ್ನು ದಯವಿಟ್ಟು ಎಲ್ಲರೂ ಮಾಡಬೇಕು. ಅವತ್ತು ಭುವನವೇಶ್ವರಿ ಮೆರವಣಿಗೆ, ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮಗಳಿಗೆ ಎಲ್ಲರೂ ಸಹಕರಿಸಬೇಕು ಎಂದು ಎಚ್.ಕೆ.ಪಾಟೀಲ ಹೇಳಿದರು.
ಒಂದು ವೇಳೆ ಎಂಇಎಸ್ ಈ ಬಾರಿಯೂ ಕರಾಳ ದಿನ ಆಚರಿಸಿದರೆ ಸರ್ಕಾರ ಯಾವ ರೀತಿ ಕ್ರಮ ಕೈಗೊಳ್ಳುತ್ತದೆ ಎಂಬ ವಿಚಾರಕ್ಕೆ ಆ ಸಂದರ್ಭದಲ್ಲಿ ಜಿಲ್ಲಾಡಳಿತ ತನ್ನ ಸೂಕ್ತ ನಿಲುವು ತೆಗೆದುಕೊಳ್ಳಲಿದೆ ಎಂದು ಎಚ್.ಕೆ.ಪಾಟೀಲ ಸ್ಪಷ್ಟಪಡಿಸಿದರು.