*ವಿದ್ಯಾರ್ಥಿಯನ್ನು ಒದ್ದು, ಹಲ್ಲೆ ನಡೆಸಿದ ಶಿಕ್ಷಕನ ವಿರುದ್ಧ ಕಠಿಣ ಕ್ರಮ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ*

ಪ್ರಗತಿವಾಹಿನಿ ಸುದ್ದಿ: ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿ, ಕಾಲಿನಿಂದ ಒದ್ದ ಶಿಕ್ಷಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸೂಚಿಸಿರುವುದಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಲಕ್ಷ್ಮೀ ಹೆಬ್ಬಾಳಕ ತಿಳಿಸಿದ್ದಾರೆ.
ಖಾಸಗಿ ಸುದ್ದಿವಾಹಿನಿಯೊಂದಿಗೆ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಚಿತ್ರದುರ್ಗದಲ್ಲಿ 9 ವರ್ಷದ ವಿದ್ಯಾರ್ಥಿಗೆ ಶಿಕ್ಷಕ ಕಾಲಿನಿಂದ ಒದ್ದು, ಹಲ್ಲೆ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಶಿಕ್ಷಕನಾದವನು ಈ ರೀತಿ ವರ್ತಿಸಿದರೆ ಹೇಗೆ? ಇಂತಹ ಶಿಕ್ಷಕರನ್ನು ಸುಮ್ಮನೇ ಬಿಡುವ ಪ್ರಶ್ನೆ ಇಲ್ಲ. ವರದಿ ತರಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.
ವಿದ್ಯಾರ್ಥಿಯ ಮೇಲೆ ಶಿಕ್ಷಕ ರಾಕ್ಷನಂತೆ ವರ್ತಿಸಿದ್ದಾನೆ. ಇಂತಹ ವರ್ತನೆ ಖಂಡನೀಯ. ಅಮಾನುಷವಾಗಿ ನಡೆದುಕೊಂಡ ಶಿಕ್ಷಕನಿಗೆ ತಕ್ಕ ಶಾಸ್ತಿಯಾಗಲಿದೆ. ಅಲ್ಲದೇ ಮಕ್ಕಳ ಮೇಲೆ ಹಲ್ಲೆ ನಡೆಸುವಂತಹ ಶಿಕ್ಷಕರು ಯಾರೇ ಆಗಲಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಗ್ರಾಮದಲ್ಲಿ ಸಂಸ್ಕೃತ ವೇದ ಅಧ್ಯಯನ ಶಾಲಾ ಮುಖ್ಯ ಶಿಕ್ಷಕ 9ನೇ ತರಗತಿ ವಿದ್ಯಾರ್ಥಿಗೆ ಕಾಲಿನಿಂದ ಒದ್ದು ಕ್ರೌರ್ಯ ಮೆರೆದಿದ್ದ. ಶಿಕ್ಷಕ ವೀರೇಶ್ ಹಿರೇಮಠ ಎಂಬಾತ ವಿದ್ಯಾರ್ಥಿ, ಅಜ್ಜಿಗೆ ಫೋನ್ ಮಾಡಿದ್ದಕ್ಕೆ ಆತನನ್ನು ಪದೇ ಪದೇ ಒದ್ದು ಮನಸೋ ಇಚ್ಛೆ ಹಲ್ಲೆ ನಡೆಸಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನಾಯಕನಹಟ್ಟಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.