*ಜಮ್ಮು ಮತ್ತು ಕಾಶ್ಮೀರದಲ್ಲಿ ಮೊದಲ ಬಾರಿಗೆ ನಡೆದ ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ*

ಪ್ರಗತಿವಾಹಿನಿ ಸುದ್ದಿ: ಸಂವಿಧಾನದ 370ನೇ ವಿಧಿಯಡಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ಹಿಂಪಡೆದ ಬಳಿಕ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಿಂದ ರಾಜ್ಯಸಭೆಯ ಸ್ಥಾನಗಳಿಗೆ ಮೊದಲ ಚುನಾವಣೆ ನಡೆದಿದೆ.
ಈ ಚುನಾವಣೆಯಲ್ಲಿ ಮೂರು ಸ್ಥಾನಗಳು ‘ಇಂಡಿಯಾ’ ಮೈತ್ರಿಕೂಟದ ನ್ಯಾಷನಲ್ ಕಾನ್ನರೆನ್ಸ್ (ಎನ್‌ಸಿ) ಪಕ್ಷದ ಪಾಲಾಗಿದ್ದು, ಒಂದು ಸ್ಥಾನ ಬಿಜೆಪಿ ಖಾತೆಗೆ ಸೇರಿದೆ.
ಆಡಳಿತಾರೂಢ ನ್ಯಾಷನಲ್ ಕಾನ್ನರೆನ್ಸ್ (ಎನ್‌ಸಿ) ಅಭ್ಯರ್ಥಿಗಳಾದ ಚೌಧರಿ ಮೊಹಮ್ಮದ್ ರಂಜಾನ್, ಸಜಾದ್ ಕಿಚ್ಚ ಮತ್ತು ಜಿ.ಎಸ್. ಓಬೆರಾಯ್ (ಪಕ್ಷದ ಖಜಾಂಚಿ) ಜಯಗಳಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಸತ್ ಶರ್ಮಾ 32 ಮತಗಳನ್ನು ಪಡೆಯುವ ಮೂಲಕ ನಾಲ್ಕನೇ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ. ಎನ್‌ಸಿಯ ಮತ್ತೊಬ್ಬ ಅಭ್ಯರ್ಥಿ ಇಮ್ರಾನ್ ನಬಿದಾರ್ ಅವರಿಗೆ ಕೇವಲ 22 ಮತಗಳು ಮಾತ್ರ ಲಭಿಸಿವೆ.
ರಂಜಾನ್ ಮತ್ತು ಕಿಚೂ ಅವರ ಗೆಲುವು ನಿರೀಕ್ಷಿತವಾಗಿತ್ತು. ಏಕೆಂದರೆ ಎನ್‌ಸಿ ಬಳಿ 41 ಶಾಸಕರು ಇದ್ದರೆ, ಕಾಂಗ್ರೆಸ್‌ನ ಆರು, ಪಿಡಿಪಿಯ ಮೂವರು, ಸಿಪಿಐ(ಎಂ)ನ ಒಬ್ಬ ಹಾಗೂ ಕೆಲವು ಸ್ವತಂತ್ರ ಸದಸ್ಯರು ಸೇರಿ ಒಟ್ಟು 58 ಶಾಸಕರ ಬೆಂಬಲವಿತ್ತು.
ಒಟ್ಟು 88 ಸದಸ್ಯರ ವಿಧಾನಸಭೆಯಲ್ಲಿ ಬಿಜೆಪಿ 28 ಶಾಸಕರನ್ನು ಹೊಂದಿದ್ದರೂ, 32 ಮತಗಳನ್ನು ಪಡೆಯುವ ಮೂಲಕ ನಾಲ್ಕನೇ ಸ್ಥಾನ ಗೆದ್ದಿರುವುದು ಅಡ್ಡಮತದಾನಕ್ಕೆ ಸಾಕ್ಷಿಯಾಗಿದೆ.


